ನವದೆಹಲಿ: ದೇಶದ ಜಲವಿದ್ಯುತ್ ಉತ್ಪಾದನಾ ಸಾಮರ್ಥ್ಯವು 2031-32 ರ ವೇಳೆಗೆ ಈಗಿರುವ 42 ಗಿಗಾವ್ಯಾಟ್ ನಿಂದ 67 ಗಿಗಾವ್ಯಾಟ್ ಗೆ ಅಂದರೆ ಶೇ 50ರಷ್ಟು ಹೆಚ್ಚಾಗಲಿದೆ ಎಂದು ಇಂಧನ ಸಚಿವಾಲಯ ತಿಳಿಸಿದೆ. ಪ್ರಸ್ತುತ ದೇಶದಲ್ಲಿ ಒಟ್ಟು 15 ಗಿಗಾವ್ಯಾಟ್ ಸಾಮರ್ಥ್ಯದ ಜಲವಿದ್ಯುತ್ ಯೋಜನೆಗಳು ನಿರ್ಮಾಣ ಹಂತದಲ್ಲಿವೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಇದಲ್ಲದೆ, ಹಿಮಾಲಯ ಪ್ರದೇಶದಲ್ಲಿರುವ ಜಲವಿದ್ಯುತ್ ಯೋಜನೆಗಳು ಕರಗುವ ಹಿಮದಿಂದ ನೀರಿನ ಹರಿವನ್ನು ಪಡೆಯುತ್ತವೆ ಮತ್ತು ತಾಪಮಾನ ಏರಿಕೆಯಾದಲ್ಲಿ ಈ ನೀರಿನ ಹರಿವು ಹೆಚ್ಚಾಗಲಿದೆ. ಈ ಎಲ್ಲ ಕಾರಣಗಳಿಂದಲೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಜಲವಿದ್ಯುತ್ ಉತ್ಪಾದನೆ ಹೆಚ್ಚಳವಾಗುವ ಆಶಾಭಾವನೆಯನ್ನು ಸಚಿವಾಲಯ ವ್ಯಕ್ತಪಡಿಸಿದೆ.
ಇದಲ್ಲದೆ ದೇಶದಲ್ಲಿ ನಡೆಯುತ್ತಿರುವ ಇಂಧನ ಪರಿವರ್ತನೆಗಳನ್ನು ಗಮನಿಸಿದರೆ, ಗ್ರಿಡ್ಗೆ ಹೆಚ್ಚಿನ ಸ್ಥಿರತೆ ಮತ್ತು ಸಮತೋಲನ ಶಕ್ತಿಯನ್ನು ಒದಗಿಸಲು ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ಗಳ (ಪಿಎಸ್ಪಿ) ಅಭಿವೃದ್ಧಿ ಮಹತ್ವದ್ದಾಗಿದೆ. ಪ್ರಸ್ತುತ, ಒಟ್ಟು 2.7 ಗಿಗಾವ್ಯಾಟ್ ಸಾಮರ್ಥ್ಯದ ಪಿಎಸ್ಪಿಗಳು ದೇಶದಲ್ಲಿ ನಿರ್ಮಾಣ ಹಂತದಲ್ಲಿವೆ ಮತ್ತು ಇನ್ನಿತರ 50 ಗಿಗಾವ್ಯಾಟ್ ಸಾಮರ್ಥ್ಯದ ಪಿಎಸ್ಪಿಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ. 2031-32ರ ವೇಳೆಗೆ ಪಿಎಸ್ಪಿ ಸಾಮರ್ಥ್ಯವು 4.7 ಗಿಗಾವ್ಯಾಟ್ನಿಂದ ಸುಮಾರು 55 ಗಿಗಾವ್ಯಾಟ್ಗೆ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.