ಕರ್ನಾಟಕ

karnataka

ETV Bharat / technology

ಸೈಬರ್​ ಕಳ್ಳರ ಹೊಸ ತಂತ್ರ: ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ಫೋಟೋ, ವಿವರ ಪೋಸ್ಟ್‌ ಮಾಡುವ ಮುನ್ನ ಎಚ್ಚರ! - Cyber Crimes - CYBER CRIMES

Cyber Crimes: ಸೈಬರ್ ಕಳ್ಳರು ನಿಮ್ಮ ವೈಯಕ್ತಿಕ ಫೋಟೋಗಳು ಮತ್ತು ಸ್ವವಿವರವನ್ನು ಬಳಸಿಕೊಂಡು ಡೂಪ್ಲಿಕೇಟ್​ ಅಕೌಂಟ್​ ಕ್ರಿಯೆಟ್​ ಮಾಡಿ, ನಿಮ್ಮ ಆಪ್ತರಿಂದ ಹಣ ಲೂಟಿ ಮಾಡುವ ಪ್ರಕ್ರಿಯೆ ಬಹಳ ದಿನಗಳಿಂದಲೂ ನಡೆಯುತ್ತಿದೆ. ಇದನ್ನು ತಡೆಯಲು ಪೊಲೀಸರ ಸಲಹೆಗಳನ್ನು ಪಾಲಿಸಿ.

SOCIAL MEDIA FAKE ACCOUNT CREATE  NEW TACTIC OF CYBERCRIMINALS  PERSONAL PHOTO AND DETAILS  BENGALURU
ಸಾಮಾಜಿಕ ಜಾಲತಾಣಗಳು (ETV Bharat)

By ETV Bharat Tech Team

Published : Sep 25, 2024, 7:19 AM IST

Cyber Crimes:ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣಕ್ಕೆ ಒಡ್ಡಿಕೊಳ್ಳುವುದು ಸಾಮಾನ್ಯವಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಸೈಬರ್​ ಕಳ್ಳರು ನಿಮ್ಮ ವೈಯಕ್ತಿಕ ಚಿತ್ರ ಮತ್ತು ವಿವರಗಳನ್ನು ಕದ್ದು, ನಿಮ್ಮ ಆಪ್ತರು ಮತ್ತು ನಿಮ್ಮ ಬ್ಯಾಂಕ್ ಖಾತೆಯ ಮೇಲೆ ದಾಳಿ ನಡೆಸಿ ಹಣ ದೋಚಲು ಪ್ರಯತ್ನಿಸಬಹುದು. ಹೀಗಾಗಿ ಇಂಥ ಸೈಬರ್​ ದಾಳಿಯಿಂದ ಎಚ್ಚರಿಕೆ ವಹಿಸಿ ಎಂದು ಪೊಲೀಸರು ತಿಳಿಸಿದ್ದಾರೆ.

ತಂತ್ರಜ್ಞಾನ ಬೆಳೆದಂತೆ ಸೈಬರ್ ವಂಚನೆಯ ಹೊಸ ಹೊಸ ಪ್ರಕರಣಗಳೂ ಪ್ರತಿದಿನ ಬೆಳಕಿಗೆ ಬರುತ್ತಿವೆ. ಜನರ ಜೀವಮಾನದ ಸಂಪಾದನೆಯನ್ನೂ ಲೂಟಿ ಮಾಡಲಾಗುತ್ತಿದೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದ ಮೂಲಕ ನಿಮ್ಮ ಪ್ರೊಫೈಲ್​ ಕ್ರಿಯೆಟ್​ ಮಾಡಿ ಆಪ್ತರಿಂದ ಹಣ ಲೂಟಿ ಮಾಡಲಾಗುತ್ತಿದೆ.

