ಮೈಸೂರು: ಅಯೋಧ್ಯಾ ರಾಮಮಂದಿರದಲ್ಲಿ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಯಾಗಿ ಜ.22ಕ್ಕೆ ಒಂದು ವರ್ಷ ತುಂಬಲಿದೆ. ಈ ಕುರಿತು ಶಿಲ್ಪಿ ಅರುಣ್ ಯೋಗಿರಾಜ್ 'ಈಟಿವಿ ಭಾರತ್' ಜೊತೆಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
"ಸಾಮಾನ್ಯವಾಗಿ ಒಂದು ಮೂರ್ತಿ ಪ್ರತಿಷ್ಠಾಪನೆಯಾದ ನಂತರ ಒಂದು ವರ್ಷಕ್ಕೆ ಜನರು ಮರೆತು ಬಿಡುತ್ತಾರೆ. ಆದರೆ ರಾಮಲಲ್ಲಾ ಮೂರ್ತಿ ಆ ರೀತಿಯಲ್ಲ. ನಾನು ಹೋದಲ್ಲೆಲ್ಲ ರಾಮಲಲ್ಲಾ ಮೂರ್ತಿಯ ಬಗ್ಗೆ ಜನ ಮಾತನಾಡುತ್ತಾರೆ. ನನ್ನನ್ನು ಗುರುತಿಸುತ್ತಾರೆ. ಅದು ಸಂತೋಷದ ಕ್ಷಣ" ಎಂದು ಅರುಣ್ ಯೋಗಿರಾಜ್ ಸಂತಸ ವ್ಯಕ್ತಪಡಿಸಿದರು.
ನನ್ನ ಜೀವನ ಸಾರ್ಥಕವಾಯಿತು ಅನಿಸುತ್ತದೆ: "ರಾಮಲಲ್ಲಾನ ಮೂರ್ತಿ ಕೆತ್ತನೆ ಕೆಲಸವನ್ನು ಆ ಭಗವಂತನೇ ನನ್ನ ಕೈಯಲ್ಲಿ ಮಾಡಿಸಿದ್ದಾನೆ. ಮೂರ್ತಿ ಕೆತ್ತನೆ ಕೆಲಸ ಕನಸಿನ ಲೋಕದಲ್ಲಿ ಆದಂತೆ ನಡೆದುಹೋಯಿತು. ಪ್ರತಿಷ್ಠಾಪನೆಯ ನಂತರ ಅಯೋಧ್ಯೆಗೆ ಜನರು ರಾಮಲಲ್ಲಾನ ದರ್ಶನ ಪಡೆಯಲು ಬರುತ್ತಿರುವುದು ನೋಡಿದರೆ ನನ್ನ ಜೀವನ ಸಾರ್ಥಕವಾಯಿತು ಅನಿಸುತ್ತದೆ. ವಿಶೇಷವಾಗಿ ಬಾಲರಾಮನ ಕಣ್ಣುಗಳಿಗೆ ಅಂತಿಮ ರೂಪ ಕೊಡುವುದನ್ನು ಜನ ನೋಡಲು ಬಯಸುತ್ತಾರೆ ಎಂಬ ಕುತೂಹಲ ಹಾಗೂ ಭಯ ಇತ್ತು. ಆದರೆ, ಬಾಲರಾಮಮೂರ್ತಿಯ ಕಣ್ಣುಗಳನ್ನು ಇಷ್ಟಪಡುವ ಹಾಗೆ ಶ್ರೀರಾಮನೇ ಮಾಡಿಸಿದ್ದಾನೆ" ಎಂದರು.
"ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ನಂತರ ಅಯೋಧ್ಯೆಗೆ ಕುಟುಂಬ ಸಮೇತ ಹೋಗಿದ್ದೆ. ಬಾಲರಾಮನ ದರ್ಶನ ಪಡೆದು ಎರಡು ನಿಮಿಷಗಳ ಕಾಲ ದೇವರಿಗೆ ವಿರುದ್ಧವಾಗಿ ನಿಂತುಕೊಂಡೆ, ಆಗ ರಾಮಮೂರ್ತಿಯನ್ನು ನೋಡಿದ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕೇಳಿದಾಗ ನನಗೆ ಜೀವನ ಸಾರ್ಥಕವಾಯಿತು ಅನಿಸುತ್ತದೆ. ಈಗ ಅಯೋಧ್ಯೆ ಭಾರತೀಯರ ಮನಸ್ಸಿನಲ್ಲಿ ಸ್ಥಾನ ಪಡೆದಿದೆ" ಎಂದು ಹೇಳಿದರು.
ಶಿಲ್ಪಕಲಾ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡುವ ಆಸಕ್ತಿ: ರಾಜಕೀಯ ಬರುವ ಬಗ್ಗೆ ಶಿಲ್ಪಿ ಅರುಣ್ ಯೋಗಿರಾಜ್ ಪ್ರತಿಕ್ರಿಯಿಸಿ, "ಸದ್ಯ ರಾಜಕೀಯಕ್ಕೆ ಬರುವುದರ ಬಗ್ಗೆ ಆಸಕ್ತಿಯಿಲ್ಲ. ಶಿಲ್ಪಕಲಾ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡುವ ಆಸಕ್ತಿ ಇದೆ" ಎಂದು ತಿಳಿಸಿದರು.
ಕೆತ್ತನೆ ಸಾಮಗ್ರಿಗಳ ಪ್ರದರ್ಶನ: "ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಕೆತ್ತನೆಗೆ ಬಳಸಿದ್ದ ನಮ್ಮ ತಾತಂದಿರು ಉಪಯೋಗಿಸಿದ್ದ ಸಾಮಗ್ರಿಗಳು, ಬೆಳ್ಳಿಯ ಸುತ್ತಿಗೆ, ಚಿನ್ನದ ಉಳಿ ಹಾಗೂ ಇತರ ವಸ್ತುಗಳನ್ನು ಮೂರು ದಿನಗಳ ಕಾಲ ತಮ್ಮ ಬ್ರಹ್ಮರ್ಷಿ ಕಶ್ಯಪ ಶಿಲ್ಪಕಲಾ ಶಾಲೆಯಲ್ಲಿ ಪ್ರದರ್ಶನಕ್ಕಿಡಲಾಗಿದೆ. ಸಾರ್ವಜನಿಕರು ಉಚಿತವಾಗಿ ನೋಡಬಹುದು" ಎಂದು ಶಿಲ್ಪಿ ಅರುಣ್ ಯೋಗಿರಾಜ್ ತಿಳಿಸಿದರು.
ಇದನ್ನೂ ಓದಿ: ವೈಕುಂಠ ಏಕಾದಶಿ: ಮಧ್ಯರಂಗನಾಥ ಸ್ವಾಮಿ ದೇವಾಲಯಕ್ಕೆ ಭಕ್ತಸಾಗರ; ಕಾಡು ನಾರಾಯಣನಿಗೆ ಸಪ್ತದ್ವಾರ ನಿರ್ಮಾಣ
ಇದನ್ನೂ ಓದಿ: ವೈಕುಂಠ ಏಕಾದಶಿ: ಬಳ್ಳಾರಿ, ದಾವಣಗೆರೆಯ ವೆಂಕಟೇಶ್ವರ ದೇವಾಲಯಗಳಲ್ಲಿ ಭಕ್ತಸಾಗರ