ಕರ್ನಾಟಕ

karnataka

ETV Bharat / technology

ಕೃತಕ ಬುದ್ಧಿಮತ್ತೆ: ಮಾನವಕುಲಕ್ಕೆ ಅಪಾಯ ಮತ್ತು ಅನುಕೂಲಗಳು

ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಮಾನವಕುಲಕ್ಕೆ ಎದುರಾಗಬಹುದಾದ ಅಪಾಯಗಳು ಮತ್ತು ಅನುಕೂಲತೆಗಳ ಬಗ್ಗೆ ಇಲ್ಲಿದೆ ಮಾಹಿತಿ.

Navigating the Future of AI Amidst Human Folly, The Dual Edges of Progress=
Navigating the Future of AI Amidst Human Folly, The Dual Edges of Progress=

By ETV Bharat Karnataka Team

Published : Feb 20, 2024, 4:28 PM IST

ಬೆಳೆಯುತ್ತಿರುವ ತಾಂತ್ರಿಕ ಪ್ರಗತಿಯ ಮಧ್ಯೆ ಕೃತಕ ಬುದ್ಧಿಮತ್ತೆಯ (ಎಐ) ಸುತ್ತಲಿನ ಚರ್ಚೆಯು ಊಹಾತ್ಮಕ ಕಾಲ್ಪನಿಕತೆಯಿಂದ ಜಾಗತಿಕ ಆತಂಕಕ್ಕೂ ಕಾರಣವಾಗಿದೆ. ಮಾನವ ದೌರ್ಬಲ್ಯ ಮತ್ತು ದೋಷಗಳ ಪ್ರತಿಯಾಗಿ ಎಐನ ಮಿತಿಯಿಲ್ಲದ ಸಾಮರ್ಥ್ಯದ ಹೋಲಿಕೆಗೆ ಈ ಚರ್ಚೆಯು ಕೇಂದ್ರೀಕೃತವಾಗಿದೆ. ನಾವು ಎಐ ಯುಗಕ್ಕೆ ಆಳವಾಗಿ ಕಾಲಿಡುತ್ತಿದ್ದಂತೆ, ಅತ್ಯಂತ ಗಂಭೀರ ಅಪಾಯಗಳು ಮತ್ತು ಅದರ ಪ್ರತಿಫಲನಗಳು ಕಾಣಿಸಿಕೊಳ್ಳುತ್ತಿವೆ. ಈ ಹೊಸ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ಹೊಸ ರೀತಿಯ ಶೀತಲ ಸಮರಕ್ಕೆ ಮುನ್ನುಡಿ ಬರೆಯಲಿದೆ ಎಂದು ಇದು ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಯಂಥ ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಹಿಡಿದು ತಾಂತ್ರಿಕವಾಗಿ ಮುಂದುವರಿದ ರಾಷ್ಟ್ರಗಳು ಆತಂಕ ವ್ಯಕ್ತಪಡಿಸಿವೆ.

ಎಐ ತಂತ್ರಜ್ಞಾನದ ಅಪಾಯಗಳು: ಎಐ ತಂತ್ರಜ್ಞಾನಗಳ ಬೆಳವಣಿಗೆಯು ಅಪಾಯಗಳಿಂದ ಕೂಡಿದ ಪ್ರಗತಿಯ ವಿರೋಧಾಭಾಸವನ್ನು ತೋರಿಸುತ್ತಿದೆ. ವಾಸ್ತವ ಮತ್ತು ಕಾಲ್ಪನಿಕತೆಯ ನಡುವಿನ ಗಡಿಗಳನ್ನು ಮಸುಕಾಗಿಸುವ ಡೀಪ್​ಫೇಕ್​ಗಳು, ಅತ್ಯಂತ ಅಪಾಯಕಾರಿಯಾದ ಅತ್ಯಾಧುನಿಕ ಡಿಜಿಟಲ್ ಫೋರ್ಜರಿಗಳ ಸೃಷ್ಟಿ ಮುಂತಾದುವು ಡಿಜಿಟಲ್ ಸಂವಹನಗಳ ಮೇಲಿನ ನಂಬಿಕೆಯನ್ನು ದುರ್ಬಲಗೊಳಿಸುತ್ತವೆ. ಎಐ-ಚಾಲಿತ ಕ್ರಿಪ್ಟೋಗ್ರಫಿ ಮತ್ತು ಸೈಬರ್ ಸೆಕ್ಯುರಿಟಿ ಅಪ್ಲಿಕೇಶನ್​ಗಳಿಂದ ಎಐ ಮೂಲಕ ಮಾಡಬಹುದಾದ ಕುಕೃತ್ಯಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಜಾಗತಿಕ ಭದ್ರತೆ ಮತ್ತು ಮಾಹಿತಿ ಸಮಗ್ರತೆಗೆ ಅಭೂತಪೂರ್ವ ಸವಾಲುಗಳನ್ನು ಒಡ್ಡುತ್ತಿದೆ.

