ಹೈದರಾಬಾದ್:ಜಗತ್ತಿನಾದ್ಯಂತ ಇಂದು ನೂರಾರು ಕೋಟಿ ಜನರ ಸಂವಹನ ಆ್ಯಪ್ ಆಗಿ ಇಂದು ವಾಟ್ಸಾಪ್ ಪ್ರಮುಖ ಪಾತ್ರ ವಹಿಸಿದೆ. ವಾಟ್ಸಾಪ್ ನಮ್ಮ ಕುಟುಂಬ ಸದಸ್ಯರು, ಸ್ನೇಹಿತರು ಅಥವಾ ಕಚೇರಿ ಕೆಲಸಗಳನ್ನು ವಾಸ್ತವವಾಗಿ ಸುಲಭವಾಗಿಸಿದೆ. ವಾಟ್ಸಾಪ್ ಮೂಲಕ ನೂರಾರು ಚಾಟ್, ಮಾತುಕತೆಗಳನ್ನು ನಡೆಸುತ್ತೇವೆ. ಸಂಬಂಧಗಳ ಏರ್ಪಡುವಲ್ಲಿ, ದೂರದಲ್ಲಿರುವವರನ್ನು ಹತ್ತಿರಕ್ಕೆ ಕರೆತರುವಲ್ಲಿ ಇದು ಕೆಲವೊಮ್ಮೆ ಜೀವನದ ಭಾಗವಾಗಿ ಕಾರ್ಯ ನಿರ್ವಹಿಸುತ್ತಿದೆ.
ಇದೇ ಕಾರಣಕ್ಕೆ ವಾಟ್ಸಾಪ್ನ ಮಾತೃಸಂಸ್ಥೆ ವಾಟ್ಸಾಪ್ ಅನ್ನು ಕಾಲ ಕಾಲಕ್ಕೆ ಅಭಿವೃದ್ಧಿಪಡಿಸಿ, ಬಳೆಕದಾರರ ಸ್ನೇಹಿಯಾಗಿ ಮಾಡಿದೆ. ಅನೇಕ ವೈಶಿಷ್ಟ್ಯಗಳನ್ನು ಅಳವಡಿಸಿಕೊಳ್ಳುವಲ್ಲಿ ವಾಟ್ಸಾಪ್ ಎಂದೂ ವಿಫಲವಾಗಿಲ್ಲ. ಇದೀಗ ಇದರ ಚಾಟ್ (ಸಂಭಾಷಣೆ/ ಮಾತುಕತೆ) ನಿರ್ವಹಣೆಯನ್ನು ಮತ್ತಷ್ಟು ಸುಧಾರಿಸಲು ವಾಟ್ಸಾಪ್ ನಿರ್ಧರಿಸಿದೆ. ಇದಕ್ಕಾಗಿ ಚಾಟ್ ಫಿಲ್ಟರ್ ಎಂಬ ಫೀಚರ್ ನೀಡಲು ಮುಂದಾಗಿದೆ. ಇದರ ಮೂಲಕ ಬಳಕೆದಾರರು ಹೆಚ್ಚಿನ ಕಾಂಟಾಕ್ಟ್ ಲಿಸ್ಟ್ ತಮ್ಮ ಇಚ್ಛೆಗೆ ಅನುಸಾರ ಬಳಕೆ ಮಾಡಬಹುದಾಗಿದೆ. ಚಾಟ್ ಫಿಲ್ಟರ್ಸ್ಗಳು ಬಳಕೆದಾರರಿಗೆ ತಮ್ಮ ಇನ್‌ಬಾಕ್ಸ್‌ಗಳನ್ನು ಪ್ರತ್ಯೇಕಿಸಿ, ಸುಲಭವಾಗಿ ನ್ಯಾವಿಗೇಟ್ ಮಾಡಬಹುದು.
ವಾಟ್ಸಾಪ್ ತೆರೆದಾಗ ಸರಿಯಾದ ಚಾಟ್ಗಳನ್ನು ಶೀಘ್ರ ಹುಡುಕಾಟ ಮಾಡಬೇಕು. ಇದಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳದೇ, ಸರಳವಾಗಿರಬೇಕು. ಜನರು ವಾಟ್ಸಾಪ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಿಸ್ಟ್ ಇದ್ದಾಗ, ನಿಮಗೆ ಅಗತ್ಯವಾದ, ಬಹುಮುಖ್ಯವಾದ ಸಂದೇಶಗಳು ಬೇಗ ಕಾಣಬೇಕು ಎಂದು ಬಯಸುತ್ತೇವೆ. ಇದೇ ಕಾರಣಕ್ಕೆ ಈ ಹೊಸ ಚಾಟ್ ಫಿಲ್ಟರ್ ಅನ್ನು ಪರಿಚಯಿಸಲಾಗಿದೆ. ಇದರ ಮೂಲಕ ನಿಮ್ಮ ಇನ್ಬಾಕ್ಸ್ ಅನ್ನು ಸುಲಭವಾಗಿ ಜೋಡಿಸಿ, ನಿಮ್ಮ ಅಭಿರುಚಿಗೆ ತಕ್ಕಂತೆ ಸ್ಕ್ರಾಲ್ ಮಾಡಬಹುದಾಗಿದೆ ಎಂದು ವಾಟ್ಸಾಪ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇನ್ನು ಈ ಫಿಲ್ಟರ್ ಅನ್ನು ಆಯ್ಕೆ ಮಾಡುವುದು ಸುಲಭವಾಗಿದೆ. ಇದು ಅಪ್ಲಿಕೇಷನ್ನ ಚಾಟ್ ಲಿಸ್ಟ್ನ ಮೇಲ್ಭಾಗ ಕಾಣಸಿಗುತ್ತದೆ. ಆಲ್, ಅನ್ರೀಡ್ ಮತ್ತು ಗ್ರೂಪ್ ಆಯ್ಕೆಗಳ ಜೊತೆಗೆ ಇದನ್ನು ಆಯ್ಕೆ ಮಾಡಬಹುದು.