ನವದೆಹಲಿ: ಇ-ಕಾಮರ್ಸ್ ಫ್ಲಾಟ್ಫಾರ್ಮ್ಗಳಾದ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ನಲ್ಲಿ ನಡೆದ ಅವ್ಯವಹಾರಗಳ ಕುರಿತು ಭಾರತದ ಸ್ಫರ್ಧಾ ಆಯೋಗ (ಸಿಸಿಐ) ನಡೆಸುತ್ತಿರುವ ತನಿಖೆಗೆ ತಡೆ ನೀಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಕರ್ನಾಟಕದ ಹೈಕೋರ್ಟ್ಗೆ ವರ್ಗಾಯಿಸಿದೆ. ಈ ಅರ್ಜಿಗಳನ್ನು ಅಲ್ಲಿಯೇ ಇತ್ಯರ್ಥ ಮಾಡಲು ಸೂಚಿಸಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ದ ಪೀಠದ ಮುಂದೆ ಈ ಅರ್ಜಿಗಳ ವಿಚಾರಣೆ ಸೋಮವಾರ ನಡೆಯಿತು. ನ್ಯಾಯೋಚಿತ ವ್ಯಾಪಾರ ನಿಯಂತ್ರಕ ಸಂಸ್ಥೆಯಾದ ಭಾರತೀಯ ಸ್ಪರ್ಧಾತ್ಮಕ ಆಯೋಗವು (ಸಿಸಿಐ) ತನ್ನ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿರುದ್ಧ ವಾದಿಸಿತು.
ಬಳಿಕ ಸುಪ್ರೀಂಕೋರ್ಟ್, ಎಲ್ಲ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠಕ್ಕೆ ವರ್ಗಾಯಿಸಲಾಗುವುದು. ಹಾಗೊಂದು ವೇಳೆ ವರ್ಗವಾದ ಅರ್ಜಿಗಳು ಇತ್ಯರ್ಥವಾಗದೇ ಹೋದಲ್ಲಿ, ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಹೆಚ್ಚಿನ ಸಮಯ ಪಡೆದು ಪ್ರಕರಣ ಮುಗಿಸಬೇಕು ಎಂದು ಸಲಹೆ ನೀಡಿತು.
ಕರ್ನಾಟಕ ಹೈಕೋರ್ಟ್ ಸೇರಿದಂತೆ ಯಾವುದೇ ಹೈಕೋರ್ಟ್ಗಳಲ್ಲಿ ಇಂತಹ ಪ್ರಕರಣಗಳು ಬಾಕಿ ಇದ್ದಲ್ಲಿ ಆ ಕೋರ್ಟ್ಗಳು ನೀಡುವ ಆದೇಶಗಳು ಅಂತಿಮವಾಗಿರುತ್ತವೆ ಎಂದು ಇದೇ ವೇಳೆ ಸುಪ್ರೀಂಕೋರ್ಟ್ ಹೇಳಿದೆ.
ಈ ಹಿಂದೆ, ಎರಡು ಡಜನ್‌ಗೂ ಹೆಚ್ಚು ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ನ ಏಕ ನ್ಯಾಯಾಧೀಶ ಪೀಠಕ್ಕೆ ವರ್ಗಾಯಿಸಲು ಸಿಸಿಐನಿಂದ ಅಫಿಡವಿಟ್ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಅಟಾರ್ನಿ ಜನರಲ್ಗೆ ಸೂಚಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಸಿಸಿಐ ತನ್ನ ನಿರ್ಧಾರವನ್ನು ಸುಪ್ರೀಂಗೆ ತಿಳಿಸಿತ್ತು.
ರಿಟ್ ಅರ್ಜಿ ತಿರಸ್ಕರಿಸಿದ್ದ ಹೈಕೋರ್ಟ್: ಇದಕ್ಕೂ ಮೊದಲು, ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಇ - ಕಾಮರ್ಸ್ ಪ್ಲಾಟ್ಫಾರ್ಮ್ಗಳು ತಮ್ಮ ವಿರುದ್ಧ ನಡೆಸಲಾಗುತ್ತಿರುವ ತನಿಖೆ ರದ್ದು ಮಾಡಬೇಕು ಎಂದು ಕೋರಿ ಕರ್ನಾಟಕ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದವು. ವಿಚಾರಣೆಯ ವೇಳೆ ಸಿಸಿಐ ತನಿಖೆಯನ್ನು ಎತ್ತಿಹಿಡಿದ ಕೋರ್ಟ್, ಅರ್ಜಿಗಳನ್ನು ವಜಾಗೊಳಿಸಿತ್ತು. ಸ್ಪರ್ಧಾತ್ಮಕ ವಾತಾವರಣದ ವಿರುದ್ಧ ತನಿಖೆ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿತ್ತು.
ಏನಿದು ಪ್ರಕರಣ?: ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳು ಸ್ಮಾರ್ಟ್ಫೋನ್ಗಳು ಮತ್ತು ಇತರ ವಸ್ತುಗಳ ವ್ಯವಹಾರದಲ್ಲಿ ಕೆಲವರ ಜೊತೆ ಕೈಜೋಡಿಸಿವೆ. ಮಾರಾಟವು ನ್ಯಾಯಸಮ್ಮತವಾಗಿಲ್ಲ. ಭಾರತದ ಸ್ಪರ್ಧಾತ್ಮಕ ಕಾನೂನುಗಳನ್ನು ಉಲ್ಲಂಘಿಸಿವೆ ಎಂದು ದೆಹಲಿಯ ಸಣ್ಣ ಮತ್ತು ಮಧ್ಯಮ ವ್ಯಾಪಾರ ಮಾಲೀಕರನ್ನು ಪ್ರತಿನಿಧಿಸುವ ವ್ಯಾಪಾರ್ ಮಹಾಸಂಘ (ಡಿವಿಎಂ) ಎರಡು ಅತಿದೊಡ್ಡ ಇ-ಕಾಮರ್ಸ್ ಕಂಪನಿಗಳ ವಿರುದ್ಧ ಸಿಸಿಐಗೆ ದೂರು ನೀಡಿತ್ತು.
ಇದನ್ನು ಅಂಗೀಕರಿಸಿದ್ದ ಸಿಸಿಐ ಎರಡು ಕಂಪನಿಗಳ ವಿರುದ್ಧ ತನಿಖೆ ಆರಂಭಿಸಿತ್ತು. ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಕಂಪನಿಗಳು ಉದ್ಯಮ ನಡೆಸುವ ರೀತಿ ಸರಿಯಿಲ್ಲ. ತಮ್ಮ ಫ್ಲಾಟ್ಫಾರ್ಮ್ನಲ್ಲಿ ನೀಡಲಾದ ಹೆಚ್ಚಿನ ರಿಯಾಯಿತಿಗಳು ಕೆಲವರ ಕೈ ಸೇರುವಂತೆ ಮಾಡಲಾಗಿದೆ ಎಂದು ಆರೋಪಿಸಿತ್ತು.
ಇದನ್ನೂ ಓದಿ: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಕೇಸ್: ಪತ್ನಿ, ಸಂಬಂಧಿಕರ ವಿರುದ್ಧದ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