ನವದೆಹಲಿ: 2023 ರಲ್ಲಿ ನಿಯಮಗಳನ್ನು ಉಲ್ಲಂಘಿಸಿದ 2.28 ಮಿಲಿಯನ್ (22.8 ಲಕ್ಷ) ಅಪ್ಲಿಕೇಶನ್‌ಗಳು ಪ್ಲೇ ಸ್ಟೋರ್ನಲ್ಲಿ ಪಬ್ಲಿಶ್ ಆಗದಂತೆ ತಡೆಯಲಾಗಿದೆ ಎಂದು ಗೂಗಲ್ ಹೇಳಿದೆ. ಮಾಲ್ವೇರ್ ಎಂದು ದೃಢಪಟ್ಟ ಮತ್ತು ಅಪರಾಧಿಗಳು ಮತ್ತು ವಂಚಕ ಗ್ಯಾಂಗ್ಗಳು ಸೃಷ್ಟಿಸಿದ ಹಾಗೂ ಪದೇ ಪದೆ ನಿಯಮಗಳನ್ನು ಉಲ್ಲಂಘಿಸಿದ 3,33,000 ದುರುದ್ದೇಶಪೂರಿತ ಅಕೌಂಟ್ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದು ಹಾಕಲಾಗಿದೆ ಎಂದು ಕಂಪನಿ ತಿಳಿಸಿದೆ.
ಬಳಕೆದಾರರ ಲೋಕೆಶನ್ ಅಥವಾ ಎಸ್ಎಂಎಸ್‌ಗಳನ್ನು ಓದಿ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಕಂಡುಬಂದ ಸುಮಾರು 2,00,000 ಅಪ್ಲಿಕೇಶನ್ ಅರ್ಜಿಗಳನ್ನು ಗೂಗಲ್ ತಿರಸ್ಕರಿಸಿದೆ ಅಥವಾ ಸರಿಪಡಿಸಿದೆ.
"ಬಳಕೆದಾರರ ಗೌಪ್ಯತೆಯ ರಕ್ಷಣೆಗಾಗಿ ಸೂಕ್ಷ್ಮ ಮಾಹಿತಿಯ ಬಳಕೆ ಮತ್ತು ಹಂಚಿಕೆಯನ್ನು ಮಿತಿಗೊಳಿಸಲು ನಾವು ಎಸ್ಡಿಕೆ ಪೂರೈಕೆದಾರರೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ. 7,90,000ಕ್ಕೂ ಹೆಚ್ಚು ಅಪ್ಲಿಕೇಶನ್ಗಳ ಮೇಲೆ ಪರಿಣಾಮ ಬೀರುವ 31ಕ್ಕೂ ಹೆಚ್ಚು ಎಸ್ಡಿಕೆಗಳಿಗೆ ಗೌಪ್ಯತೆ ಮಟ್ಟವನ್ನು ಹೆಚ್ಚಿಸಿದ್ದೇವೆ" ಎಂದು ಗೂಗಲ್ ತನ್ನ ಸೆಕ್ಯೂರಿಟಿ ವಿಷಯದ ಬ್ಲಾಗ್ ಪೋಸ್ಟ್ನಲ್ಲಿ ಬರೆದಿದೆ.
ಇದಲ್ಲದೆ, ಪ್ಲೇ ಸ್ಟೋರ್ ಬಿಟ್ಟು ಹೊರಗಿನ ಮೂಲಗಳಿಂದ ತಮ್ಮ ಮೊಬೈಲ್ಗಳಲ್ಲಿ ಅಪ್ಲಿಕೇಶನ್ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವ ಗ್ರಾಹಕರ ಸುರಕ್ಷತೆಗಾಗಿ ಕೋಡ್ ಮಟ್ಟದಲ್ಲಿ ನೈಜ- ಸಮಯದ ಸ್ಕ್ಯಾನಿಂಗ್ ನೊಂದಿಗೆ ಗೂಗಲ್ ಪ್ಲೇ ಪ್ರೊಟೆಕ್ಟ್ನ ಭದ್ರತಾ ಸಾಮರ್ಥ್ಯಗಳನ್ನು ಹೆಚ್ಚು ಶಕ್ತಿಯುತಗೊಳಿಸಲಾಗಿದೆ ಎಂದು ಕಂಪನಿ ಹೇಳಿದೆ.
