ಕ್ಯಾಲಿಫೋರ್ನಿಯಾ(ಅಮೆರಿಕ): ಐಫೋನ್ ತಯಾರಕರು ಆಪರೇಟಿಂಗ್ ಸಿಸ್ಟಮ್ ಮಟ್ಟದಲ್ಲಿ OpenAI ಅನ್ನು ಸಂಯೋಜಿಸಿದರೆ ತನ್ನ ಕಂಪನಿಗಳಿಂದ ಎಲ್ಲ ಆ್ಯಪಲ್ ಸಾಧನಗಳನ್ನು ನಿಷೇಧಿಸುವುದಾಗಿ ಸಾಮಾಜಿಕ ಜಾಲತಾಣ ಎಕ್ಸ್ ಮಾಲೀಕ ಎಲೋನ್ ಮಸ್ಕ್ ಬೆದರಿಕೆ ಹಾಕಿದ್ದಾರೆ.
ಐಫೋನ್ ತಯಾರಕರು ಸೋಮವಾರ OpenAI ಜೊತೆ ಪಾಲುದಾರಿಕೆಯನ್ನು ಘೋಷಿಸಿದ ಬೆನ್ನಲ್ಲೇ ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ನ ಸಿಇಒ ಎಲೋನ್ ಮಸ್ಕ್ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಆ್ಯಪಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಸ್ಕ್ ಎಕ್ಸ್‌ನಲ್ಲಿ ಸರಣಿ ಪೋಸ್ಟ್ಗಳನ್ನು ಮಾಡಿ, ಬಳಕೆದಾರರ ಮಾಹಿತಿಯ ರಕ್ಷಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಎರಡು ಕಂಪನಿಗಳ ನಡುವಿನ ಒಪ್ಪಂದವನ್ನು "ಇದು ಸ್ವೀಕರಿಸಲು ಸಾಧ್ಯವಿಲ್ಲದ ಭದ್ರತಾ ಉಲ್ಲಂಘನೆ", "ಇದನ್ನು ನಾನು ಬಯಸುವುದಿಲ್ಲ" ಎಂದು ಹೇಳಿದ್ದಾರೆ.
"ಒಂದೋ ಈ ತೆವಳುವ ಸ್ಪೈವೇರ್ ಅನ್ನು ನಿಲ್ಲಿಸಿ, ಅಥವಾ ನನ್ನ ಕಂಪನಿಗಳ ಆವರಣದಿಂದ ಎಲ್ಲ ಆ್ಯಪಲ್ ಸಾಧನಗಳನ್ನು ನಿಷೇಧಿಸಲಾಗುವುದು" ಎಂದು ಮಸ್ಕ್, ಆ್ಯಪಲ್ ಸಿಇಒ ಟಿಮ್ ಕುಕ್ ಅವರ ಎಕ್ಸ್ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕುಕ್, "iPhone, iPad, ಮತ್ತು Macಗೆ ಆ್ಯಪಲ್ ಇಂಟೆಲಿಜೆನ್ಸ್ ಅನ್ನು ಪರಿಚಯಿಸುತ್ತಿದ್ದೇವೆ. AI ನಲ್ಲಿ ನಮ್ಮ ಮುಂದಿನ ಅಧ್ಯಾಯ. ಇದು ವೈಯಕ್ತಿಕ, ಶಕ್ತಿಯುತ ಮತ್ತು ಖಾಸಗಿ- ಮತ್ತು ಇದನ್ನು ನೀವು ಪ್ರತಿದಿನ ಬಳಸುವಂತಹ ಅಪ್ಲಿಕೇಶನ್ಗಳಲ್ಲಿ ಸಂಯೋಜಿಸಲಾಗಿದೆ" ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಲೊನ್ ಮಸ್ಕ್, ತಮ್ಮ ಕಂಪನಿಗಳಲ್ಲಿ ಎಲ್ಲಾ ಆ್ಯಪಲ್ ಸಾಧನಗಳನ್ನು ನಿಷೇಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.