EPFO ATM Withdrawal: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸದಸ್ಯರು ಮುಂದಿನ ವರ್ಷದಿಂದ ಎಟಿಎಂನಿಂದ ನೇರವಾಗಿ ಇಪಿಎಫ್‌ಒದಲ್ಲಿ ಕಷ್ಟಪಟ್ಟು ಸಂಪಾದಿಸಿದ ಠೇವಣಿ ಹಣವನ್ನು ವಿತ್ಡ್ರಾ ಮಾಡಲು ಸಾಧ್ಯವಾಗಲಿದೆ. ಸದ್ಯ ಇದರ ಬಗೆಗಿನ ಕಾರ್ಯಗಳು ಭರದಿಂದ ಸಾಗಿದ್ದು, ಇದಕ್ಕಾಗಿ ಸಾಫ್ಟವೇರ್ ಅಪ್ಡೇಟ್ ಮಾಡಲಾಗುತ್ತಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ ಅವರು ಎಟಿಎಂನಿಂದ ಹಣ ವಿತ್ಡ್ರಾ ಮಾಡುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ, ಈ ಕುರಿತು ಯಾವುದೇ ಮಾರ್ಗಸೂಚಿಗಳು ಇನ್ನೂ ಬಹಿರಂಗವಾಗಿಲ್ಲ.
ಯಾರಿಗೆಲ್ಲ ಇದರ ಲಾಭ?: ಹೊಸ ಸೌಲಭ್ಯದ ಅಡಿ ಇಪಿಎಫ್‌ಒ ಸದಸ್ಯರು ಎಟಿಎಂನಿಂದ ನೇರವಾಗಿ ಕ್ಲೈಮ್ ಮೊತ್ತವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ, ಇಪಿಎಫ್ ನ ಐಟಿ ಸಿಸ್ಟಮ್ ಅಪ್ಡೇಟ್ ಮಾಡಲಾಗುತ್ತಿದೆ. ಈ ನಿರ್ಧಾರದಿಂದ ಇಪಿಎಫ್ಒನ ಸುಮಾರು 7 ಕೋಟಿ ಸದಸ್ಯರು ಇದರ ಲಾಭ ಪಡೆಯಲಿದ್ದಾರೆ.
ಇನ್ನೂ ಬರಬೇಕಿದೆ ಮಾರ್ಗಸೂಚಿ:ಇಪಿಎಫ್‌ಒ ಖಾತೆದಾರರು, ಫಲಾನುಭವಿಗಳು ಅಥವಾ ವಿಮೆ ಮಾಡಿಸಿಕೊಂಡವರು ಎಟಿಎಂನಿಂದ ಭವಿಷ್ಯ ನಿಧಿ ಹಣವನ್ನು ಹಿಂಪಡೆಯಲು ಅನುಮತಿಸಬಹುದು. ಆದರೆ, ಹಿಂಪಡೆಯುವ ಮೊತ್ತದ ಮೇಲೆ ಸರ್ಕಾರ ಮಿತಿ ವಿಧಿಸಬಹುದಾಗಿದೆ. ಗಮನಾರ್ಹ ಸಂಗತಿ ಎಂದರೆ ಇಪಿಎಫ್‌ಒ ಸದಸ್ಯರು ನಿಧಿಯಲ್ಲಿ ಠೇವಣಿ ಮಾಡಿದ ಒಟ್ಟು ಮೊತ್ತದ ಶೇಕಡ 50 ರಷ್ಟು ಹೆಚ್ಚಿನ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ.
ಎಟಿಎಂನಿಂದ ಪಿಎಫ್ ಹಣ ಪಡೆಯುವುದು ಹೇಗೆ?:ಇಪಿಎಫ್‌ಒ ನಿಯಮಗಳ ಅಡಿ ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವುದು ಅವಶ್ಯಕ. ಚಂದಾದಾರರ ಬ್ಯಾಂಕ್ ಖಾತೆಯು ಇಪಿಎಫ್ ಖಾತೆಯೊಂದಿಗೆ ಲಿಂಕ್ ಆಗಿದೆ. ಆದರೆ ಭವಿಷ್ಯ ನಿಧಿಯಲ್ಲಿ ಠೇವಣಿ ಇಟ್ಟಿರುವ ಹಣವನ್ನು ಹಿಂಪಡೆಯಲು ಬ್ಯಾಂಕ್‌ನ ಎಟಿಎಂ ಅಥವಾ ಡೆಬಿಟ್ ಕಾರ್ಡ್ ಬಳಸುತ್ತಾರೆಯೇ ಅಥವಾ ಇನ್ನಾವುದೇ ಕಾರ್ಡ್ ನೀಡಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ಇದರ ಬಗ್ಗೆ ಇನ್ನು ಮಾರ್ಗಸೂಚಿಗಳು ಹೊರ ಬೀಳಬೇಕಾಗಿದೆ.