ಹೈದರಾಬಾದ್: ಸದಾ ಒಂದಿಲ್ಲೊಂದು ಬದಲಾವಣೆ, ಪ್ರಯೋಗಗಳನ್ನು ಮಾಡುವ ಮೂಲಕ ವಿನೂತನ ರೂಪದಲ್ಲಿ ಎಕ್ಸ್ (X) ಅನ್ನು ಜನರ ಮುಂದೆ ತರುವ ಪ್ರಯತ್ನವನ್ನು ಎಲಾನ್ ಮಸ್ಕ್ ಮಾಡುತ್ತಲೇ ಬರುತ್ತಿದ್ದಾರೆ. ಅದರಂತೆ ಇದೀಗ ಈ ಮೈಕ್ರೋ ಬ್ಲಾಗಿಂಗ್ ತಾಣವು ಯೂಟ್ಯೂಬ್ ರೀತಿಯ ವಿಡಿಯೋ ಸ್ಟ್ರೀಮಿಂಗ್ ಮಾಡಲು ರೂಪುಗೊಳ್ಳುತ್ತಿದೆ.
ಇದು ಅಚ್ಚರಿ ಎನಿಸಿದರೂ ಹೌದು. ಇನ್ಮುಂದೆ ಎಕ್ಸ್ ವೇದಿಕೆ ಮಿನಿ ಟಿವಿ ರೂಪದಲ್ಲಿ ಬಳಕೆದಾರರನ್ನು ತಲುಪಲಿದೆ. ಇದಕ್ಕಾಗಿ ಹೊಸ ಟಿವಿ ಆ್ಯಪ್, ಎಕ್ಸ್ ಟಿವಿ ಬಿಡುಗಡೆ ಮಾಡಲಾಗುತ್ತಿದೆ. ಇದು ವಿಡಿಯೋ ಪ್ರಸಾರದ ಫ್ಲಾಟ್ಫಾರ್ಮ್ ಆಗಿರಲಿದೆ. ಈ ಸಂಗತಿಯನ್ನು ಎಕ್ಸ್ ಸಿಇಒ ಲಿಂಡಾ ಯಕಾರಿನೊ ಹಂಚಿಕೊಂಡಿದ್ದಾರೆ.
ಲಿಂಡಾ ಶೇರ್ ಮಾಡಿರುವ ಈ ವಿಡಿಯೋದಲ್ಲಿ ಕಾಣುವಂತೆ ಎಕ್ಸ್ ಟಿವಿ, ಯೂಟ್ಯೂಬ್ ರೀತಿಯಲ್ಲಿಯೇ ವಿಡಿಯೋ ಪ್ರಸಾರ ಮಾಡಲಿದೆ. ಇಲ್ಲಿಯೂ ಕೂಡ ಬಳಕೆದಾರರು ಮನರಂಜನೆ ಪಡೆಯಬಹುದು.
ಎಕ್ಸ್ ಸಿಇಒ ಹೇಳಿದ್ದೇನು?: ಸಣ್ಣ ಪರದೆಯಿಂದ ದೊಡ್ಡ ಪರದೆಗೆ. ಎಕ್ಸ್ ಎಲ್ಲವನ್ನೂ ಬದಲಾಯಿಸುತ್ತಿದೆ. ಶೀಘ್ರದಲ್ಲೇ ನಿಮ್ಮ ನೈಜ ಸಮಯದಲ್ಲಿ ನಿಮ್ಮನ್ನು ಮಗ್ನಗೊಳಿಸುವ ವಿಷಯವನ್ನು ಹೊತ್ತು ಎಕ್ಸ್ ಟಿವಿ ಆ್ಯಪ್ ಜೊತೆಗೆ ಬರಲಿದ್ದೇವೆ. ಉತ್ತಮ ಗುಣಮಟ್ಟ, ಅದ್ಭುತ ಮನರಂಜನೆಯ ಅನುಭವವನ್ನು ದೊಡ್ಡ ಪರದೆಯಲ್ಲಿ ಪಡೆಯಬಹುದು ಎಂದು ಮಾಹಿತಿ ನೀಡಿದ್ದಾರೆ.