ನವದೆಹಲಿ: ವಿಶ್ವದಾದ್ಯಂತ ಕೃತಕ ಬುದ್ಧಿಮತ್ತೆ (ಎಐ) ಹಬ್ಗಳ ಟಾಪ್ 10 ಪಟ್ಟಿಯಲ್ಲಿ ಬೆಂಗಳೂರು ಈಗ ಏಳನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಶುಕ್ರವಾರ ತಿಳಿಸಿದೆ. ಅಲ್ಲದೇ ಭಾರತ ಹಾಗೂ ಜರ್ಮನಿ ವಿಶ್ವದ ಅತ್ಯಧಿಕ ಎಐ ಸಂಶೋಧನಾ ಸಂಸ್ಥೆಗಳನ್ನು ಹೊಂದಿವೆ ಎಂದು ವರದಿ ಹೇಳಿದೆ.
2024 ರಲ್ಲಿ ವಿಶ್ವದ ಟಾಪ್ 10 ಪ್ರಮುಖ ಎಐ ಹಬ್ಗಳನ್ನು ಗುರುತಿಸಲು ಸಂಶೋಧನೆ ನಡೆಸಿದ Linkee ಡಾಟ್ ai ಪ್ರಕಾರ, 759 ಎಐ ಸ್ಟಾರ್ಟ್ಅಪ್ಗಳನ್ನು ಹೊಂದಿರುವ ಬೆಂಗಳೂರು ಒಟ್ಟು 4.64 ಅಂಕಗಳನ್ನು ಪಡೆಯುವ ಮೂಲಕ ವಿಶ್ವದಲ್ಲಿ 7ನೇ ಸ್ಥಾನ ಪಡೆದುಕೊಂಡಿದೆ. ಎಐ ಸಂಶೋಧನಾ ಸಂಸ್ಥೆಗಳ ವಿಷಯಕ್ಕೆ ಬಂದಾಗ, ಭಾರತ (ಬೆಂಗಳೂರು) ಮತ್ತು ಜರ್ಮನಿ (ಬರ್ಲಿನ್) ತಲಾ ಒಂಬತ್ತು ಸಂಶೋಧನಾ ಕೇಂದ್ರಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ.
518 ಎಐ ಸ್ಟಾರ್ಟ್ ಅಪ್ಗಳನ್ನು ಹೊಂದಿರುವ ಚೀನಾದಲ್ಲಿ ಕೇವಲ ಆರು ಎಐ ಸಂಶೋಧನಾ ಸಂಸ್ಥೆಗಳು ಇವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬರ್ಲಿನ್ ಇನ್ ಸ್ಟಿಟ್ಯೂಟ್ ಫಾರ್ ದಿ ಫೌಂಡೇಶನ್ಸ್ ಆಫ್ ಲರ್ನಿಂಗ್ ಅಂಡ್ ಡಾಟಾ (ಬಿಐಫೋಲ್ಡ್) ವಿಶ್ವದ ಪ್ರಮುಖ ಎಐ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾಗಿದೆ ಎಂದು ವರದಿ ಹೇಳಿದೆ.
ಎಐ ಕ್ಷೇತ್ರದಲ್ಲಿ ಅತ್ಯಧಿಕ ಹೂಡಿಕೆಯಾದ ನಗರಗಳನ್ನು ಎಐ ಹಬ್ಗಳು ಎಂದು ಗುರುತಿಸಲಾಗಿದೆ. ಹೆಚ್ಚಿನ ಎಐ ಸಂಬಂಧಿತ ಉದ್ಯೋಗಗಳು, ಎಐ ತಜ್ಞರು, ಡೇಟಾ ವಿಜ್ಞಾನಿಗಳು ಮತ್ತು ಮೆಷಿನ್ ಲರ್ನಿಂಗ್ ತಜ್ಞರು ಹೊಂದಿರುವ ಈ ನಗರಗಳು ಹೆಚ್ಚಿನ ಸಂಖ್ಯೆಯ ಎಐ ಸಂಸ್ಥೆಗಳನ್ನು ಕೂಡ ಹೊಂದಿವೆ. ಅಲ್ಲದೆ ಇಲ್ಲಿನ ಎಐ ಉದ್ಯೋಗಿಗಳು ಹೆಚ್ಚಿನ ಸಂಬಳವನ್ನೂ ಪಡೆಯುತ್ತಾರೆ.
"ಬರ್ಲಿನ್ ನಂತೆಯೇ, ಬೆಂಗಳೂರು ಪಟ್ಟಿಯಲ್ಲಿ ಅತಿ ಹೆಚ್ಚು ಎಐ ಸಂಶೋಧನಾ ಸಂಸ್ಥೆಗಳನ್ನು ಹೊಂದಿದೆ. ಜೊತೆಗೆ ಬೆಂಗಳೂರಿನಲ್ಲಿ ಅತ್ಯಧಿಕ ಸಂಖ್ಯೆಯ ಎಐ ಉದ್ಯೋಗಗಳು ಲಭ್ಯವಿವೆ" ಎಂದು ವರದಿ ತಿಳಿಸಿದೆ.
ಅಮೆರಿಕದ ಬೋಸ್ಟನ್ 2024 ರಲ್ಲಿ 6.26 ಅಂಕಗಳೊಂದಿಗೆ ಎಐ ಹಬ್ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸಿಂಗಾಪುರವು ವಿಶ್ವದ ಅತ್ಯುತ್ತಮ ಎಐ ಹಬ್ ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇದು ಒಟ್ಟು 5.92 ಸ್ಕೋರ್ ಪಡೆದಿದೆ. ಇಸ್ರೇಲ್ನ ಟೆಲ್ ಅವೀವ್ 2024 ರಲ್ಲಿ ಮೂರನೇ ಪ್ರಮುಖ ಎಐ ಹಬ್ ಆಗಿದ್ದು, ಅದರ ಒಟ್ಟು ಸ್ಕೋರ್ 5.62 ಆಗಿದೆ. ಸ್ವಿಟ್ಜರ್ಲೆಂಡ್ನ ಜ್ಯೂರಿಚ್ ನಾಲ್ಕನೇ ಸ್ಥಾನದಲ್ಲಿದ್ದರೆ, ಕೆನಡಾದ ಟೊರೊಂಟೊ ಐದನೇ ಸ್ಥಾನದಲ್ಲಿದೆ. ಪಟ್ಟಿ ಮಾಡಲಾದ 10 ಪ್ರಮುಖ ಎಐ ಹಬ್ಗಳಲ್ಲಿ ಐದು ಏಷ್ಯಾದ ನಗರಗಳಾಗಿವೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ರಾಡಾರ್ ಸಂಕೇತ ತಡೆಯಬಲ್ಲ ರಾಕೆಟ್ ನೌಕಾಪಡೆಗೆ ಹಸ್ತಾಂತರಿಸಿದ ಡಿಆರ್ಡಿಒ - Radar Signal Interceptor