ನವದೆಹಲಿ: ಡೆಸ್ಕ್ ಟಾಪ್ ಗಳು, ನೋಟ್ ಬುಕ್ ಗಳು ಮತ್ತು ವರ್ಕ್ ಸ್ಟೇಷನ್ಗಳನ್ನು ಒಳಗೊಂಡ ಭಾರತದ ಸಾಂಪ್ರದಾಯಿಕ ಪಿಸಿ ಮಾರುಕಟ್ಟೆಯು 2024ರ ಹಣಕಾಸು ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 2.6 ರಷ್ಟು ಬೆಳವಣಿಗೆಯಾಗಿದೆ ಎಂದು ವರದಿಯೊಂದು ಗುರುವಾರ ತಿಳಿಸಿದೆ. ಈ ಅವಧಿಯಲ್ಲಿ ಭಾರತದಲ್ಲಿ 3.07 ಮಿಲಿಯನ್ (30.07 ಲಕ್ಷ) ಪಿಸಿಗಳು ಮಾರಾಟವಾಗಿವೆ.
ಇಂಟರ್ನ್ಯಾಷನಲ್ ಡಾಟಾ ಕಾರ್ಪೊರೇಷನ್ (ಐಡಿಸಿ) ಪ್ರಕಾರ, ಡೆಸ್ಕ್ ಟಾಪ್ ಮತ್ತು ವರ್ಕ್ ಸ್ಟೇಷನ್ಗಳ ಮಾರಾಟವು ಕ್ರಮವಾಗಿ ವರ್ಷದಿಂದ ವರ್ಷಕ್ಕೆ ಶೇಕಡಾ 10.1 ಮತ್ತು ಶೇಕಡಾ 2.7 ರಷ್ಟು ಹೆಚ್ಚಾಗಿದೆ. ಹಾಗೆಯೇ ನೋಟ್ ಬುಕ್ಗಳು ಮಾರಾಟ ವರ್ಷದಿಂದ ವರ್ಷಕ್ಕೆ ಶೇಕಡಾ 1.7 ರಷ್ಟು ಕುಸಿದಿದೆ.
ನೋಟ್ ಬುಕ್ಗಳಿಗೆ ಬೇಡಿಕೆ ಕಡಿಮೆಯಾದ ಹೊರತಾಗಿಯೂ ಪ್ರೀಮಿಯಂ ನೋಟ್ ಬುಕ್ಗಳ ($ 1,000 ಕ್ಕಿಂತ ಹೆಚ್ಚು) ಮಾರಾಟ ವರ್ಷದಿಂದ ವರ್ಷಕ್ಕೆ ಶೇಕಡಾ 21 ರಷ್ಟು ಹೆಚ್ಚಾಗಿದೆ. 2023 ರ ಮೊದಲ ತ್ರೈಮಾಸಿಕದಲ್ಲಿ ವೈಯಕ್ತಿಕ ಗ್ರಾಹಕರಿಂದ ಪಿಸಿಗಳ ಖರೀದಿಯು ವರ್ಷದಿಂದ ವರ್ಷಕ್ಕೆ ಶೇಕಡಾ 4.4 ರಷ್ಟು ಬೆಳೆದಿದೆ. ಎಂಟರ್ ಪ್ರೈಸ್ ಆರ್ಡರ್ಗಳಲ್ಲಿ ಕುಸಿತದ ಹೊರತಾಗಿಯೂ ಸರ್ಕಾರಿ ವಿಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 56.9 ರಷ್ಟು ಬೆಳವಣಿಗೆ ಹಿನ್ನೆಲೆಯಲ್ಲಿ ವಾಣಿಜ್ಯ ವಿಭಾಗದಲ್ಲಿನ ಪಿಸಿಗಳ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡಾ 1.3 ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.