ನ್ಯೂಯಾರ್ಕ್ : ಗ್ಲಾಕೋಮಾ ಮತ್ತು ರೆಟಿನಾ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಓಪನ್ಎಐ ಆಧಾರಿತ ಜಿಪಿಟಿ -4 ಮಾನವ ನೇತ್ರತಜ್ಞರ ನೈಪುಣ್ಯತೆಯನ್ನು ಸರಿಗಟ್ಟಬಲ್ಲದು ಮತ್ತು ಕೆಲ ಸಂದರ್ಭಗಳಲ್ಲಿ ವೈದ್ಯರಿಗಿಂತಲೂ ಚೆನ್ನಾಗಿ ಕೆಲಸ ಮಾಡಬಲ್ಲದು ಎಂದು ಸಂಶೋಧನೆಯೊಂದು ತಿಳಿಸಿದೆ.
ಜಾಮಾ ಆಪ್ಥಾಲ್ಮಾಲಾಜಿ (JAMA Ophthalmology) ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನ ವರದಿಯ ಪ್ರಕಾರ- ಅಪಾರ ಪ್ರಮಾಣದ ಡೇಟಾ, ಪಠ್ಯ ಮತ್ತು ಚಿತ್ರಗಳ ಬಗ್ಗೆ ತರಬೇತಿ ಪಡೆದ ಕೃತಕ ಬುದ್ಧಿಮತ್ತೆ -(ಎಐ) ಆಧಾರಿತ ದೊಡ್ಡ ಭಾಷಾ ಮಾದರಿಗಳಂಥ (ಎಲ್ಎಲ್ಎಂ) ಸುಧಾರಿತ ಸಾಧನಗಳು ಲಕ್ಷಾಂತರ ರೋಗಿಗಳನ್ನು ಬಾಧಿಸುವ ಗ್ಲಾಕೋಮಾ ಮತ್ತು ರೆಟಿನಾ ಅಸ್ವಸ್ಥತೆಗಳನ್ನು ಒಳಗೊಂಡ ಪ್ರಕರಣಗಳ ರೋಗನಿರ್ಣಯ ಮತ್ತು ನಿರ್ವಹಣೆ ಮಾಡುವಲ್ಲಿ ನೇತ್ರತಜ್ಞರಿಗೆ ಅಪಾರ ಸಹಾಯ ಮಾಡಬಹುದು ಎಂದು ತಿಳಿಸಿದೆ.
"ನಮ್ಮ ಅಧ್ಯಯನದಲ್ಲಿ ಜಿಪಿಟಿ -4 ರ ಕಾರ್ಯಕ್ಷಮತೆಯ ಬಗ್ಗೆ ಸಾಕಷ್ಟು ಹೊಸ ಮಾಹಿತಿಗಳು ತಿಳಿದು ಬಂದಿವೆ" ಎಂದು ಯುಎಸ್ನ ಮೌಂಟ್ ಸಿನಾಯ್ ಆಸ್ಪತ್ರೆಯ ನ್ಯೂಯಾರ್ಕ್ ಕಣ್ಣು ಮತ್ತು ಕಿವಿ ಆಸ್ಪತ್ರೆಯ ನೇತ್ರಶಾಸ್ತ್ರ ವೈದ್ಯ ಆಂಡಿ ಹುವಾಂಗ್ ಹೇಳಿದ್ದಾರೆ.
"ನಾವು ಜಿಪಿಟಿ-4 ಅನ್ನು ಪರೀಕ್ಷಿಸಲು ಪ್ರಾರಂಭಿಸಿದ ಕ್ಷಣದಿಂದ ಈ ಎಐ ವ್ಯವಸ್ಥೆಯ ಅಗಾಧ ಸಾಮರ್ಥ್ಯವನ್ನು ಗುರುತಿಸಿದ್ದೇವೆ ಮತ್ತು ಜಿಪಿಟಿ -4 ಸಹಾಯ ಮಾಡುವುದು ಮಾತ್ರವಲ್ಲದೆ ಕೆಲ ಸಂದರ್ಭಗಳಲ್ಲಿ ಅನುಭವಿ ನೇತ್ರ ತಜ್ಞರ ಪರಿಣತಿಗೆ ಸಮನಾಗಿ ಅಥವಾ ಅದಕ್ಕೂ ಹೆಚ್ಚಿನ ಮಟ್ಟದ ಪರಿಣತಿಯನ್ನು ತೋರಿಸುತ್ತದೆ" ಎಂದು ಹುವಾಂಗ್ ಹೇಳಿದರು.