ಕರ್ನಾಟಕ

karnataka

ETV Bharat / technology

ನಾಸಾದಿಂದ ಖುಷಿ ಸಂಗತಿ :​ ನಿಗದಿಗಿಂತ 2 ವಾರ ಮುಂಚೆಯೇ ಸುನೀತಾ, ಬುಚ್ ಭೂಸ್ಪರ್ಶ! - SUNITA WILLIAMS RETURN TO EARTH

Sunita Williams Return to Earth: ನಾಸಾದಿಂದ ಖುಷಿ ಸುದ್ದಿಯೊಂದು ಹೊರಬಿದ್ದಿದೆ. ನಿಗದಿಗಿಂತ ಎರಡು ವಾರಗಳ ಮುಂಚೆಯೇ ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರನ್ನು ಭೂಮಿಗೆ ಮರಳಿ ಕರೆತರಲಿದೆ ಎಂದು ನಾಸಾ ಮೂಲಗಳು ಹೇಳಿವೆ.

NASA  Sunita Williams return  Indian astronauts  ISS mission
ಸುನೀತಾ, ಬುಚ್ (Photo Credit: ANI)

By ETV Bharat Tech Team

Published : Feb 8, 2025, 10:51 PM IST

Sunita Williams Return to Earth:ಭಾರತೀಯ ಮೂಲದ ಅಮೇರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಅವರ ಬಾಹ್ಯಾಕಾಶ ಸಂಗಾತಿ ವಿಲ್ಮೋರ್ ಬುಚ್ ಕಳೆದ ವರ್ಷ ಜೂನ್‌ನಿಂದ ಬಾಹ್ಯಾಕಾಶದಲ್ಲಿರುವುದು ಗೊತ್ತಿರುವ ಸಂಗತಿ. ಈ ಇಬ್ಬರು ಗಗನಯಾತ್ರಿಯನ್ನು ಮರಳಿ ಭೂಮಿಗೆ ಕರೆತರುವ ಮಿಷನ್​ ಪದೇ ಪದೆ ಮುಂದೂಡಲಾಗುತ್ತಿದೆ. ಮಾರ್ಚ್ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಅವರು ಹಿಂದಿರುಗುವ ಸಾಧ್ಯತೆ ಇತ್ತು. ಆದರೆ ಈಗ ಸುನೀತಾ ಮತ್ತು ವಿಲ್ಮೋರ್ ಅದಕ್ಕೂ ಮುಂಚೆಯೇ ಭೂಮಿಗೆ ಮರಳಬಹುದು.

ಹೌದು, ಮಾರ್ಚ್ 19ರ ಸುಮಾರಿಗೆ ಬಾಹ್ಯಾಕಾಶ ಸಂಸ್ಥೆ ಸುನೀತಾ ಮತ್ತು ವಿಲ್ಮೋರ್ ಅವರನ್ನು ಭೂಮಿಗೆ ಮರಳಿ ಕರೆತರಲಿದೆ ಎಂದು ನಾಸಾ ಮೂಲಗಳು ತಿಳಿಸಿವೆ ಎಂದು ಡೈಲಿ ಮೇಲ್ ವರದಿ ಮಾಡಿದೆ. ಇದು ಈ ಹಿಂದೆ ಘೋಷಿಸಲಾದ ಗಡುವಿಗಿಂತ ಸುಮಾರು ಎರಡು ವಾರಗಳ ಮುಂಚೆಯೇ ಆಗಿರುವುದು ಗಮನಾರ್ಹ.

ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಅವರ ವಾಪಸಾತಿಯಲ್ಲಿನ ಈ ಬದಲಾವಣೆಯು ಸ್ಪೇಸ್‌ಎಕ್ಸ್‌ನ ಕ್ರೂ-10 ಮಿಷನ್‌ಗಾಗಿ ಬಾಹ್ಯಾಕಾಶ ನೌಕೆ ನಿಯೋಜನೆಯಲ್ಲಿನ ಬದಲಾವಣೆಗೆ ಸಂಬಂಧಿಸಿದೆ. ಜೂನ್ ಮೊದಲ ವಾರದಲ್ಲಿ ಸುನೀತಾ ಕೇವಲ ಒಂದು ವಾರ ಬಾಹ್ಯಾಕಾಶಕ್ಕೆ ಹೋಗಿದ್ದರು. ಆದರೆ ಅವರ ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ಸಮಸ್ಯೆ ಇತ್ತು. ಇದರಿಂದಾಗಿ ಅವರಿಬ್ಬರ ಮರಳುವಿಕೆ ಮುಂದೂಡಲ್ಪಡುತ್ತಲೇ ಇತ್ತು. ನಂತರ ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಇಬ್ಬರ ಮರಳುವಿಕೆಯನ್ನು ಘೋಷಿಸಿತು.

