ರಾಯಚೂರು :ಕುರಿ ಕಾಯಲು ತೆರಳಿದ್ದ ಯುವತಿಯೊಬ್ಬಳು ಕೆರೆಗೆ ನೀರು ಕುಡಿಯಲು ಹೋದಾಗ ಕಾಲು ಜಾರಿ ಬಿದ್ದು ಮೃತಪಟ್ಟಿರುವ ದುರ್ಘಟನೆ ಜಿಲ್ಲೆಯ ಮಾನವಿ ತಾಲೂಕಿನ ಪೆಚಲಬಂಡ ಕ್ಯಾಂಪ್ನಲ್ಲಿ ಸಂಭವಿಸಿದೆ. ಲಕ್ಷ್ಮಿ (19) ಮೃತ ಯುವತಿ ಎಂದು ಗುರುತಿಸಲಾಗಿದೆ.
ಇಬ್ಬರು ಅಕ್ಕ-ತಂಗಿಯರಿಬ್ಬರು ಕುರಿ ಕಾಯಲು ಕ್ಯಾಂಪ್ ಹೊರ ವಲಯಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಅಕ್ಕ ಲಕ್ಷ್ಮಿಗೆ ಬಾಯಾರಿಕೆಯಾಗಿದ್ದು, ಪಕ್ಕದ ಜಮೀನೊಂದರಲ್ಲಿದ್ದ ಖಾಸಗಿ ಕೆರೆಯನ್ನು ಕಂಡು ಅಲ್ಲಿಗೆ ಯುವತಿ ನೀರು ಕುಡಿಯುವುದಕ್ಕೆ ಮುಂದಾಗಿದ್ದಳು. ಆದರೆ ಕಾಲು ಜಾರಿ ಬಿದ್ದು, ಕೆರೆಯಲ್ಲಿ ಮುಳುಗಿದ್ದಳು. ಅಲ್ಲಿಯೇ ಇದ್ದ ಸ್ಥಳೀಯರು ಯುವತಿಯನ್ನು ಮೇಲಕ್ಕೆ ಎತ್ತಿದ್ದು, ಆಸ್ಪತ್ರೆಗೆ ಕರೆ ತರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ ಎಂದು ಮಾನವಿ ಪೊಲೀಸರು ತಿಳಿಸಿದ್ದಾರೆ.