ಜಾಗತಿಕ ಸಂವಾದಗಳು ಮತ್ತು ಹೈಪರ್ ಜಾಗತೀಕರಣ:ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಮತ್ತು ಅದೇ ರೀತಿಯ ಅಂತರರಾಷ್ಟ್ರೀಯ ಸಂಸ್ಥೆಗಳು ಹೈಪರ್-ಜಾಗತೀಕರಣದಲ್ಲಿ ಎಐ ಪಾತ್ರದ ಬಗ್ಗೆ ಚರ್ಚೆಗಳನ್ನು ಹುಟ್ಟು ಹಾಕುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ವೇದಿಕೆಗಳು ಜಾಗತಿಕ ಆರ್ಥಿಕತೆಯಲ್ಲಿ ಎಐನ ಅಳವಡಿಕೆಯನ್ನು ನಿರ್ವಹಿಸಲು ಸಂಘಟಿತ ವಿಧಾನ ಅಗತ್ಯ ಎಂದು ಒತ್ತಿ ಹೇಳಿವೆ. ಆರ್ಥಿಕ ಬೆಳವಣಿಗೆಯ ಸಾಮರ್ಥ್ಯ ಮತ್ತು ಅಸಮಾನತೆಗಳು ವಿಸ್ತರಿಸುವ ಅಪಾಯ ಎರಡನ್ನೂ ಇವು ಎತ್ತಿ ತೋರಿಸುತ್ತವೆ. ಎಐ ಪ್ರಾಬಲ್ಯದ ಸ್ಪರ್ಧೆಯಿಂದ ಪ್ರಚೋದಿಸಲ್ಪಟ್ಟ ಹೊಸ ಶೀತಲ ಸಮರಗಳು ಅಂತರರಾಷ್ಟ್ರೀಯ ಸಮುದಾಯವನ್ನು ಛಿದ್ರಗೊಳಿಸುವ ಅಪಾಯವಿರುವುದರಿಂದ ತಾಂತ್ರಿಕ ನಾವೀನ್ಯತೆಯೊಂದಿಗೆ ನೈತಿಕ ಪರಿಗಣನೆಗಳಿಗೆ ಆದ್ಯತೆ ನೀಡುವ ಸಹಯೋಗದ ನಿಯಮಗಳನ್ನು ರೂಪಿಸುವುದು ಇಂದಿನ ಅಗತ್ಯವಾಗಿದೆ.