ವಿಲ್ಮೋರ್ ಮತ್ತು ವಿಲಿಯಮ್ಸ್ ಸ್ಪೇಸ್‌ಎಕ್ಸ್ ಕ್ರೂ-9 ಕ್ಯಾಪ್ಸುಲ್‌ನಲ್ಲಿ ಹಿಂತಿರುಗಲಿದ್ದಾರೆ. ಇದು ಸೆಪ್ಟೆಂಬರ್ 29 ರಿಂದ ಬಾಹ್ಯಾಕಾಶ ನಿಲ್ದಾಣದಲ್ಲಿದೆ. ಆದರೆ ಕ್ರೂ-10 ಬಾಹ್ಯಾಕಾಶ ನಿಲ್ದಾಣವನ್ನು ತಲುಪುವವರೆಗೆ ಕ್ರೂ-9 ಅಲ್ಲಿಂದ ಭೂಮಿಗೆ ಹೊರಡಲು ಸಾಧ್ಯವಿಲ್ಲ ಎಂದು ನಾಸಾ ನಿರ್ಧರಿಸಿದೆ.

ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸುನೀತಾ ಮತ್ತು ವಿಲ್ಮೋರ್ ಅವರನ್ನು ಬಾಹ್ಯಾಕಾಶದಿಂದ ಶೀಘ್ರದಲ್ಲೇ ಮರಳಿ ಕರೆತರುವಂತೆ ಎಲಾನ್ ಮಸ್ಕ್ ಅವರನ್ನು ಕೇಳಿಕೊಂಡಿದ್ದರು. ಇದರ ಜೊತೆಗೆ ಮಾಜಿ ಅಧ್ಯಕ್ಷ ಬೈಡನ್ ಇಬ್ಬರೂ ಗಗನಯಾತ್ರಿಗಳನ್ನು ಬಾಹ್ಯಾಕಾಶದಲ್ಲಿ ಬಲೆಗೆ ಬೀಳಿಸಿದ್ದಾರೆ ಎಂದು ಟ್ರಂಪ್ ಆರೋಪಿಸಿದ್ದರು.

ಟ್ರಂಪ್ ಅಧಿಕಾರ ವಹಿಸಿಕೊಳ್ಳುವ ಮೊದಲೇ ಈ ಆಕಸ್ಮಿಕ ಯೋಜನೆ ಆರಂಭವಾಯಿತು ಮತ್ತು ಇತ್ತೀಚೆಗೆ ಅದಕ್ಕೆ ಗ್ರೀನ್​ ಸಿಗ್ನಲ್​ ಕೂಡ ನೀಡಲಾಯಿತು ಎಂದು ನಾಸಾ ಮೂಲಗಳು ತಿಳಿಸಿವೆ. ಜನವರಿ 28 ರಂದು ಮಸ್ಕ್ ಎಕ್ಸ್​​ನಲ್ಲಿ ಪೋಸ್ಟ್ ಮಾಡಿ, ಟ್ರಂಪ್ ಸ್ಪೇಸ್‌ಎಕ್ಸ್‌ಗೆ ಬಾಹ್ಯಾಕಾಶದಲ್ಲಿ ಸಿಲುಕಿರುವ ಇಬ್ಬರು ಗಗನಯಾತ್ರಿಗಳನ್ನು ಆದಷ್ಟು ಬೇಗ ಮರಳಿ ಕರೆತರುವಂತೆ ಕೇಳಿಕೊಂಡಿದ್ದಾರೆ ಎಂದು ಹೇಳಿದ್ದರು. ತಮ್ಮ ಕಂಪನಿ ಹಾಗೆ ಮಾಡಲಿದೆ ಅಂತಾ ಬಿಲಿಯನೇರ್ ಮಸ್ಕ್​ ಹೇಳಿದ್ದರು. ಬೈಡನ್​ ಆಡಳಿತವು ಅವರನ್ನು ಇಷ್ಟು ದಿನ ಅಲ್ಲಿಯೇ ಬಿಟ್ಟಿರುವುದು ಭಯಾನಕವಾಗಿದೆ ಎಂದು ಆರೋಪಿಸಿದ್ದರು.

ಓದಿ:ಪೆಸಿಫಿಕ್​ ಮಹಾಸಾಗರ ಕಾಣುವಂತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸುನೀತಾ ವಿಲಿಯಮ್ಸ್​!

ABOUT THE AUTHOR

...view details