ನವದೆಹಲಿ: ಚಾಟ್ ಜಿಪಿಟಿ ತಯಾರಕ ಕಂಪನಿಯಾದ ಓಪನ್ ಎಐ 'ಜಿಪಿಟಿ' ಎಂಬ ಪದಕ್ಕೆ ಪೇಟೆಂಟ್ ಪಡೆಯಲು ಸಾಧ್ಯವಿಲ್ಲ ಎಂದು ಯುಎಸ್ ಪೇಟೆಂಟ್ ಮತ್ತು ಟ್ರೇಡ್ಮಾರ್ಕ್ ಕಚೇರಿ (ಪಿಟಿಒ) ಹೇಳಿದೆ. ಈ ಮೂಲಕ ಪೇಟೆಂಟ್ ವಿಷಯದಲ್ಲಿ ಮೈಕ್ರೋಸಾಫ್ಟ್ ಬೆಂಬಲಿತ, ಸ್ಯಾಮ್ ಆಲ್ಟ್ಮ್ಯಾನ್ ನೇತೃತ್ವದ ಕಂಪನಿ ಓಪನ್ ಎಐಗೆ ಹಿನ್ನಡೆಯಾಗಿದೆ. ಜಿಪಿಟಿ ಅಥವಾ GPT ಎಂಬುದು generative pre-trained transformer ಎಂಬ ಪದದ ಸಂಕ್ಷಿಪ್ತ ರೂಪವಾಗಿದೆ.
ಗ್ರಾಹಕರು "generative pre- trained transformer" ಎಂಬ ಪದಗಳ ಅರ್ಥವನ್ನು ತಕ್ಷಣವೇ ಅರ್ಥಮಾಡಿಕೊಳ್ಳುವುದಿಲ್ಲವಾದ್ದರಿಂದ ಜಿಪಿಟಿ ಒಂದು "ವಿವರಣಾತ್ಮಕ ಪದ" ಅಲ್ಲ ಎಂದು ಓಪನ್ಎಐ ಯುಎಸ್ ಪಿಟಿಒಗೆ ಸಲ್ಲಿಸಿದ ಅರ್ಜಿಯಲ್ಲಿ ವಾದಿಸಿತ್ತು.
"ಓಪನ್ ಎಐ ನ ವಾದವು ಟ್ರೇಡ್ಮಾರ್ಕ್ ಪರಿಶೀಲಿಸುವ ವಕೀಲರಿಗೆ ಮನವರಿಕೆಯಾಗಿಲ್ಲ. ಪೂರ್ವ-ತರಬೇತಿ ಪಡೆದ ಡೇಟಾ ಸೆಟ್ಗಳ ಆಧಾರದ ಮೇಲೆ ಪ್ರಶ್ನೆ ಕೇಳುವ ಮತ್ತು ಉತ್ತರ ಪಡೆಯುವ ಇಂಥದೇ ಸಾಫ್ಟ್ವೇರ್ ತಂತ್ರಜ್ಞಾನಗಳಿಗೆ ಜಿಪಿಟಿ ಎಂಬ ಪದವನ್ನೇ ಇಂಟರ್ನೆಟ್ನಲ್ಲಿ ವ್ಯಾಪಕವಾಗಿ ಬಳಸುತ್ತಿರುವುದು ಕಂಡು ಬರುವ ಹಿನ್ನೆಲೆಯಲ್ಲಿ ಈ ಪದಕ್ಕೆ ಪೇಟೆಂಟ್ ನೀಡಲಾಗದು" ಎಂದು ಯುಎಸ್ ಪಿಟಿಒ ತನ್ನ ತೀರ್ಪಿನಲ್ಲಿ ತಿಳಿಸಿದೆ.