ದಿನ ಕಳೆದಂತೆ ಸೈಬರ್ ಅಪರಾಧಿಗಳು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಂತೂ ಸೆಲ್ಫಿ ಮತ್ತು ವೈಯಕ್ತಿಕ ಚಿತ್ರಗಳನ್ನು ತೆಗೆದುಕೊಳ್ಳುವುದು ಸಾಮಾನ್ಯ. ಪ್ರತಿಯೊಬ್ಬರೂ ತಮ್ಮ ಸುಂದರವಾದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಬಯಸುತ್ತಾರೆ. ಆದರೆ ಈ ಅಭ್ಯಾಸ ದೊಡ್ಡ ತೊಂದರೆಗೆ ಸಿಲುಕಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಸೈಬರ್ ಕಳ್ಳರು ಇದೇ ಸೆಲ್ಫಿಗಳನ್ನು ಬಳಸಿಕೊಂಡು ನಿಮ್ಮ ವೈಯಕ್ತಿಕ ವಿವರ ಮತ್ತು ಬ್ಯಾಂಕ್ ಖಾತೆಯ ಮಾಹಿತಿ ಕದಿಯುತ್ತಿದ್ದಾರೆ. ಇದರ ನಂತರ, ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ದೋಚುತ್ತಾರೆ. ಇಂಥ ಅನೇಕ ಪ್ರಕರಣಗಳು ಈಗಾಗಲೇ ವರದಿಯಾಗಿವೆ.

ಹೇಗಿದೆ ಸೈಬರ್​ ಅಪರಾಧಿಗಳ ಉಪಾಯ?:ಹಲವು ಆ್ಯಪ್‌ಗಳು ಮತ್ತು ವೆಬ್‌ಸೈಟ್‌ಗಳಲ್ಲಿ ನಿಮ್ಮ ಗುರುತು ಖಾತ್ರಿ​ ಮಾಡಿಕೊಳ್ಳಲು ಸೆಲ್ಫಿ ತೆಗೆದುಕೊಳ್ಳುವಂತೆ ಸೂಚಿಸುವುದನ್ನು ನೀವು ಗಮನಿಸಿರಬೇಕು. ಇದನ್ನು ಸೆಲ್ಫಿ ಕನ್ಫರ್ಮ್​ ಎಂದು ಕರೆಯಲಾಗುತ್ತದೆ. ಇದು ನೀವು ಯಾರ ಗುರುತನ್ನು ಸಾಬೀತುಪಡಿಸಲು ಬಯಸುವ ವ್ಯಕ್ತಿ ಎಂದು ಖಾತ್ರಿಪಡಿಸುವ ತಂತ್ರಜ್ಞಾನ. ಹೆಚ್ಚಿನ ಬ್ಯಾಂಕ್‌ಗಳು ಮತ್ತು ಫಿನ್‌ಟೆಕ್ ಕಂಪನಿಗಳು ಸೆಲ್ಫಿಗಳ ಮೂಲಕ ಜನರನ್ನು ಪರಿಶೀಲಿಸುತ್ತವೆ. ಆದರೇ ಇದೇ ತಂತ್ರವನ್ನು ಸೈಬರ್ ಅಪರಾಧಿಗಳೂ ಸಹ ಬಳಸಬಹುದು.

ನಕಲಿ ಖಾತೆ ಸೃಷ್ಟಿಸಿ ಹಣ ಲೂಟಿಗೆ ತಂತ್ರ: ಸಾಮಾಜಿಕ ಜಾಲತಾಣದಲ್ಲಿ ನಿಮ್ಮದೇ ಆದ ನಕಲಿ ಖಾತೆ ಸೃಷ್ಟಿಸಿ ನಿಮ್ಮ ಆಪ್ತರಿಗೆ ಫ್ರೆಂಡ್​ ರಿಕ್ವೆಸ್ಟ್​ ಕಳುಹಿಸುತ್ತಾರೆ. ಆಗ ಅವರು ಈ ಫ್ರೆಂಡ್​ ರಿಕ್ವೆಸ್ಟ್‌ಗೆ​ ಅನುಮತಿಸಿದ ಬಳಿಕ ನಿಮ್ಮದೇ ಶೈಲಿಯಲ್ಲಿ ಚಾಟ್​ ಮಾಡಲು ಪ್ರಾರಂಭಿಸುತ್ತಾರೆ. ನಿಮ್ಮ ಆಪ್ತರು ನೀವೇ ಎಂದು ತಿಳಿದು ಸೈಬರ್​ ಅಪರಾಧಿಗಳ ಜೊತೆ ಚಾಟ್​ ಮಾಡುತ್ತಾರೆ. ಆಗ ಸೈಬರ್​ ಅಪರಾಧಿಗಳು ಅವರ ಬಳಿ ‘ನನಗೆ ಹಣದ ಅವಶ್ಯಕತೆ ಇದೆ. ಕೂಡಲೇ ನನಗೆ ಹಣ ಬೇಕು. ನಿನಗೆ ಆಮೇಲೆ ಕೊಡುತ್ತೇನೆ' ಎಂದು ನಿಮ್ಮ ಆಪ್ತರನ್ನು ವಂಚಿಸಲು ಮುಂದಾಗುತ್ತಾರೆ. ಆಗ ನೀವೇ ಹಣ ಕೇಳುತ್ತಿದ್ದೀರಿ ಎಂದು ಭಾವಿಸಿ ಅವರು ಸೈಬರ್​ ಅಪರಾಧಿಗಳಿಗೆ ಹಣ ಕಳುಹಿಸಿ ಮೋಸ ಹೋಗುತ್ತಾರೆ. ಬಳಿಕ ಇದು ನಿಮ್ಮ ಗಮನಕ್ಕೆ ಬರುತ್ತದೆ.