ಎರಡಲಗಿನ ಖಡ್ಗ ಎಐ ಸಮರ :ವಿಶೇಷವಾಗಿ ವರ್ಧಿತ ರಿಯಾಲಿಟಿ (ಎಆರ್) ಮತ್ತು ವರ್ಚುವಲ್ ರಿಯಾಲಿಟಿ (ವಿಆರ್) ಯುದ್ಧ ಸಿಮ್ಯುಲೇಶನ್​ಗಳ ಮೂಲಕ ಮಿಲಿಟರಿಯಲ್ಲಿ ಎಐನ ಬಳಕೆ ರಕ್ಷಣಾ ಕಾರ್ಯತಂತ್ರಗಳಲ್ಲಿ ಕ್ರಾಂತಿಯನ್ನುಂಟು ಮಾಡಿವೆ. ಈ ತಂತ್ರಜ್ಞಾನಗಳು ಕಾರ್ಯತಂತ್ರದ ಅನುಕೂಲಗಳನ್ನು ನೀಡುತ್ತವೆಯಾದರೂ, ಅವುಗಳ ಬಳಕೆಯು ನೈತಿಕ ಪ್ರಶ್ನೆಗಳನ್ನು ಮತ್ತು ಎಐ ಶಸ್ತ್ರಾಸ್ತ್ರ ಸ್ಪರ್ಧೆಯ ಅಪಾಯಗಳನ್ನು ಹುಟ್ಟುಹಾಕುತ್ತದೆ. ಇದು ಅಂತರರಾಷ್ಟ್ರೀಯ ಸಂಬಂಧಗಳನ್ನು ಮತ್ತಷ್ಟು ಜಟಿಲಗೊಳಿಸುತ್ತದೆ. ಡಬ್ಲ್ಯುಇಎಫ್ ಮತ್ತು ಇತರ ಸಂಸ್ಥೆಗಳು ಎಐ ಆಧರಿತ ಶಸ್ತ್ರಾಸ್ತ್ರಗಳ ಅಪಾಯಗಳನ್ನು ತಗ್ಗಿಸಲು ನಿಯಮಗಳನ್ನು ರೂಪಿಸುವಂತೆ ಕರೆ ನೀಡಿವೆ. ರಾಷ್ಟ್ರೀಯ ಭದ್ರತೆಗಾಗಿ ಎಐ ಅನ್ನು ಬಳಸಿಕೊಳ್ಳುವುದು ಮತ್ತು ಮಾನವರಹಿತ ಸಂಘರ್ಷ ಉಂಟಾಗದಂತೆ ತಡೆಗಟ್ಟುವ ನಿಯಮಗಳ ಬಗ್ಗೆ ಈ ಸಂಸ್ಥೆಗಳು ಧ್ವನಿ ಎತ್ತಿವೆ.

ಕೈ-ಫು ಲೀ ಅವರ "ಎಐ ಸೂಪರ್ ಪವರ್ಸ್: ಚೀನಾ, ಸಿಲಿಕಾನ್ ವ್ಯಾಲಿ ಮತ್ತು ನ್ಯೂ ವರ್ಲ್ಡ್ ಆರ್ಡರ್" ಎಐ ಅಭಿವೃದ್ಧಿಯ ಭೌಗೋಳಿಕ ರಾಜಕೀಯ ಪರಿವರ್ತನೆಯನ್ನು ಅಧ್ಯಯನ ಮಾಡಿದ್ದು, ಎಐ ಪ್ರಾಬಲ್ಯವನ್ನು ಸಾಧಿಸಲು ರಾಷ್ಟ್ರಗಳ ನಡುವಿನ ಪೈಪೋಟಿಯನ್ನು ಎತ್ತಿ ತೋರಿಸುತ್ತದೆ. ಪ್ರಮುಖ ವಿಶ್ವ ಶಕ್ತಿಗಳ ನಡುವೆ ಆರಂಭವಾಗುತ್ತಿರುವ ತಾಂತ್ರಿಕ ಶೀತಲ ಸಮರಗಳ ಬಗ್ಗೆ ಲೀ ಅವರ ಒಳನೋಟಗಳು ಎಐನ ಕಾರ್ಯತಂತ್ರದ ಮಹತ್ವವನ್ನು ಒತ್ತಿಹೇಳುತ್ತವೆ. ಹಾಗೆಯೇ ಎಐನಿಂದ ಜಾಗತಿಕ ಅಸ್ಥಿರತೆಗೆ ಕಾರಣವಾಗಬಹುದಾದ ಉದ್ವಿಗ್ನತೆಯ ಬಗ್ಗೆ ಇದು ಕಾಳಜಿ ವ್ಯಕ್ತಪಡಿಸಿದೆ.