"ನಮ್ಮ ಭದ್ರತಾ ರಕ್ಷಣೆಗಳು ಮತ್ತು ಮಶೀನ್ ಲರ್ನಿಂಗ್ ಅಲ್ಗಾರಿದಮ್ಗಳು ಗೂಗಲ್ಗೆ ರಿವ್ಯೂಗಾಗಿ ಸಲ್ಲಿಸಿದ ಪ್ರತಿ ಅಪ್ಲಿಕೇಶನ್ನಿಂದ ಕಲಿಯುತ್ತವೆ ಮತ್ತು ನಾವು ಆ್ಯಪ್ನ ಸಾವಿರಾರು ವಿಷಯಗಳನ್ನು ಪರಿಶೀಲಿಸಿ ಅಪ್ಲಿಕೇಶನ್ ನಡವಳಿಕೆಯನ್ನು ಅಧ್ಯಯನ ಮಾಡುತ್ತೇವೆ" ಎಂದು ಗೂಗಲ್ ಹೇಳಿದೆ. ಕಂಪನಿಯ ಪ್ರಕಾರ, ಈ ಹೊಸ ಸಾಮರ್ಥ್ಯವು ಈಗಾಗಲೇ 5 ಮಿಲಿಯನ್ ಹೊಸ, ದುರುದ್ದೇಶಪೂರಿತ ಆಫ್-ಪ್ಲೇ ಅಪ್ಲಿಕೇಶನ್ಗಳನ್ನು ಪತ್ತೆ ಮಾಡಿದೆ. ಇದು ಜಾಗತಿಕವಾಗಿ ಆಂಡ್ರಾಯ್ಡ್ ಬಳಕೆದಾರರನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ಬಳಕೆದಾರರಿಗೆ ತಮ್ಮ ವೈಯಕ್ತಿಕ ಡೇಟಾದ ಮೇಲೆ ಹೆಚ್ಚಿನ ನಿಯಂತ್ರಣ ನೀಡಲು, ಖಾತೆ ರಚನೆಯನ್ನು ಸಕ್ರಿಯಗೊಳಿಸುವ ಅಪ್ಲಿಕೇಶನ್‌ಗಳು ಈಗ ಅಪ್ಲಿಕೇಶನ್ ಮತ್ತು ಆನ್ ಲೈನ್ನಿಂದ ಖಾತೆ ಮತ್ತು ಡೇಟಾ ಅಳಿಸುವಿಕೆಯನ್ನು ಪ್ರಾರಂಭಿಸುವ ಆಯ್ಕೆಯನ್ನು ಒದಗಿಸಬೇಕಾಗಿದೆ ಎಂದು ಗೂಗಲ್ ಹೇಳಿದೆ. ಗೂಗಲ್ ಪ್ಲೇ ಸ್ಟೋರ್ ಇದು ಆ್ಯಂಡ್ರಾಯ್ಡ್ ಅಪ್ಲಿಕೇಶನ್ಗಳ ಸಂಗ್ರಹಣೆಯ ಬೃಹತ್ ಮೂಲವಾಗಿದೆ.
ಇದನ್ನೂ ಓದಿ :'ನಾನು ಚೀನಾದ ಬಿಗ್ ಫ್ಯಾನ್.. ಅಲ್ಲಿ ನನಗೆ ತುಂಬಾ ಅಭಿಮಾನಿಗಳಿದ್ದಾರೆ' ಚೀನಾ ಗುಣಗಾನ ಮಾಡಿದ ಮಸ್ಕ್ - ELON MUSK