ಸೈಬರ್‌ ಪೊಲೀಸರು ಹೇಳುವುದೇನು?:ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟ್ರಾಗಾಮ್, ವಾಟ್ಸ್‌ಆ್ಯಪ್ ಸೇರಿದಂತೆ ಇನ್ನಿತರ ವೇದಿಕೆಗಳಲ್ಲಿ ಹಾಕಲಾಗುವ ಭಾವಚಿತ್ರಗಳನ್ನು ಕದ್ದು ಪ್ರತ್ಯೇಕ ಖಾತೆಗಳನ್ನು ರಚಿಸಿ ಹಣ ಕೇಳುವವರ ಸಂಖ್ಯೆ ಅಧಿಕವಾಗುತ್ತಿದೆ. ಅಷ್ಟೇ ಅಲ್ಲದೇ, ಇನ್ನಿತರ ಆ್ಯಪ್​ಗಳ ಮೂಲಕ ನಿಮ್ಮ ಬ್ಯಾಂಕ್​ ಖಾತೆಯನ್ನು ಲೂಟಿ ಮಾಡಲು ತಂತ್ರ ಹೆಣೆಯುತ್ತಿದ್ದಾರೆ. ಸೆಲೆಬ್ರಿಟಿಗಳಲ್ಲದೆ, ಸಾಮಾನ್ಯ ವ್ಯಕ್ತಿಗಳ ಅಕೌಂಟ್‌ಗಳನ್ನೂ ಸೈಬರ್‌ಚೋರರು ಹ್ಯಾಕ್ ಮಾಡಿ ಹಣ ಲೂಟಿ ಮಾಡುತ್ತಿದ್ದಾರೆ. ವೈಯಕ್ತಿಕ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವವರು ಮೊದಲು ಅಕೌಂಟ್​ನ ಪ್ರೊಫೈಲ್ ಲಾಕ್ ಮಾಡಬೇಕು. ಫೇಸ್‌ಬುಕ್ ಸೇರಿದಂತೆ ಇನ್ನಿತರ ಅಕೌಂಟ್‌ಗಳಲ್ಲಿರುವ ವೈಯಕ್ತಿಕ ಫೋಟೊಗಳನ್ನು ಪ್ರವೈಟ್ ಮೋಡ್‌ಗೆ ಹಾಕಬೇಕು. ಈ ಮೂಲಕ ದುರ್ಬಳಕೆ ತಡೆಯಬಹುದು ಎಂದು ಬೆಂಗಳೂರು ಸಿಐಡಿ ಸೈಬರ್ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಇದನ್ನೂ ಓದಿ:OPEN AI ಎಕ್ಸ್​ ಅಕೌಂಟ್​ ಹ್ಯಾಕ್​, ಕ್ರಿಪ್ಟೋ ಕರೆನ್ಸಿ ಜಾಹೀರಾತು ಪ್ರಸಾರ - OPEN AI X Account Hacked

ABOUT THE AUTHOR

...view details