ಕಾರವಾರ: ಲಿಫ್ಟ್‌ನಲ್ಲಿ ಕೇಬಲ್ ತುಂಡಾಗಿ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಕುಮಟಾ ತಾಲ್ಲೂಕಿನ ಸುಭಾಷ್ ರಸ್ತೆಯ ಜಗದಂಬಾ ಎಲೆಕ್ಟ್ರಿಕಲ್ಸ್ ಕಟ್ಟಡದಲ್ಲಿ ಬುಧವಾರ ನಡೆಯಿತು.
ರಾಜಸ್ಥಾನದ ಗೋಪಾಲ್ ಸಿಂಗ್(25) ಮೃತ ವ್ಯಕ್ತಿ. ಸ್ವಲ್ಪ ಕೆಟ್ಟುಹೋಗಿದ್ದ ಲಿಫ್ಟ್ನಲ್ಲಿಯೇ ಭಾರವಾದ ವಸ್ತುಗಳನ್ನು ಸಾಗಿಸುತ್ತಿದ್ದಾಗ ದುರಂತ ಸಂಭವಿಸಿದೆ ಎನ್ನಲಾಗಿದೆ. ಯುವಕ ಸಿಂಗ್ ಜಗದಂಬಾ ಎಲೆಕ್ಟ್ರಿಕಲ್ಸ್ ಕಟ್ಟಡ ಮಾಲೀಕರ ಸಂಬಂಧಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೀಕನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಜುತ್ತಿದ್ದ ವೇಳೆ ಕೊಚ್ಚಿ ಹೋಗಿದ್ದ ವಿದ್ಯಾರ್ಥಿಗಳು; ಓರ್ವ ನಾಪತ್ತೆ, ಐವರ ರಕ್ಷಣೆ:ಸಮುದ್ರದಲ್ಲಿ ಆಟವಾಡುತ್ತಿದ್ದಾಗ ಓರ್ವ ಪ್ರವಾಸಿಗ ವಿದ್ಯಾರ್ಥಿ ಕಣ್ಮರೆಯಾಗಿರುವ ಘಟನೆ ಗೋಕರ್ಣದ ಬಾವಿಕೊಡ್ಲ ಕಡಲತೀರದಲ್ಲಿ ಬುಧವಾರ ನಡೆದಿದೆ. ಕೋಲಾರದ ಶ್ರೀನಿವಾಸಪುರದ ವಿನಯ್ ಎಸ್.ವಿ.(22) ನಾಪತ್ತೆಯಾದ ವಿದ್ಯಾರ್ಥಿ.
ಬೆಂಗಳೂರಿನಿಂದ ಹಿಲ್‌ಸೈಡ್ ಫಾರ್ಮಸಿ ಕಾಲೇಜಿನ 48 ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಗೋಕರ್ಣಕ್ಕೆ ಆಗಮಿಸಿದ್ದರು. ಈ ವೇಳೆ ಸಮುದ್ರದಲ್ಲಿ ಈಜಲು ತೆರಳಿದ್ದು, ಕೆಲವರು ಕೊಚ್ಚಿ ಹೋಗಿದ್ದರು. ಅಷ್ಟರಲ್ಲಿ ಸ್ಥಳೀಯರು ಹಾಗೂ ಕರಾವಳಿ ಕಾವಲು ಪಡೆ ನೆರವಿನಿಂದ ಐವರು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿತ್ತು. ಆದರೆ ಓರ್ವ ನಾಪತ್ತೆಯಾಗಿದ್ದು, ತೀವ್ರ ಹುಡುಕಾಟ ಮುಂದುವರಿಸಲಾಗಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಗಳಿಗೆ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೋಣಿ ಮಗುಚಿ ಅಸ್ವಸ್ಥಗೊಂಡಿದ್ದ ಮೀನುಗಾರ ಸಾವು:ಮೀನುಗಾರಿಕೆಗೆ ತೆರಳಿದ್ದಾಗ ನೀರಿಗೆ ಬಿದ್ದು ಅಸ್ವಸ್ಥಗೊಂಡಿದ್ದ ಮೀನುಗಾರನೋರ್ವ ಸಾವನ್ನಪ್ಪಿರುವ ಘಟನೆ ಭಟ್ಕಳ ತಾಲೂಕಿನ ಮುರುಡೇಶ್ವರ ಕಡಲತೀರದಲ್ಲಿ ಇಂದು ನಡೆದಿದೆ. ಮುರುಡೇಶ್ವರದ ಮಾವಳ್ಳಿ ನಿವಾಸಿ ಹೈದರ್ ಅಲಿ(45) ಮೃತ ದುರ್ದೈವಿ.
ಬೆಳಗ್ಗೆ ಕಡಲ ತೀರದಿಂದ 50 ಮೀಟರ್ ದೂರದಲ್ಲಿ ಬಲೆ ಹಾಕುತ್ತಿದ್ದ ವೇಳೆ ಅಲೆಗಳ ಹೊಡೆತಕ್ಕೆ ದೋಣಿ ಮಗುಚಿ ನೀರಿಗೆ ಬಿದ್ದಿದ್ದರು. ತಕ್ಷಣ ಹತ್ತಿರದಲ್ಲಿದ್ದ ಬೋಟ್‌ನವರು ರಕ್ಷಣೆ ಮಾಡಿ RNS ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಹೈದರ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ಭೀಕರ ಅಪಘಾತ: ಜನ್ಮದಿನ ಆಚರಿಸಿ ಬರುತ್ತಿದ್ದ ಮೂವರು ವಿದ್ಯಾರ್ಥಿಗಳ ದಾರುಣ ಸಾವು - Bengaluru Accident