ಚಾಂಡಿಪುರ(ಒಡಿಶಾ): DRDO Missile: ದೇಶದ ರಕ್ಷಣಾ ಸಾಮರ್ಥ್ಯ ಹೆಚ್ಚಿಸುವ ಲಾಂಗ್-ರೇಂಜ್ ಲ್ಯಾಂಡ್ ಅಟ್ಯಾಕ್ ಕ್ರೂಸ್ ಕ್ಷಿಪಣಿಯ ಮೊದಲ ಪರೀಕ್ಷೆಯನ್ನು ಡಿಆರ್‌ಡಿಒ, ಒಡಿಶಾದ ಚಾಂಡಿಪುರದ ಬಾಲಸೋರ್ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ (ಐಟಿಆರ್) ಮಂಗಳವಾರ ಯಶಸ್ವಿಯಾಗಿ ನಡೆಸಿತು. ಮೊಬೈಲ್ ಆರ್ಟಿಕ್ಯುಲೇಟೆಡ್ ಲಾಂಚರ್ ಮೂಲಕ ಪರೀಕ್ಷೆ ನಡೆಸಲಾಗಿದೆ.
ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ಸ್ (ಇಒಟಿಎಸ್) ಮತ್ತು ಟೆಲಿಮೆಟ್ರಿ ಉಪಕರಣಗಳನ್ನು ಬಳಸಿ ಕ್ಷಿಪಣಿಯ ನಿಖರತೆ ಮತ್ತು ಕಾರ್ಯಕ್ಷಮತೆಯನ್ನು ಅಳೆಯಲಾಗಿದೆ. ತನ್ನ ಹಾರಾಟದ ಸಮಯದಲ್ಲಿ ಕ್ಷಿಪಣಿ, ಪೂರ್ವನಿರ್ಧರಿತ ಗುರಿ ತಲುಪಿದೆ. ವಿವಿಧ ಎತ್ತರ ಮತ್ತು ವೇಗಗಳಲ್ಲಿ ಕುಶಲತೆ ಪ್ರದರ್ಶಿಸಿತು. ಸುಧಾರಿತ ಏವಿಯಾನಿಕ್ಸ್ ಮತ್ತು ಅತ್ಯಾಧುನಿಕ ಸಾಫ್ಟ್‌ವೇರ್‌ನೊಂದಿಗೆ ಎಲ್ಆರ್ಎಲ್ಎಸಿಎಂ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ದೂರದಲ್ಲಿರುವ ಶತ್ರುಸ್ಥಾನಗಳನ್ನು ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ.
ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್), ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಹಾಗು ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ಎಡಿಇ) ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿದೆ.
ಯುನಿವರ್ಸಲ್ ವರ್ಟಿಕಲ್ ಲಾಂಚ್ ಮಾಡ್ಯೂಲ್ ಮೂಲಕ ಗ್ರೌಂಡ್-ಬೇಸ್ಡ್ ಮೊಬೈಲ್ ಪ್ಲಾಟ್‌ಫಾರ್ಮ್‌ಗಳು ಮತ್ತು ನೌಕಾ ಹಡಗುಗಳ ಮೂಲಕವೂ ಈ ಕ್ಷಿಪಣಿಯನ್ನು ಉಡಾವಣೆ ಮಾಡಬಹುದು.