ಸ್ಯಾನ್ ಫ್ರಾನ್ಸಿಸ್ಕೋ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಹತ್ತಿರ ಭವಿಷ್ಯದಲ್ಲಿ ಸಾಕಷ್ಟು ಉದ್ಯೋಗಗಳನ್ನು ಕಸಿದುಕೊಳ್ಳಲಿದೆ ಎಂದು ವಿಶ್ವದಾದ್ಯಂತದ ಸಂಶೋಧಕರು ನಿರೀಕ್ಷಿಸುತ್ತಿದ್ದರೆ, ಎಐ ನಿರೀಕ್ಷಿಸಿದಷ್ಟು ಉದ್ಯೋಗಗಳನ್ನು ಕಸಿಯಲಾರದು ಎಂದು ಹೊಸ ಅಧ್ಯಯನವೊಂದು ಹೇಳಿದೆ.
ಎಂಐಟಿಯ ಕಂಪ್ಯೂಟರ್ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಲ್ಯಾಬೊರೇಟರಿ (ಸಿಎಸ್ಎಐಎಲ್) ಇತ್ತೀಚೆಗೆ ಎಐ ಮಾನವರಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯಗಳನ್ನು ನಿರ್ವಹಿಸಬಹುದೇ ಮತ್ತು ಮಾನವ ಶ್ರಮವನ್ನು ಎಐನೊಂದಿಗೆ ಬದಲಾಯಿಸುವ ವೆಚ್ಚ ಅತ್ಯಧಿಕವಾಗಿದೆಯಾ ಎಂಬ ಬಗ್ಗೆ ಸಂಶೋಧನೆ ನಡೆಸಿದೆ. ಕಾರ್ಮಿಕ ಮಾರುಕಟ್ಟೆಯಲ್ಲಿ ಎಐ ಅನುಷ್ಠಾನದ ವಿಶಾಲ ಪರಿಣಾಮಗಳನ್ನು ಅಧ್ಯಯನವು ಗಣನೆಗೆ ತೆಗೆದುಕೊಂಡಿದೆ.
ಕಂಪ್ಯೂಟರ್ ವಿಷನ್ ಎಐ ಪ್ರಸ್ತುತ ಕೃಷಿಯನ್ನು ಹೊರತುಪಡಿಸಿ ಅಮೆರಿಕದ ಆರ್ಥಿಕತೆಯಲ್ಲಿ ಕಾರ್ಮಿಕರ ವೇತನದ ಶೇಕಡಾ 1.6 ರಷ್ಟನ್ನು ರೂಪಿಸುವ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಆದಾಗ್ಯೂ ಆ ವೇತನಗಳಲ್ಲಿ ಕೇವಲ 23 ಪ್ರತಿಶತ, ಅಂದರೆ ಇಡೀ ಆರ್ಥಿಕತೆಯ 0.4 ಪ್ರತಿಶತಕ್ಕೆ ಸಮನಾಗಿರುವಷ್ಟು ಉದ್ಯೋಗಗಳು ಪ್ರಸ್ತುತ ವೆಚ್ಚದಲ್ಲಿ ಮಾನವ ಕಾರ್ಮಿಕರನ್ನು ನೇಮಿಸಿಕೊಳ್ಳುವ ಬದಲು ಸ್ವಯಂಚಾಲಿತಗೊಳಿಸಲು ಅಗ್ಗವಾಗಿರುತ್ತವೆ.
"ಒಟ್ಟಾರೆಯಾಗಿ ಎಐನಿಂದ ಉದ್ಯೋಗ ಬದಲಾವಣೆಯು ಗಣನೀಯವಾಗಿರುತ್ತದೆ, ಆದರೆ ಕ್ರಮೇಣವಾಗಿರುತ್ತದೆ ಎಂದು ನಮ್ಮ ಸಂಶೋಧನೆಗಳು ಸೂಚಿಸುತ್ತವೆ. ಹೀಗಾಗಿ ನಿರುದ್ಯೋಗ ಪರಿಣಾಮಗಳನ್ನು ತಗ್ಗಿಸಲು ಸರ್ಕಾರದ ನೀತಿ ಬದಲಾವಣೆಗೆ ಮತ್ತು ಮರು ತರಬೇತಿಗೆ ಅವಕಾಶವಿದೆ" ಎಂದು ಅವರು ಹೇಳಿದರು.