ನವದೆಹಲಿ: ಸಣ್ಣ ಮತ್ತು ಅತಿ ಸಣ್ಣ ರೈತರು ಬಳಸಲು ಅನುಕೂಲವಾಗುವಂಥ, ಕಡಿಮೆ ಬೆಲೆಯ ಹಾಗೂ ಬಳಸಲು ಸುಲಭವಾದ ಕಡಿಮೆ ಅಶ್ವಶಕ್ತಿ ಶ್ರೇಣಿಯ ಕಾಂಪ್ಯಾಕ್ಟ್ ಟ್ರ್ಯಾಕ್ಟರ್ ಒಂದನ್ನು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್-ಸೆಂಟ್ರಲ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ರಿಸರ್ಚ್ ಇನ್ ಸ್ಟಿಟ್ಯೂಟ್ (ಸಿಎಸ್ಐಆರ್-ಸಿಎಂಇಆರ್ಐ) ತಯಾರಿಸಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಶುಕ್ರವಾರ ತಿಳಿಸಿದೆ.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್ ಟಿ) ಸೈನ್ಸ್ ಫಾರ್ ಈಕ್ವಿಟಿ ಎಂಪವರ್‌ಮೆಂಟ್ ಆ್ಯಂಡ್ ಡೆವಲಪ್‌ಮೆಂಟ್ (ಎಸ್ಇಡಿ) ವಿಭಾಗದ ಬೆಂಬಲದೊಂದಿಗೆ ಸಿಎಸ್ಐಆರ್ ಈ ಟ್ರ್ಯಾಕ್ಟರ್ ತಯಾರಿಸಿದೆ.
ಭಾರತದ ಒಟ್ಟಾರೆ ಕೃಷಿಕರಲ್ಲಿ ಅತಿಸಣ್ಣ ಮತ್ತು ಸಣ್ಣ ರೈತರು ಶೇ 80 ರಷ್ಟಿದ್ದಾರೆ. ಇವರಲ್ಲಿ ಹೆಚ್ಚಿನ ಸಂಖ್ಯೆಯ ರೈತರು ಇನ್ನೂ ಎತ್ತು-ಚಾಲಿತ ಕೃಷಿಯನ್ನು ಅವಲಂಬಿಸಿದ್ದಾರೆ. ಆದರೆ ಇದರ ನಿರ್ವಹಣಾ ವೆಚ್ಚ ಮತ್ತು ಕಡಿಮೆ ಆದಾಯಗಳಿಂದ ರೈತರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
"ಎತ್ತಿನ ನೇಗಿಲುಗಳ ಬದಲಾಗಿ ಪವರ್ ಟಿಲ್ಲರ್ಗಳನ್ನು ಬಳಸಲಾಗುತ್ತಿದ್ದರೂ, ಅವುಗಳನ್ನು ಚಾಲನೆ ಮಾಡುವುದು ಪ್ರಯಾಸದಾಯಕ. ಮತ್ತೊಂದೆಡೆ ದೊಡ್ಡ ಗಾತ್ರದ ಟ್ರ್ಯಾಕ್ಟರ್ಗಳು ಸಣ್ಣ ರೈತರಿಗೆ ಸೂಕ್ತವಲ್ಲ ಮತ್ತು ಬಹುತೇಕ ಸಣ್ಣ ರೈತರಿಗೆ ಇವನ್ನು ಕೊಳ್ಳಲು ಸಾಧ್ಯವಾಗುವುದಿಲ್ಲ" ಎಂದು ಸಚಿವಾಲಯ ಹೇಳಿದೆ.
ಹೀಗಾಗಿ ಹೊಸದಾಗಿ ಅಭಿವೃದ್ಧಿಪಡಿಸಲಾದ ಸಣ್ಣ ಗಾತ್ರದ ಟ್ರ್ಯಾಕ್ಟರ್ಗಳನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಸ್ಥಳೀಯ ಕಂಪನಿಗಳಿಗೆ ತಂತ್ರಜ್ಞಾನ ಪರವಾನಗಿ ನೀಡುವ ಬಗ್ಗೆ ಸಿಎಸ್ಐಆರ್-ಸಿಎಂಇಆರ್ಐ ಚಿಂತನೆ ನಡೆಸುತ್ತಿದೆ. ಇದರಿಂದ ಈ ಸಣ್ಣ ಗಾತ್ರದ ಟ್ರ್ಯಾಕ್ಟರ್ ಅನ್ನು ಎಲ್ಲ ರೈತರಿಗೂ ತಲುಪಿಸಬಹುದಾಗಿದೆ.
ರಾಂಚಿ ಮೂಲದ ಎಂಎಸ್ಎಂಇ ಟ್ರಾಕ್ಟರ್ನ ಸಾಮೂಹಿಕ ಉತ್ಪಾದನೆಗಾಗಿ ಕಾರ್ಖಾನೆ ಆರಂಭಿಸಲು ಆಸಕ್ತಿ ತೋರಿಸಿದೆ. ಅಭಿವೃದ್ಧಿಪಡಿಸಿದ ಟ್ರ್ಯಾಕ್ಟರ್ಗಳನ್ನು ವಿವಿಧ ರಾಜ್ಯ ಸರ್ಕಾರದ ಟೆಂಡರ್ಗಳ ಮೂಲಕ ಸಬ್ಸಿಡಿ ದರದಲ್ಲಿ ರೈತರಿಗೆ ಪೂರೈಸಲು ಅವರು ಯೋಜಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.
ಟ್ರ್ಯಾಕ್ಟರ್ ಹೇಗಿದೆ?: ಈ ಟ್ರಾಕ್ಟರ್ 8 ಫಾರ್ವರ್ಡ್ ಮತ್ತು 2 ರಿವರ್ಸ್ ಸ್ಪೀಡ್ ಹೊಂದಿರುವ 9 ಎಚ್ ಪಿ (ಹಾರ್ಸ್ ಪವರ್) ಡೀಸೆಲ್ ಎಂಜಿನ್, 540 ಆರ್ ಪಿಎಂನಲ್ಲಿ, ಪಿಟಿಒನೊಂದಿಗೆ 6 splines ಗಳನ್ನು ಒಳಗೊಂಡಿದೆ. ಟ್ರ್ಯಾಕ್ಟರ್ನ ಒಟ್ಟು ತೂಕ ಸುಮಾರು 450 ಕೆಜಿ ಆಗಿದ್ದು, ಮುಂಭಾಗ ಮತ್ತು ಹಿಂಭಾಗದ ಚಕ್ರ ಕ್ರಮವಾಗಿ 4.5-10 ಮತ್ತು 6-16 ಅಳತೆಯದ್ದಾಗಿವೆ. ವ್ಹೀಲ್ ಬೇಸ್, ಗ್ರೌಂಡ್ ಕ್ಲಿಯರೆನ್ಸ್ ಮತ್ತು ಟರ್ನಿಂಗ್ ತ್ರಿಜ್ಯ ಕ್ರಮವಾಗಿ 1200 ಎಂಎಂ, 255 ಎಂಎಂ ಮತ್ತು 1.75 ಎಂಎಂ ಆಗಿದೆ.
ಇದನ್ನೂ ಓದಿ: ಗೂಗಲ್ ಟ್ರಾನ್ಸ್ಲೇಟ್ಗೆ 110 ಹೊಸ ಭಾಷೆಗಳ ಸೇರ್ಪಡೆ: ಕೋಟ್ಯಂತರ ಜನರಿಗೆ ಅನುಕೂಲ - Google Translate