How Cold Is Moon Surface?: ಚಂದಮಾಮ ನೋಡಲು ಬಲು ಚೆಂದ. ಹುಣ್ಣಿಮೆಯ ಚಂದ್ರನ ವರ್ಣನೆಗೆ ಪದಗಳೇ ಸಾಲವು. ಪಳಪಳನೆ ಹೊಳೆಯುವ ಚಂದ್ರನ ಕುರಿತು ನೂರಾರು ಕಥೆಗಳಿವೆ. ಅಂತ್ಯವಿಲ್ಲದ ರಹಸ್ಯಗಳಿವೆ. 21ನೇ ಶತಮಾನದಲ್ಲಿಯೂ ಅವನ ಒಡಲ ರಹಸ್ಯಗಳು ಒಂದೊಂದಾಗಿ ಹೊರಬರುತ್ತಿವೆ. ಇದಕ್ಕೆ ಕಾರಣ ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನ.
ಚಂದ್ರನಲ್ಲಿ ಎಷ್ಟು ಚಳಿ ಇರುತ್ತದೆ? ಅಲ್ಲಿ ತಾಪಮಾನ ಹೇಗಿರುತ್ತದೆ? ಇತರೆ ಪರಿಸ್ಥಿತಿಗಳು ಹೇಗಿವೆ ಎಂಬೆಲ್ಲ ಪ್ರಶ್ನೆಗಳಿಗೆ ವಿಜ್ಞಾನ ಮಾತ್ರ ಉತ್ತರ ನೀಡಬಲ್ಲದು.
ಅತಿಯಾದ ಚಳಿ, ಬಹುಬೇಗ ಬಿಸಿ: ಚಂದ್ರನ ಮೇಲಿನ ತಾಪಮಾನ ಅತ್ಯಂತ ವೇಗವಾಗಿ ಬದಲಾಗುತ್ತಿರುತ್ತದೆ. ಅತಿಯಾದ ಚಳಿ, ಬಹುಬೇಗ ಬಿಸಿಯಾಗಿ ಬದಲಾಗುತ್ತದೆ ಎಂದು ಮಿಚಿಗನ್ ವಿಶ್ವವಿದ್ಯಾಲಯದ ಖಗೋಳಶಾಸ್ತ್ರ ಪ್ರಾಧ್ಯಾಪಕ ಜಾನ್ ಮೋನಿಯರ್ ಹೇಳಿದ್ದಾರೆ.
ಚಂದ್ರನ ಮೇಲ್ಮೈ ತಾಪಮಾನ -100 ಡಿಗ್ರಿ ಸೆಲ್ಸಿಯಸ್‌ನಿಂದ +100 ಡಿಗ್ರಿ ಸೆಲ್ಸಿಯಸ್ವರೆಗೆ ಇರುವ ಸಾಧ್ಯತೆ ಇರುತ್ತದೆ ಎಂದು ವಿಜ್ಞಾನಿ ಜಾನ್ ಮೋನಿಯರ್ ಹೇಳಿದ್ದಾರೆ. ನಾಸಾ(NASA)ದ ಪ್ರಕಾರ ಭೂಮಿಯ ಸರಾಸರಿ ಮೇಲ್ಮೈ ತಾಪಮಾನ 15 ಸೆಲ್ಸಿಯಸ್. ವ್ಯಾಪ್ತಿಯ ವಿಷಯದಲ್ಲಿ ಇದು ಸರಿಸುಮಾರು -89 ಡಿಗ್ರಿ ಸೆಲ್ಸಿಯಸ್‌ನಿಂದ 57 ಡಿಗ್ರಿ ಸೆಲ್ಸಿಯಸ್ವರೆಗೆ ಇರುತ್ತದೆ.
