ಬೆಳ್ತಂಗಡಿ(ದಕ್ಷಿಣ ಕನ್ನಡ):ಸ್ಟೇ ವೈರ್ಗೆ ವಿದ್ಯುತ್ ಸ್ವರ್ಶಿಸಿ ಯುವತಿ ಸಾವನ್ನಪ್ಪಿದ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಶಿಬಾಜೆ ಗ್ರಾಮದಲ್ಲಿ ಜೂ.27 ರಂದು ಸಂಜೆ ಸಂಭವಿಸಿದೆ.
ಬರ್ಗುಲಾ ಎಂಬಲ್ಲಿನ ಗಣೇಶ್ ಶೆಟ್ಟಿ ಮತ್ತು ರೋಹಿಣಿ ಪುತ್ರಿ ಪ್ರತೀಕ್ಷಾ ಶೆಟ್ಟಿ(20) ಎಂಬವರು ನಿನ್ನೆ ಸಂಜೆ ಮನೆಯ ರಸ್ತೆ ಸಮೀಪ ಪಾರ್ಸೆಲ್ ಬಂದಿದ್ದರಿಂದ ರಸ್ತೆಗೆ ಬಂದಾಗ ನೀರಿನಲ್ಲಿ ವಿದ್ಯುತ್ ಪ್ರವಹಿಸಿದೆ. ಸ್ಟೇ ವೈರ್ಗೆ ವಿದ್ಯುತ್ ತಂತಿ ಸ್ವರ್ಶಿಸಿ ಅದು ನೀರಿಗೆ ಪ್ರವಹಿಸಿದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ಪ್ರತೀಕ್ಷಾ ಶೆಟ್ಟಿ ಕೊನೆಯುಸಿರೆಳೆದಿದ್ದಾರೆ.
ಮೆಸ್ಕಾಂ ಇಲಾಖೆ ನಿರ್ಲಕ್ಷ್ಯವೇ ಯುವತಿ ಸಾವಿಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಯವರು ಕಳೆದ ಕೆಲವು ಸಮಯಗಳಿಂದ ಅಪಾಯಕಾರಿ ವಿದ್ಯುತ್ ತಂತಿ ಹಾಗೂ ಕಂಬ ತೆರವುಗೊಳಿಸುವಂತೆ ಮೆಸ್ಕಾಂ ಇಲಾಖೆಗೆ ಮನವಿ ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ಇಂತಹ ಘಟನೆ ಸಂಭವಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಆದ್ದರಿಂದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಮನೆಯವರಿಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿದ್ದಾರೆ. ಮೆಸ್ಕಾಂ ಇಲಾಖೆಯಿಂದ ಈಗಾಗಲೇ ರೂ 5 ಲಕ್ಷ ಪರಿಹಾರ ನೀಡುವ ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರೂ 25 ಲಕ್ಷ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಉಡುಪಿ: ನಿಲ್ಲಿಸಿದ್ದ ಬಸ್ಗೆ ಹಿಂದಿನಿಂದ ಗುದ್ದಿದ ಹೊಸ ಫಾರ್ಚೂನರ್ ಕಾರು - New Fortuner car hit the bus