ನವದೆಹಲಿ: ಬೆಳೆ ಇಳುವರಿಯನ್ನು ಹೆಚ್ಚಿಸಲು ನೆರವಾಗುವಂಥ ಮಣ್ಣಿನ ರೀತಿಯ ಪರಿಸ್ಥಿತಿಗಳನ್ನು ನಿರ್ಮಿಸಲು ಕಡಿಮೆ ವೆಚ್ಚದ ಮೈಕ್ರೋಫ್ಲೂಯಿಡಿಕ್ ವ್ಯವಸ್ಥೆಯೊಂದನ್ನು ಗುವಾಹಟಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ ಎಂದು ಸಂಸ್ಥೆ ಸೋಮವಾರ ತಿಳಿಸಿದೆ. ಸುಧಾರಿತ ಬೇರಿನ ಬೆಳವಣಿಗೆ ಮತ್ತು ಸಾರಜನಕ ಹೀರಿಕೊಳ್ಳಲು ಸಾಧ್ಯವಾಗುವಂತೆ ಪೋಷಕಾಂಶಗಳ ಹರಿವು ಹೆಚ್ಚಿಸಲು ಈ ಆವಿಷ್ಕಾರವು ಸಹಾಯ ಮಾಡುತ್ತದೆ.
ನೀರು ಮತ್ತು ಪೋಷಕಾಂಶಗಳನ್ನು ಹೀರಿಕೊಳ್ಳುವ ಮೂಲಕ ಮೊಳಕೆಯೊಡೆಯುವ ಬೀಜದ ಪ್ರಾಥಮಿಕ ಬೇರು ಸಸ್ಯದ ಲಂಗರ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಬೇರು ತನ್ನ ಆರಂಭಿಕ ಬೆಳವಣಿಗೆಯ ಸಮಯದಲ್ಲಿ ವಿವಿಧ ಮಣ್ಣಿನ ಪರಿಸ್ಥಿತಿಗಳನ್ನು ದಾಟಬೇಕಾಗುತ್ತದೆ. ಇದು ಸಸ್ಯದ ಉಳಿವಿಗೆ ನಿರ್ಣಾಯಕವಾಗಿದೆ. ಪೋಷಕಾಂಶಗಳ ಪೂರೈಕೆ, pH ಮಟ್ಟಗಳು, ಮಣ್ಣಿನ ಸಂಯೋಜನೆ, ಗಾಳಿ ಮತ್ತು ತಾಪಮಾನ ಇವೆಲ್ಲವೂ ಬೇರಿನ ಬೆಳವಣಿಗೆಯ ಮೇಲೆ ಗಮನಾರ್ಹ ಪ್ರಭಾವ ಬೀರುತ್ತವೆ.
ಆದಾಗ್ಯೂ, ಸಾಂಪ್ರದಾಯಿಕ ಪ್ರಾಯೋಗಿಕ ನಿರ್ಬಂಧಗಳಿಂದಾಗಿ ರೂಟ್ ಡೈನಾಮಿಕ್ಸ್ ಅಧ್ಯಯನ ಮಾಡುವುದು ಕಷ್ಟಕರವಾಗಿದೆ. ಇದಕ್ಕೆ ಆಗಾಗ ದೊಡ್ಡ ಕಂಟೇನರ್ಗಳು ಮತ್ತು ಸಂಕೀರ್ಣ ನಿರ್ವಹಣೆಯ ಅಗತ್ಯವಿರುತ್ತದೆ.