ಚಂದ್ರ ಮತ್ತು ಭೂಮಿಯ ನಡುವೆ ವ್ಯತ್ಯಾಸವೇಕೆ?: ಭೂಮಿ ಮತ್ತು ಚಂದ್ರ ಸೂರ್ಯನಿಂದ ಬಹುತೇಕ ಒಂದೇ ಸಮನಾದ ದೂರದಲ್ಲಿದೆ. (ಸುಮಾರು 150 ಮಿಲಿಯನ್ ಕಿಲೋಮೀಟರ್). ಆದರೆ ಇಬ್ಬರ ಮಧ್ಯೆ ತಾಪಮಾನದಲ್ಲಿ ವ್ಯತ್ಯಾಸ ಬಹಳ. ಇದು ಹಲವಾರು ಅಂಶಗಳಿಂದ ಪ್ರಭಾವಿತವಾಗಿದೆ. ಭೂಮಿಯಲ್ಲಿ ಶಾಖವನ್ನು ಹೀರಿಕೊಂಡು ವಾಸಯೋಗ್ಯಕ್ಕೆ ಬೇಕಾಗುವ ತಾಪಮಾನ ಒದಗಿಸುತ್ತದೆ. ಆದರೆ ಚಂದ್ರನಿಗೆ ಭೂಮಿಯಂತಹ ವಾತಾವರಣವಿಲ್ಲ. ಇದು ಸೂರ್ಯನ ಬೆಳಕನ್ನು ನೇರವಾಗಿ ಚಂದ್ರನ ಮೇಲ್ಮೈ ಮೇಲೆ ಬೀಳುವಂತೆ ಅನುವು ಮಾಡಿಕೊಡುತ್ತದೆ ಎಂದು ಪ್ರೊಫೆಸರ್ ಜಾನ್ ಮೋನಿಯರ್ ಹೇಳುತ್ತಾರೆ.
ಭೂಮಿಯ ಮೇಲೆ ಸಾಗರಗಳಿವೆ. ಅವು ಸೂರ್ಯನಿಂದ ಶಾಖವನ್ನು ಹೀರಿಕೊಳ್ಳುತ್ತವೆ. ರಾತ್ರಿ ಶಾಖ ಬಿಡುಗಡೆ ಮಾಡುತ್ತವೆ. ಆದರೆ ಚಂದ್ರನ ಮೇಲೆ ಹಾಗಲ್ಲ. ರಾತ್ರಿ ಚಂದ್ರನ ಮೇಲಿಂದ ಶಾಖವನ್ನು ಹೊರಸೂಸಲು ಸಾಧ್ಯವಿಲ್ಲ. ಹೀಗಾಗಿ ಅಲ್ಲಿ ರಾತ್ರಿ ಅತ್ಯಂತ ಕಡಿಮೆ ತಾಪಮಾನ ದಾಖಲಾಗುತ್ತದೆ. ಚಂದ್ರನ ಹಗಲು-ರಾತ್ರಿ ಚಕ್ರವು ಭೂಮಿಯ ಮೇಲಿನ ಒಂದು ತಿಂಗಳ ಚಕ್ರಕ್ಕೆ ಬಹುತೇಕ ಸಮ. ಅದಕ್ಕಾಗಿಯೇ ಚಂದ್ರನ ಮೇಲ್ಮೈಯಲ್ಲಿ ದೀರ್ಘಾವಧಿಯವರೆಗೆ ಬಿಸಿಲು ಮತ್ತು ಕತ್ತಲೆ ಮೂಡುತ್ತಲೇ ಇರುತ್ತದೆ.
ರೆಗೋಲಿತ್ ಗೊತ್ತೇ?: ಚಂದ್ರನ ಮೇಲಿನ ಮಣ್ಣನ್ನು 'ರೆಗೋಲಿತ್' ಎಂದು ಕರೆಯಲಾಗುತ್ತದೆ. ಇದು ತುಂಬಾ ಉತ್ತಮ ನಿರೋಧಕವಾಗಿದೆ. ಅದಕ್ಕಾಗಿಯೇ ಚಂದ್ರನ ಮೇಲ್ಮೈ ಹಗಲು ರಾತ್ರಿ ಶಾಖ ಮತ್ತು ಶೀತವನ್ನು ಉಳಿಸಿಕೊಳ್ಳುತ್ತದೆ. ಅಪೋಲೋ 15 ಮತ್ತು 17 ಕಾರ್ಯಾಚರಣೆಗಳ ಸಮಯದಲ್ಲಿ ಚಂದ್ರನ ಮೇಲ್ಮೈಗಿಂತ ಕೆಳಗೆ ತಾಪಮಾನ ಮಾಪನಗಳನ್ನು ತೆಗೆದುಕೊಳ್ಳಲಾಗಿದೆ. ಮೇಲ್ಮೈಗಿಂತ 14 ಇಂಚುಗಳು (35 ಸೆಂಟಿಮೀಟರ್‌ಗಳು) ಕೆಳಗಿನ ಸರಾಸರಿ ತಾಪಮಾನ ಮೇಲ್ಮೈಗಿಂತ 40-45 ಕೆಲ್ವಿನ್‌ಗಳಷ್ಟು ಬೆಚ್ಚಗಿರುವುದು ಕಂಡುಬಂದಿದೆ.