ಕರ್ನಾಟಕ

karnataka

By ETV Bharat Karnataka Team

Published : Mar 17, 2024, 7:22 PM IST

ETV Bharat / technology

ಕಳೆದ ವರ್ಷ ಭಾರತದಲ್ಲಿ ದಾಖಲೆಯ 1 ಲಕ್ಷ ಪೇಟೆಂಟ್​ ನೋಂದಣಿ

ಕಳೆದೊಂದು ವರ್ಷದಲ್ಲಿ ಭಾರತದಲ್ಲಿ 1 ಲಕ್ಷ ಪೇಟೆಂಟ್​ಗಳನ್ನು ನೋಂದಣಿ ಮಾಡಲಾಗಿದೆ.

Indian patent office grants record 1 lakh patents in past year
Indian patent office grants record 1 lakh patents in past year

ನವದೆಹಲಿ : ಕೇಂದ್ರ ಸರ್ಕಾರದ ಪೇಟೆಂಟ್ ಆಫೀಸ್ ಒಂದೇ ವರ್ಷದಲ್ಲಿ ದಾಖಲೆಯ ಒಂದು ಲಕ್ಷ ಪೇಟೆಂಟ್​ಗಳನ್ನು ನೀಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಶನಿವಾರ ತಿಳಿಸಿದೆ. ಸಚಿವಾಲಯದ ಅಧಿಕೃತ ಪ್ರಕಟಣೆಯ ಪ್ರಕಾರ, 2023-24 ರ ಆರ್ಥಿಕ ವರ್ಷವೊಂದರಲ್ಲಿಯೇ ಪೇಟೆಂಟ್ ಆಫೀಸ್ ಸಾರ್ವಕಾಲಿಕ ಗರಿಷ್ಠ 90,300 ಪೇಟೆಂಟ್ ಅರ್ಜಿಗಳನ್ನು ಸ್ವೀಕರಿಸಿದೆ.

ಪೇಟೆಂಟ್ ಆಫೀಸ್ ಕಳೆದ 1 ವರ್ಷದಲ್ಲಿ (15 ಮಾರ್ಚ್ 2023 ರಿಂದ 14 ಮಾರ್ಚ್ 2024 ರವರೆಗೆ) ಒಂದು ಲಕ್ಷಕ್ಕೂ ಹೆಚ್ಚು ಪೇಟೆಂಟ್​ಗಳನ್ನು ನೀಡಿದೆ. ಪ್ರತಿ ಕೆಲಸದ ದಿನ 250 ಪೇಟೆಂಟ್​ಗಳನ್ನು ನೀಡಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಪೇಟೆಂಟ್ ನೀಡಿಕೆಗಳ ಜೊತೆಗೆ ಜಿಐ ನೋಂದಣಿಗಳಲ್ಲಿಯೂ ಗಮನಾರ್ಹ ಏರಿಕೆ ಕಂಡುಬಂದಿದೆ. ಜಿಐ ನೋಂದಣಿಗಳು ಹಿಂದಿನ ವರ್ಷಕ್ಕೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಳವಾಗಿವೆ. ಪ್ರಸ್ತುತ, ಭಾರತವು 573 ನೋಂದಾಯಿತ ಜಿಐಗಳನ್ನು ಹೊಂದಿದೆ. 2023-24 ರ ಆರ್ಥಿಕ ವರ್ಷದಲ್ಲಿ 98 ಹೊಸ ಜಿಐ ನೋಂದಣಿ ಆಗಿವೆ ಎಂದು ಪ್ರಕಟಣೆ ತಿಳಿಸಿದೆ.

2023-24ರ ಆರ್ಥಿಕ ವರ್ಷದಲ್ಲಿ ದಾಖಲೆಯ 36,378 ಕಾಪಿರೈಟ್​ ನೋಂದಣಿಗಳಾಗಿವೆ. 2023-24ರ ಹಣಕಾಸು ವರ್ಷದಲ್ಲಿ ವಿನ್ಯಾಸ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಒಟ್ಟು 27,819 ಕಾಪಿರೈಟ್​ ನೋಂದಣಿಗಳಾಗಿವೆ. ಜೊತೆಗೆ 30,450 ಅರ್ಜಿಗಳ ಅಂತಿಮ ವಿಲೇವಾರಿಯಾಗಿದೆ.

