ಮುಂಬೈ: ಮೈಕ್ರೋಸಾಫ್ಟ್ ಸರ್ವರ್ ದೋಷದಿಂದ ಉಂಟಾಗಿರುವ ಜಾಗತಿಕ ತಾಂತ್ರಿಕ ಬಿಕ್ಕಟ್ಟು ಜಾಗತಿಕ ಹಣಕಾಸಿನ ಸೇವೆ ಮೇಲೆ ಪರಿಣಾಮ ಬೀರಿದ್ದು, ಷೇರು ಮಾರುಕಟ್ಟೆಗಳಲ್ಲಿ ಕೂಡ ತಲ್ಲಣ ಸೃಷ್ಟಿಸಿದೆ. ಆದರೆ, ಭಾರತದ ಬ್ಯಾಂಕ್ ಮತ್ತು ಪೇಮೆಂಟ್ ಸೇವೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಎಸ್ಬಿಐ ಚೇರ್ಮನ್ ದಿನೇಶ್ ಕುಮಾರ್ ಖಾರಾ ತಿಳಿಸಿದ್ದಾರೆ.
ನಾವು ಸುರಕ್ಷಿತವಾಗಿದ್ದು, ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಪರಿಣಾಮ ಬೀರಿಲ್ಲ ಎಂದಿದ್ದಾರೆ. ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) ಕಾರ್ಯಕಾರಿ ಮುಖ್ಯಸ್ಥ ದಿಲೀಪ್ ಅಸ್ಬೆ ಮಾತನಾಡಿದ್ದು, ಯುಪಿಐ ಸೇರಿದಂತೆ ದೇಶದ ಪಾವತಿ ವ್ಯವಸ್ಥೆ ಮೇಲೆ ಈ ತಾಂತ್ರಿಕ ಸಮಸ್ಯೆ ಪರಿಣಾಮ ಬೀರಿಲ್ಲ ಎಂದರು.
ಎಚ್ಡಿಎಫ್ಸಿ ಮತ್ತು ಐಸಿಐಸಿಐ ಹಾಗೂ ಆಕ್ಸಿಸ್ ಬ್ಯಾಂಕ್ಗಳು ಕೂಡ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು, ತಮ್ಮ ವ್ಯವಸ್ಥೆಯಲ್ಲಿ ಯಾವುದೇ ಅಡ್ಡಿಯಾಗಿಲ್ಲ ಎಂದಯ ತಿಳಿಸಿದೆ.
ಎನ್ಐಸಿ ಸುರಕ್ಷಿತ:ಇನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವರಾದ ಅಶ್ವಿನಿ ವೈಷ್ಣವ್, ರಾಷ್ಟ್ರೀಯ ಮಾಹಿತಿ ಕೇಂದ್ರದ ನೆಟ್ವರ್ಕ್ ಈ ಸಮಸ್ಯೆಗೆ ಒಳಗಾಗಿಲ್ಲ ಎಂದಿದ್ದಾರೆ. ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವೂ ಮೈಕ್ರೋಸಾಫ್ಟ್ ಸಂಪರ್ಕದಲ್ಲಿದೆ ಎಂದಿದ್ದಾರೆ. ಈ ತಾಂತ್ರಿಕ ಬಿಕ್ಕಟ್ಟಿಗೆ ಕಾರಣವನ್ನು ಪತ್ತೆ ಮಾಡಲಾಗಿದೆ. ಈ ಸಮಸ್ಯೆ ಪರಿಹಾರಿಸಲು ಅಪ್ಡೇಟ್ ಅನ್ನು ನೀಡಲಾಗಿದೆ. ಸಿಇಆರ್ಟಿ ತಾಂತ್ರಿಕ ಸಲಹೆಯನ್ನು ನೀಡಿದ್ದು, ಎನ್ಐಸಿ ಯಾವುದೇ ಪರಿಣಾಮಕ್ಕೆ ಒಳಗಾಗಿಲ್ಲ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೈಕ್ರೋಸಾಫ್ಟ್ನ ಕ್ಲೌಡ್ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ಜಾಗತಿಕವಾಗಿ ಲಕ್ಷಾಂತರ ವಿಂಡೋಸ್ ಬಳಕೆದಾರರು ಸಮಸ್ಯೆ ಎದುರಿಸುವಂತೆ ಆಗಿದೆ. ವಿಂಡೋಸ್ ಬಳಕೆದಾರರ ಪರದೆಯ ಮೇಲೆ ದಿಢೀರ್ ಎಂದು ಬ್ಲೂ ಸ್ಕ್ರೀನ್ ಆಫ್ ಡೆತ್ ಎರರ್ ಕಂಡು ಬಂದಿದೆ. ಅಮೆರಿಕದಲ್ಲಿ ಮೊದಲು ಕಾಣಿಸಿಕೊಂಡ ಮೈಕ್ರೋಸಾಫ್ಟ್ ಸರ್ವರ್ ದೋಷ ಕ್ರಮೇಣ ಜಗತ್ತಿನೆಲ್ಲೆಡೆ ವಿಮಾನಯಾನ ಸಂಸ್ಥೆ, ಬ್ಯಾಂಕ್ಗಳು, ಮಾಧ್ಯಮ ಸಂಸ್ಥೆ ಮತ್ತು ಕಂಪನಿಗಳು ಸಮಸ್ಯೆ ಎದುರಿಸುವಂತೆ ಆಯಿತು. ಗಂಟೆಗಳ ಕಾಲ ಈ ತಾಂತ್ರಿಕ ಸಮಸ್ಯೆಗಳನ್ನು ಜನರು ಎದುರಿಸಿದರು.
ಮೈಕ್ರೋಸಾಫ್ಟ್ 365 ಆ್ಯಪ್ ಮತ್ತು ಸರ್ವಿಸ್ ಮೂಲಕ ಸಮಸ್ಯೆ ಸರಿ ಮಾಡಲು ಎಲ್ಲ ಪ್ರಯತ್ನ ನಡೆಸಿರುವುದಾಗಿ ಮೈಕ್ರೋಸಾಫ್ಟ್ ತಿಳಿಸಿದೆ. ಕ್ಲೌಡ್ಸ್ಟ್ರೈಕ್ ಅಪ್ಡೇಟ್ ಅನ್ನು ಸರಿಯಾದ ಸಮಯಕ್ಕೆ ಮಾಡದ ಹಿನ್ನೆಲೆ ಈ ಸಮಸ್ಯೆಯನ್ನು ಜಗತ್ತಿನೆಲ್ಲೆಡೆ ಮೈಕ್ರೋಸಾಫ್ಟ್ ಬಳಕೆದಾರರು ಎದುರಿಸಿದರು.
ಇದನ್ನೂ ಓದಿ: ಮೈಕ್ರೋಸಾಫ್ಟ್ ಸರ್ವರ್ನಲ್ಲಿ ದೋಷ, ಇಡೀ ಜಗತ್ತಿಗೆ ತಾಂತ್ರಿಕ ಬಿಕ್ಕಟ್ಟು! ಯಾವೆಲ್ಲ ಸೇವೆಗಳ ಮೇಲೆ ಪರಿಣಾಮ ಗೊತ್ತಾ?