ನವದೆಹಲಿ: ಡೀಪ್ ಸೀಕ್ ಎಐ ಮಾಡೆಲ್ಗೆ ತರಬೇತಿ ನೀಡಲು ಚೀನಾ ತನ್ನ ಚಾಟ್ ಜಿಪಿಟಿ ಡೇಟಾ ಬಳಸಿಕೊಂಡಿದೆ ಎಂದು ಶಂಕಿಸಿರುವ ಚಾಟ್ ಜಿಪಿಟಿ ತಯಾರಕ ಓಪನ್ ಎಐ ಈ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ. ಅಗ್ಗದ ದರದ ಚೀನಾದ ಕೃತಕ ಬುದ್ಧಿಮತ್ತೆ (ಎಐ) ಡೀಪ್ ಸೀಕ್ ಸದ್ಯ ತಂತ್ರಜ್ಞಾನ ಜಗತ್ತಿನಲ್ಲಿ ತಲ್ಲಣ ಹುಟ್ಟು ಹಾಕಿರುವ ಮಧ್ಯೆ ಈ ಬೆಳವಣಿಗೆ ನಡೆದಿದೆ.
ತನ್ನ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ಗಳಿಂದ (ಎಲ್ಎಲ್ಎಂ) ಡೇಟಾ ಹೊರತೆಗೆಯುವ ಮೂಲಕ ಎಐ ಮಾದರಿಗಳಿಗೆ ತರಬೇತಿ ನೀಡಲು ಡೆವಲಪರ್ಗಳು ಬಳಸುವ ಸಾಮಾನ್ಯ ತಂತ್ರವಾದ "ಡಿಸ್ಟಿಲೇಶನ್" ತಂತ್ರವನ್ನು ಡೀಪ್ ಸೀಕ್ ತರಬೇತಿಗೆ ಬಳಸಿರುವ ಬಗ್ಗೆ ಪುರಾವೆಗಳು ಲಭ್ಯವಾಗಿವೆ ಎಂದು ಸ್ಯಾಮ್ ಆಲ್ಟ್ ಮ್ಯಾನ್ ನೇತೃತ್ವದ ಓಪನ್ ಎಐ ಫೈನಾನ್ಷಿಯಲ್ ಟೈಮ್ಸ್ಗೆ ತಿಳಿಸಿದೆ.
ತನಿಖೆಗೆ ಮುಂದಾದ ಮೈಕ್ರೋಸಾಫ್ಟ್, ಓಪನ್ಎಐ:ಡೀಪ್ ಸೀಕ್ನ ಸ್ವಂತ ಮಾದರಿಗಳಿಗೆ ತರಬೇತಿ ನೀಡಲು ಚೀನಾದ ಪ್ರತಿಸ್ಪರ್ಧಿ ತಮ್ಮ ಎಪಿಐ ಬಳಸಿದೆಯೇ ಎಂಬುದರ ಬಗ್ಗೆ ಓಪನ್ಎಐ ಮತ್ತು ಮೈಕ್ರೋಸಾಫ್ಟ್ ಈಗ ತನಿಖೆ ನಡೆಸುತ್ತಿವೆ. ಓಪನ್ಎಐ ತನ್ನ ಜಿಪಿಟಿ - 4 ಮಾದರಿಗೆ ತರಬೇತಿ ನೀಡಲು 100 ಮಿಲಿಯನ್ ಡಾಲರ್ ಖರ್ಚು ಮಾಡಿದೆ ಎಂದು ವರದಿಯಾಗಿದೆ.
ಚೀನಾ ಮೇಲೆ ಟ್ರಂಪ್ ಅನುಮಾನ:ಈ ಬಗ್ಗೆ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅವರ ಕೃತಕ ಬುದ್ಧಿಮತ್ತೆಯ ಅಧಿಕಾರಿ ಡೇವಿಡ್ ಸ್ಯಾಕ್ಸ್, ಡೀಪ್ ಸೀಕ್ ಪ್ರಕರಣದಲ್ಲಿ ಐಪಿ ಕಳ್ಳತನ ನಡೆದಿರುವ ಸಾಧ್ಯತೆಯಿದೆ ಎಂದಿದ್ದಾರೆ. "ಡೀಪ್ ಸೀಕ್ ಈ ವಿಷಯದಲ್ಲಿ ಏನು ಮಾಡಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಅವರು ಓಪನ್ಎಐ ಮಾದರಿಗಳಿಂದ ಮಾಹಿತಿಯನ್ನು ಹೊರತೆಗೆದಿದ್ದಾರೆ ಮತ್ತು ಓಪನ್ಎಐ ಈ ಬಗ್ಗೆ ಅಸಮಾಧಾನಗೊಂಡಿದೆ" ಎಂದು ಸ್ಯಾಕ್ಸ್ ಫಾಕ್ಸ್ ನ್ಯೂಸ್ಗೆ ತಿಳಿಸಿದರು.