ಆರ್ಥಿಕ ಬದಲಾವಣೆಗಳು ಮತ್ತು ಪರಿಸರಸ್ನೇಹಿ ಪರಿವರ್ತನೆಗಳು: ಎಐನ ಅಪಾಯಗಳು ಏನೇ ಇದ್ದರೂ ಅದರಿಂದ ಸಾಧಿಸಬಹುದಾದ ಸಕಾರಾತ್ಮಕ ಬದಲಾವಣೆಗಳು ಅಗಾಧವಾಗಿವೆ. ಪರಿಸರ ಸುಸ್ಥಿರತೆಯ ಕ್ಷೇತ್ರದಲ್ಲಿ, ಪರ್ಯಾಯ ಇಂಧನಗಳನ್ನು ಅಭಿವೃದ್ಧಿಪಡಿಸಲು ಎಐ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದು ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಮಾಡುವ ವಿಷಯದಲ್ಲಿ ಸಾಕಷ್ಟು ಆಶಾದಾಯಕವಾಗಿದೆ. ಬೃಹತ್ ಡೇಟಾಸೆಟ್​ಗಳನ್ನು ವಿಶ್ಲೇಷಿಸುವ ಮೂಲಕ, ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸಲು ಪರಿಣಾಮಕಾರಿ ವಿಧಾನಗಳನ್ನು ಎಐ ಕಂಡು ಹಿಡಿಯಬಹುದು ಮತ್ತು ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟಕ್ಕೆ ಇದು ಗಮನಾರ್ಹ ಕೊಡುಗೆ ನೀಡಬಹುದು.

ಇದಲ್ಲದೆ ಹೆಚ್ಚಿನ ದಕ್ಷತೆ, ವಂಚನೆ ಪತ್ತೆ ಮತ್ತು ವೈಯಕ್ತಿಕಗೊಳಿಸಿದ ಗ್ರಾಹಕ ಸೇವೆಗಳ ಭರವಸೆ ನೀಡುವ ಮೂಲಕ ಡಿಜಿಟಲ್ ಬ್ಯಾಂಕಿಂಗ್​​ನ ಭವಿಷ್ಯವು ಎಐನಿಂದ ಕ್ರಾಂತಿಕಾರಿಯಾಗಲಿದೆ. ಆದಾಗ್ಯೂ ಹೀಗೆ ಡಿಜಿಟಲ್ ರೂಪಾಂತರ ಹೊಂದುವ ಸಮಯದಲ್ಲಿ ಎಐ-ಚಾಲಿತ ಆರ್ಥಿಕ ಅಪರಾಧಗಳನ್ನು ತಡೆಗಟ್ಟಲು ದೃಢವಾದ ಸೈಬರ್ ಭದ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ.

ಮುಂದಿನ ಪೀಳಿಗೆ - ದೊಡ್ಡ ಅಪಾಯಗಳು ಮತ್ತು ಅವಕಾಶಗಳು: ಭವಿಷ್ಯದ ಪೀಳಿಗೆಗೆ ಎಐ ಸಾಟಿಯಿಲ್ಲದ ಸಂಪನ್ಮೂಲ ಮತ್ತು ಅಸಾಧಾರಣ ಸವಾಲುಗಳನ್ನು ಪ್ರಸ್ತುತಪಡಿಸುತ್ತದೆ. ಡಿಜಿಟಲ್ ಹಸ್ತಕ್ಷೇಪ ಮತ್ತು ತಪ್ಪು ಮಾಹಿತಿಗಳನ್ನು ಹರಡುವುದು ಎಐ ಒಡ್ಡಬಹುದಾದ ಬಹುದೊಡ್ಡ ಅಪಾಯವಾಗಿದೆ. ಹೀಗಾಗಿ ಯುವಜನರಲ್ಲಿ ಡಿಜಿಟಲ್ ಸಾಕ್ಷರತೆ ಮತ್ತು ವಿಮರ್ಶಾತ್ಮಕ ಆಲೋಚನಾ ಕೌಶಲ್ಯಗಳನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ. ಅದೇ ಸಮಯದಲ್ಲಿ, ಶಿಕ್ಷಣದಲ್ಲಿ ಎಐನ ಪಾತ್ರವು ವೈಯಕ್ತಿಕಗೊಳಿಸಿದ ಕಲಿಕೆಯ ಅನುಭವಗಳು ಮತ್ತು ಮಾಹಿತಿಗೆ ಅವಕಾಶ ನೀಡುತ್ತದೆ. ತಂತ್ರಜ್ಞಾನ ಚಾಲಿತ ಜಗತ್ತಿನಲ್ಲಿ ಬದುಕಲು ಮಕ್ಕಳಿಗೆ ಅತ್ಯಾಧುನಿಕ ಸಾಧನಗಳನ್ನು ಕೂಡ ಇದು ನೀಡಲಿದೆ.

