ನವದೆಹಲಿ: ನಾಸಾ ಬೆಂಬಲಿತ ಖಾಸಗಿ ಯುಎಸ್ ಕಂಪನಿ ಇಂಟ್ಯೂಟಿವ್ ಮಶೀನ್ಸ್ (Intuitive Machines) ಫೆಬ್ರವರಿ 14 ರಂದು (ವ್ಯಾಲೆಂಟೈನ್ಸ್ ಡೇ) ಸ್ಪೇಸ್ ಎಕ್ಸ್ನ ಫಾಲ್ಕನ್ 9 ರಾಕೆಟ್ ಮೂಲಕ ಚಂದ್ರನತ್ತ ಲ್ಯಾಂಡರ್ ಉಡಾವಣೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ನಾಸಾ ಬೆಂಬಲಿತ ಮತ್ತೊಂದು ಕಂಪನಿ ಆಸ್ಟ್ರೋಬಯೋಟಿಕ್ ಟೆಕ್ನಾಲಜಿಯ ಲೂನಾರ್ ಲ್ಯಾಂಡರ್ ಕಳೆದ ತಿಂಗಳು ಇಂಧನ ಸೋರಿಕೆಯ ಸಮಸ್ಯೆಗೆ ಒಳಗಾಗಿ ಚಂದ್ರನ ಮೇಲೆ ಇಳಿಯಲು ಸಾಧ್ಯವಾಗಿರಲಿಲ್ಲ. ಅದರ ನಂತರ ಈಗ ಮತ್ತೊಂದು ಕಂಪನಿ ಚಂದ್ರನತ್ತ ಉಪಗ್ರಹ ಹಾರಿಸಲು ಸಜ್ಜಾಗಿದೆ.
ಹ್ಯೂಸ್ಟನ್ ಮೂಲದ ಐಎಂ-1 ಲೂನಾರ್ ಲ್ಯಾಂಡರ್ ಫೆಬ್ರವರಿ 14ರಂದು ಬೆಳಗ್ಗೆ 12:57ಕ್ಕೆ ಫ್ಲೋರಿಡಾದ ಕೇಪ್ ಕೆನವೆರಲ್ ಬಾಹ್ಯಾಕಾಶ ಪಡೆ ನಿಲ್ದಾಣದಿಂದ ಫಾಲ್ಕನ್ 9 ರಾಕೆಟ್ ಮೂಲಕ ನಭಕ್ಕೆ ಚಿಮ್ಮಲಿದೆ. ಐಎಂ-1 ಲೂನಾರ್ ಲ್ಯಾಂಡರ್ಗೆ ನೋವಾ-ಸಿ ಲ್ಯಾಂಡರ್ ಎಂದು ಹೆಸರಿಡಲಾಗಿದೆ.
ಎಲ್ಲವೂ ಅಂದುಕೊಂಡಂತೆ ನಡೆದು ಫೆಬ್ರವರಿ 22ರಂದು ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆದಲ್ಲಿ, ಇದು ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಮೊದಲ ಖಾಸಗಿ ಬಾಹ್ಯಾಕಾಶ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
"ನಾವು ಚಂದ್ರನತ್ತ ನಮ್ಮ ಐಎಂ -1 ಮಿಷನ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ತಂಡದ ಪ್ರತಿಯೊಬ್ಬರೂ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ದಣಿವರಿಯದ ಪ್ರಯತ್ನಗಳು ನಮ್ಮನ್ನು ಈ ಕ್ಷಣಕ್ಕೆ ಕರೆತಂದಿವೆ." ಎಂದು ಇಂಟ್ಯೂಟಿವ್ ಮಶೀನ್ಸ್ಅಧ್ಯಕ್ಷ ಮತ್ತು ಸಿಇಒ ಸ್ಟೀವ್ ಆಲ್ಟೆಮಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಮಿಷನ್ ಯಶಸ್ವಿಯಾದರೆ ಸುಮಾರು 50 ವರ್ಷಗಳ ನಂತರ ಅಮೆರಿಕ ಮತ್ತೊಮ್ಮೆ ಚಂದ್ರನ ಮೇಲೆ ಕಾಲಿಟ್ಟ ಇತಿಹಾಸ ಬರೆಯಲಿದೆ. ಡಿಸೆಂಬರ್ 1972ರಲ್ಲಿ ಅಪೊಲೊ 17ರ ನಂತರ ಯುಎಸ್ ಚಂದ್ರನ ಮೇಲೆ ಇಳಿಯಲು ಪ್ರಯತ್ನಿಸಿಲ್ಲ.
ನಾಸಾದ ಆರ್ಟೆಮಿಸ್ ಹೆಸರಿನ ಚಂದ್ರನ ಸಂಶೋಧನಾ ಯೋಜನೆಯ ಪ್ರಮುಖ ಭಾಗವಾದ ನಾಸಾ ಕಮರ್ಷಿಯಲ್ ಲೂನಾರ್ ಪೇಲೋಡ್ ಸರ್ವೀಸಸ್ (ಸಿಎಲ್ಪಿಎಸ್) ಉಪಕ್ರಮದ ಅಡಿಯಲ್ಲಿ ಐಎಂ -1 ಮಿಷನ್ ಇದು ಇಂಟ್ಯೂಟಿವ್ ಮಶೀನ್ಸ್ ಕಂಪನಿಯ ಮೊದಲ ಚಂದ್ರನ ಮೇಲಿನ ಲ್ಯಾಂಡಿಂಗ್ ಪ್ರಯತ್ನವಾಗಿದೆ. ಸಿಎಲ್ಪಿಎಸ್ ಭಾಗವಾಗಿ ಚಂದ್ರನ ಮೇಲ್ಮೈಗೆ ಕಳುಹಿಸಲಾಗುವ ವಿಜ್ಞಾನ ಮತ್ತು ತಂತ್ರಜ್ಞಾನ ಪೇಲೋಡ್ಗಳು ಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವನನ್ನು ಇಳಿಸುವ ಮತ್ತು ಚಂದ್ರನ ಮೇಲ್ಮೈಯಲ್ಲಿ ಮಾನವರ ವಾಸಕ್ಕೆ ಅಗತ್ಯವಾದ ಸಂಶೋಧನೆಗಳಿಗೆ ನೆರವಾಗಲಿವೆ.
ಇದನ್ನೂ ಓದಿ: ಟಾಪ್ -5 ಸ್ಮಾರ್ಟ್ಫೋನ್ ಬ್ರಾಂಡ್ ಆದ ರಿಯಲ್ ಮಿ: 17.4 ಮಿಲಿಯನ್ ಫೋನ್ಗಳ ಮಾರಾಟ