ತಂತ್ರಜ್ಞಾನ ವರವೂ ಹೌದು, ಶಾಪವೂ ಹೌದು. ತಂತ್ರಜ್ಞಾನ ಜಗತ್ತಿನ ಎಲ್ಲಾ ಮಾಹಿತಿಯನ್ನು ಬೆರಳ ತುದಿಗೆ ತಂದಿಡುತ್ತಿದೆ. ಮತ್ತೊಂದೆಡೆ, ನಮ್ಮೆಲ್ಲಾ ಮಾಹಿತಿಗೆ ಕನ್ನ ಹಾಕುವ, ವಂಚನೆ ಎಸಗುವ ಪ್ರಯತ್ನಗಳೂ ನಿತ್ಯ ಸಾಗುತ್ತಿವೆ. ಇದರ ಭಾಗವಾಗಿಯೇ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ತಂತ್ರಜ್ಞಾನದ ಮೂಲಕವೇ ಸೈಬರ್ ಅಪರಾಧಿಗಳು ಜನರನ್ನು ಮೋಸ ಮಾಡಲು ವಿವಿಧ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅದರಲ್ಲೂ ಜನಪ್ರಿಯ ವಾಟ್ಸ್‌ಆ್ಯಪ್ ಮೂಲಕ ಹೊಸದಾಗಿ ವಂಚನೆ ಪ್ರವೃತ್ತಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯುರೋ (ಬಿಪಿಆರ್ಡಿ) ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
ಈ ಸಂಖ್ಯೆಗಳಿಂದ ಮಿಸ್ ಕಾಲ್ ಬರುತ್ತಿದೆಯೇ?: ಬಳಕೆದಾರರಿಗೆ ಅನೇಕ ಬಾರಿ ವಾಟ್ಸ್‌ಆ್ಯಪ್‌ನಲ್ಲಿ ಅಪರಿಚಿತ ನಂಬರ್ನಿಂದ ಮಿಸ್ಡ್ಕಾಲ್ಗಳು ಬರುತ್ತವೆ. ಒಂದೆರಡು ಬಾರಿ ರಿಂಗ್ ಆದ ಬಳಿಕ ಈ ಕರೆಗಳು ಕಟ್ ಆಗುತ್ತವೆ. ಇಂಥವು ಹ್ಯಾಕರ್ಗಳು ಮಾಡುವ ಕರೆಗಳಾಗಿದೆ. ಈ ರೀತಿ ಕರೆ ಮಾಡುವ ಮೂಲಕ ವಾಟ್ಸ್‌ಆ್ಯಪ್ ಅನ್ನು ಪತ್ತೆ ಮಾಡಿ, ವಿವಿಧ ಮಾರ್ಗವಾಗಿ ಅವರಿಗೆ ಸೈಬರ್ ಬೆದರಿಕೆ ಒಡ್ಡುವ ಪ್ರಯತ್ನ ನಡೆಯುತ್ತಿದೆ. ಈ ಮಿಸ್ ಕಾಲ್ಗಳು ಸಾಮಾನ್ಯವಾಗಿ +254, +63, +1(218) ಈ ಆರಂಭಿಕ ಸಂಖ್ಯೆಗಳಿಂದ ಪ್ರಾರಂಭವಾಗುತ್ತವೆ. ಈ ಸಂಖ್ಯೆಗಳು ವಿಯೆಟ್ನಾಂ, ಕೀನ್ಯಾ, ಇಥಿಯೋಪಿಯಾ ಮತ್ತು ಮಲೇಷ್ಯಾ ದೇಶಗಳಿಂದ ಬರುತ್ತವೆ. ಹೀಗಾಗಿ ಮಿಸ್ ಕಾಲ್/ಈ ಸಂಖ್ಯೆಯಿಂದ ಕರೆ ಬಂದಾಗ ಹೆಚ್ಚು ಜಾಗ್ರತೆ ವಹಿಸುವಂತೆ ಬಿಪಿಆರ್ಡಿ ತಿಳಿಸಿದೆ.
ಉದ್ಯೋಗದ ಆಮಿಷ:ಸೈಬರ್ ವಂಚಕರು ಬಹುತೇಕ ಬಾರಿ ಉತ್ತಮ ವೇತನದೊಂದಿಗಿನ ಉದ್ಯೋಗ ಭರವಸೆಯ ಸಂದೇಶಗಳನ್ನು ಕಳುಹಿಸುತ್ತಾರೆ. ಯಾವುದೇ ಡಿಪಿ ಇಲ್ಲದ ವಾಟ್ಸ್‌ಆ್ಯಪ್ ನಂಬರ್ಗಳಿಂದ ಪೂರ್ಣಕಾಲಿಕ, ಅರೆಕಾಲಿಕ, ವರ್ಕ್ ಫ್ರಮ್ ಹೋಮ್ ಉದ್ಯೋಗದ ಆಮಿಷ ತೋರಿಸುತ್ತಾರೆ. ಇಂತಹ ಸಂದೇಶಗಳಿಗೆ ಅಪ್ಪಿತಪ್ಪಿಯೂ ಪ್ರತಿಕ್ರಿಯಿಸಬೇಡಿ ಎಂದು ಬಿಪಿಆರ್ಡಿ ಹೇಳಿದೆ.