ಸಮತೋಲನ ಅಗತ್ಯ: ನಾವು ಹೊಸ ಯುಗದ ಉತ್ತುಂಗದಲ್ಲಿ ನಿಂತಿರುವಾಗ ಭವಿಷ್ಯದಲ್ಲಿ ಸಮತೋಲಿತ ವಿಧಾನ ಅಳವಡಿಸಿಕೊಳ್ಳುವುದು ಬಹಳ ಅಗತ್ಯವಾಗಿದೆ. ಎಐನ ಅದ್ಭುತಗಳನ್ನು ದೂರದೃಷ್ಟಿ ಮತ್ತು ಜವಾಬ್ದಾರಿಯಿಂದ ಬಳಸಿಕೊಳ್ಳುವುದು ಈ ಸಮತೋಲಿತ ವಿಧಾನಗಳ ಕೇಂದ್ರ ಬಿಂದುವಾಗಿದೆ. ನಮ್ಮ ಪ್ರಮುಖ ಮೌಲ್ಯಗಳು ಮತ್ತು ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳದೆ ತಂತ್ರಜ್ಞಾನವು ಮಾನವ ಸಾಮರ್ಥ್ಯವನ್ನು ಹೆಚ್ಚಿಸುವ ಭವಿಷ್ಯದತ್ತ ಜಾಗತಿಕ ಸಮುದಾಯವನ್ನು ಮುನ್ನಡೆಸುವಲ್ಲಿ ಅಂತರರಾಷ್ಟ್ರೀಯ ಸಹಕಾರ, ನೈತಿಕ ಎಐ ಅಭಿವೃದ್ಧಿ ಮತ್ತು ಅಂತರ್ಗತ ನೀತಿಗಳು ನಿರ್ಣಾಯಕವಾಗುತ್ತವೆ. ಎಐನ ಭರವಸೆ ಮತ್ತು ಮಾನವನ ದಡ್ಡತನದ ನಡುವಿನ ಸಂವಾದ ಮುಂದುವರಿಯುತ್ತದೆ. ಆದರೆ ಸಾಮೂಹಿಕ ಕಾರ್ಯ ಮತ್ತು ಬುದ್ಧಿವಂತಿಕೆಯೊಂದಿಗೆ ನಮ್ಮೆಲ್ಲರ ಒಟ್ಟಾರೆ ಭವಿಷ್ಯವನ್ನು ಸುರಕ್ಷಿತವಾಗಿಸಿಕೊಂಡು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಸಾಧ್ಯವಾದರೆ ಮನುಕುಲಕ್ಕೆ ಅದು ದೊಡ್ಡ ಕೊಡುಗೆಯಾಗಲಿದೆ.

ಲೇಖನ : ಗೌರಿ ಶಂಕರ್ ಮಾಮಿಡಿ, ಹಿರಿಯ ತಂತ್ರಜ್ಞಾನ ವಿಶ್ಲೇಷಕ

ಇದನ್ನೂ ಓದಿ : 10 ವರ್ಷಗಳಲ್ಲಿ ಐಪೋನ್​ ಮಾರಾಟದಿಂದ $1.65 ಟ್ರಿಲಿಯನ್ ಆದಾಯ ಗಳಿಸಿದ ಆ್ಯಪಲ್

ABOUT THE AUTHOR

...view details