ಏನಿದು ಮೈಕ್ರೋಫ್ಲೂಯಿಡಿಕ್ಸ್?:ಪ್ರಾಥಮಿಕ ಬೇರುಗಳು ಪೋಷಕಾಂಶಗಳನ್ನು ಹೇಗೆ ಹೀರಿಕೊಳ್ಳುತ್ತವೆ ಎಂಬುದನ್ನು ಅಧ್ಯಯನ ಮಾಡಲು ತಂಡವು ಮೈಕ್ರೋಫ್ಲೂಯಿಡಿಕ್ಸ್ ಅನ್ನು ಬಳಸಿದೆ. ಇದು ಕೃಷಿಯಲ್ಲಿ ಪೋಷಕಾಂಶ ವಿತರಣೆಯನ್ನು ಉತ್ತಮಗೊಳಿಸುವ ವಿಧಾನಗಳ ಬಗ್ಗೆ ತಿಳಿವಳಿಕೆ ನೀಡುತ್ತದೆ. ಈ ಸಂಶೋಧನಾ ವರದಿಯನ್ನು ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನಾ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಬೆಂಬಲಿಸಿದೆ ಮತ್ತು ಲ್ಯಾಬ್ ಆನ್ ಎ ಚಿಪ್ ಜರ್ನಲ್ ನಲ್ಲಿ ಇದನ್ನು ಪ್ರಕಟಿಸಲಾಗಿದೆ.
ಪೂಸಾ ಜೈ ಕಿಸಾನ್ ಪ್ರಮುಖವಾಗಿ ಅಧ್ಯಯನ:ಸಂಶೋಧನೆಯು ಹೆಚ್ಚಿನ ಇಳುವರಿ ನೀಡುವ ಸಾಸಿವೆ ಪ್ರಭೇದವಾದ ಪೂಸಾ ಜೈ ಕಿಸಾನ್ ಮೇಲೆ ಮುಖ್ಯವಾಗಿ ಅಧ್ಯಯನ ನಡೆಸಿದ್ದು, ವಿಭಿನ್ನ ಪೋಷಕಾಂಶಗಳ ಹರಿವು ಬೇರಿನ ಬೆಳವಣಿಗೆ ಮತ್ತು ಸಾರಜನಕದ ಹೀರಿಕೊಳ್ಳುವಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ಮಾಡಿದೆ. ಸೂಕ್ತವಾದ ಪೋಷಕಾಂಶಗಳ ಹರಿವಿನ ದರವು ಬೇರಿನ ಉದ್ದ ಮತ್ತು ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ. ಆದರೆ ಅತಿಯಾದ ಹರಿವು ಬೇರುಗಳಿಗೆ ಒತ್ತಡವನ್ನುಂಟು ಮಾಡುತ್ತದೆ ಮತ್ತು ಅವುಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ ಎಂಬುದು ಸಂಶೋಧನೆಗಳಲ್ಲಿ ಕಂಡು ಬಂದಿದೆ. ಸಸ್ಯದ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ನಿರ್ದಿಷ್ಟ ಪೋಷಕಾಂಶಗಳ ಹರಿವಿನ ಮಹತ್ವವನ್ನು ಅಧ್ಯಯನವು ಎತ್ತಿ ತೋರಿಸಿದೆ.
"ನಮ್ಮ ಅಧ್ಯಯನವು ಮೈಕ್ರೋಫ್ಲೂಯಿಡಿಕ್ ಸಾಧನಗಳನ್ನು ಬಳಸಿಕೊಂಡು ಸಸ್ಯ ಬೇರು ಚಲನಶಾಸ್ತ್ರದ ಬಗ್ಗೆ ಹೊಸ ಒಳನೋಟಗಳನ್ನು ಒದಗಿಸುತ್ತದೆ, ಕೃಷಿಗೆ ಪ್ರಾಯೋಗಿಕ ಪ್ರಯೋಜನಗಳನ್ನು ನೀಡುತ್ತದೆ" ಎಂದು ಐಐಟಿ ಗುವಾಹಟಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರಣಬ್ ಕುಮಾರ್ ಮೊಂಡಲ್ ಹೇಳಿದರು.
ಇದನ್ನೂ ಓದಿ : ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತದ ಗಗನಯಾತ್ರಿ: ಇಸ್ರೊ & ನಾಸಾ ಜಂಟಿ ಒಪ್ಪಂದ - Gaganyaan mission