ಹುಬ್ಬಳ್ಳಿ:ಕ್ಷುಲ್ಲಕ ವಿಚಾರವಾಗಿ ಯುವಕನೊಬ್ಬನಿಗೆ ಚಾಕು ಇರಿದ ಘಟನೆ ಅಯೋಧ್ಯೆ ನಗರದ ವಾಟರ್ಟ್ಯಾಂಕ್ ಬಳಿ ನಡೆದಿದೆ. ಅಂಬೇಡ್ಕರ್ ಕಾಲೋನಿ ನಿವಾಸಿ ಮಾರುತಿ ಚಾಕು ಇರಿತಕ್ಕೊಳಗಾದ ಯುವಕ. ಬುಧವಾರ ಸಂಜೆ ವಾಟರ್ಟ್ಯಾಂಕ್ ಬಳಿ ನಿಂತಾಗ ಮೂರ್ನಾಲ್ಕು ಯುವಕರು ಬಂದು ಚಾಕು ಇರಿದು ಪರಾರಿಯಾಗಿದ್ದಾರೆ. ಚಾಕು ಇರಿಯುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಾರುತಿಯ ಬೆನ್ನು ಹಾಗೂ ಪಕ್ಕೆಲುಬಿಗೆ ಚಾಕು ಇರಿಯಲಾಗಿದ್ದು, ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಮಾಹಿತಿ ತಿಳಿದು ಕಾನೂನು ಸುವ್ಯವಸ್ಥೆ ಡಿಸಿಪಿ ನಂದಗಾವಿ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಹಾಗೂ ಸಂಬಂಧಿಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಕೊಲೆ ಯತ್ನದ ಪ್ರಕರಣವನ್ನು ದಾಖಲು ಮಾಡಿಕೊಂಡು ಚಾಕು ಇರಿದು ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ಶೋಧ ಆರಂಭಿಸಿದ್ದಾರೆ.