ಜಮ್ಮು ಮತ್ತು ಕಾಶ್ಮೀರ ಎಸ್​ಸಿಇಆರ್​ಟಿ ಮತ್ತು ಭಾರತೀಯ ಐಪಿ ಕಚೇರಿಗಳು ಜಂಟಿಯಾಗಿ ಆಯೋಜಿಸಿದ್ದ ಟಾಯ್ಕಾಥಾನ್​ ಸಮಾವೇಶಗಳಿಂದಾಗಿ ಜಮ್ಮು ಮತ್ತು ಕಾಶ್ಮೀರದ ಶಾಲಾ ವಿದ್ಯಾರ್ಥಿಗಳ 115 ಹೊಸ ವಿನ್ಯಾಸಗಳ ನೋಂದಣಿಗೆ ಅನುಕೂಲವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದಕ್ಕೆ ಸಮಾನಾಂತರವಾಗಿ ರಾಷ್ಟ್ರೀಯ ಬೌದ್ಧಿಕ ಆಸ್ತಿ ಅಕಾಡೆಮಿ (ಎನ್ಐಪಿಎಎಂ) ಪೇಟೆಂಟ್ ಜಾಗೃತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಳೆದ ಎರಡು ವರ್ಷಗಳಲ್ಲಿ ಇದು 7,000 ಕ್ಕೂ ಹೆಚ್ಚು ಸಂಸ್ಥೆಗಳಲ್ಲಿ 24 ಲಕ್ಷ ಯುವಕರಿಗೆ, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ತರಬೇತಿ ನೀಡಿದೆ.

ಟ್ರೇಡ್ ಮಾರ್ಕ್ ರಕ್ಷಣೆಯನ್ನು ತ್ವರಿತಗೊಳಿಸುವ ಪ್ರಕ್ರಿಯೆಗಳನ್ನು ಟ್ರೇಡ್ ಮಾರ್ಕ್ಸ್ ರಿಜಿಸ್ಟ್ರಿ ದ್ವಿಗುಣಗೊಳಿಸಿದೆ. ಪ್ರಸ್ತುತ ಟ್ರೇಡ್ ಮಾರ್ಕ್ಸ್ ರಿಜಿಸ್ಟ್ರಿಯು ಟ್ರೇಡ್ ಮಾರ್ಕ್ ಅರ್ಜಿಗಳನ್ನು ಸ್ವೀಕರಿಸಿದ 30 ದಿನಗಳಲ್ಲಿ ಪರೀಕ್ಷಾ ವರದಿಗಳನ್ನು ನೀಡುತ್ತಿದೆ.

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ದೃಢವಾದ ಪೇಟೆಂಟ್ ಸಂರಕ್ಷಣಾ ಕಾರ್ಯವಿಧಾನಗಳ ಮೂಲಕ ನಾವೀನ್ಯತೆ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ವಾತಾವರಣ ಸೃಷ್ಟಿಸಲು ಕಾರ್ಯೋನ್ಮುಖವಾಗಿದೆ. ಪ್ರತಿ ಆರು ನಿಮಿಷಕ್ಕೆ ಒಂದರಂತೆ ತಂತ್ರಜ್ಞಾನಕ್ಕೆ ಪೇಟೆಂಟ್​ ಕೋರಿ ಅರ್ಜಿ ಬರುತ್ತಿದ್ದು, ಪೇಟೆಂಟ್ ನೀಡುವಿಕೆಯಲ್ಲಿನ ಏರಿಕೆಯು ಭಾರತವು ತಾಂತ್ರಿಕ ನಾವೀನ್ಯತೆಯ ಕೇಂದ್ರವಾಗಿ ಹೊರಹೊಮ್ಮುತ್ತಿರುವುದನ್ನು ಪ್ರತಿಬಿಂಬಿಸುತ್ತಿದೆ.

ಇದನ್ನೂ ಓದಿ : ಜಾಗತಿಕವಾಗಿ 50 ಲಕ್ಷ ಪರಿಸರ ಸ್ನೇಹಿ ವಾಹನ ಮಾರಾಟ ಮಾಡಿದ ಹ್ಯುಂಡೈ

ABOUT THE AUTHOR

...view details