ಶಿವಮೊಗ್ಗ:ಜಮೀನು ವಿವಾದ ಹಿನ್ನೆಲೆ ಯುವಕನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಶಿವಮೊಗ್ಗ ಹೊರವಲಯದ ದುಮ್ಮಳ್ಳಿ ಗ್ರಾಮದಲ್ಲಿ ನಡೆದಿದೆ. ದುಮ್ಮಳ್ಳಿ ಗ್ರಾಮದ ಸತೀಶ್ ನಾಯ್ಕ (28) ಕೊಲೆಯಾದ ಯುವಕ. ಇಂದು ಎಂದಿನಂತೆ ಜಮೀನಿಗೆ ಹೋದ ಸತೀಶ್ನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸತೀಶ್ ಅವರ ತಂದೆಗೆ ಸೇರಿದ ಮೂರುವರೆ ಎಕರೆ ಭೂಮಿ ಇದ್ದು, ವಿವಾದ ನಡೆಯುತ್ತಿತ್ತು. ಈ ಸಂಬಂಧ ಇದೇ ಗ್ರಾಮದ ಮಂಜನಾಯ್ಕ ರವರೊಂದಿಗೆ ಜಮೀನು ವಿವಾದ ಕೋರ್ಟ್ನಲ್ಲಿ ನಡೆಯುತ್ತಿತ್ತು. ಕೋರ್ಟ್ ವಿವಾದ ಬಗೆಹರಿಯುವ ತನಕ ಎರಡು ಕಡೆಯವರು ಸಹ ಜಮೀನಿಗೆ ಹೋಗಬಾರದು ಎಂದು ನ್ಯಾಯಾಲಯ ತಿಳಿಸಿತ್ತು. ಇಬ್ಬರಲ್ಲಿ ಯಾರೇ ಹೋದರು ಸಹ ಆ ಕುರಿತು ಕೋರ್ಟ್ಗೆ ಸಾಕ್ಷ್ಯವಾಗಿ ಫೋಟೋ, ವಿಡಿಯೋ ನೀಡಬೇಕೆಂದು ತಿಳಿಸಿತ್ತು. ಅದರಂತೆ ಇಂದು ಮಂಜನಾಯ್ಕನ ಮಕ್ಕಳು ಜಮೀನಿಗೆ ಹೋಗಿದ್ದ ಕಾರಣ ಸತೀಶ್ ನಾಯ್ಕ ವಿಚಾರಿಸಲು ಹೋದಾಗ ಸತೀಶ್ ನಾಯ್ಕನನ್ನು ಮಂಜನಾಯ್ಕನ ಮಗ ಅಖಿಲೇಶ್ ಎಂಬಾತ ಕುಡಗೋಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಮಂಜನಾಯ್ಕನ ಮನೆ ಮೇಲೆ ಕಲ್ಲು ತೂರಾಟ: ಸತೀಶ್ ನಾಯ್ಕ ಗ್ರಾಮದಲ್ಲಿ ಒಳ್ಳೆಯ ಹುಡುಗನಾಗಿದ್ದ, ಈತ ಕೂಲಿ ಕೆಲಸ ಮಾಡಿಕೊಂಡು ತನ್ನ ಪಾಡಿಗೆ ತಾನಿದ್ದ. ಇಂದು ಆತನನ್ನು ಕೊಲೆ ಮಾಡಿದ್ದನ್ನು ಖಂಡಿಸಿ ಗ್ರಾಮಸ್ಥರು ಮಂಜನಾಯ್ಕನ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ತಕ್ಷಣ ಅಲ್ಲೇ ಇದ್ದ ಪೊಲೀಸರು ಮಂಜನಾಯ್ಕನ ಮನೆಯಲ್ಲಿದ್ದ ಮಹಿಳೆಯರನ್ನು ರಕ್ಷಿಸಿ ತಮ್ಮ ವಾಹನದಲ್ಲಿ ಗ್ರಾಮದಿಂದ ಹೊರಕ್ಕೆ ಕರೆದುಕೊಂಡು ಹೋಗಿದ್ದಾರೆ.
ಇತ್ತ ಮೃತ ಸತೀಶ್ ನಾಯ್ಕನ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿದ್ದು, ಸತೀಶ್ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣ ಸಂಬಂಧ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಮೃತನ ಸಹೋದರ ನಾಗೇಶ್ ಮಾತನಾಡಿ, ನಮ್ಮಲ್ಲಿ 3.24 ಗುಂಟೆ ಭೂಮಿ ಇದೆ. ಈ ಕುರಿತು ಎರಡು ಸಲ ಮಂಜನಾಯ್ಕನ ಕುಟುಂಬಕ್ಕೂ ಹಾಗೂ ನಮ್ಮ ಕುಟುಂಬಕ್ಕೂ ಗಲಾಟೆ ನಡೆದು ಈಗ ಅದು ಕೋರ್ಟ್ ನಲ್ಲಿದೆ. ತೋಟಕ್ಕೆ ನಾನು ನಮ್ಮ ತಂದೆ, ತಮ್ಮ ಬರ್ತಾ ಇರುತ್ತಿದ್ದೆವು. ಕೋರ್ಟ್ನಲ್ಲಿ ಈ ಜಮೀನಿಗೆ ಯಾರು ಸಹ ಬರುವ ಹಾಗಿಲ್ಲ. ಅಕ್ರಮವಾಗಿ ಪ್ರವೇಶ ಮಾಡಿದವರ ಕುರಿತು ವಿಡಿಯೋ ಮಾಹಿತಿ ನೀಡಬೇಕೆಂದು ಎರಡು ಕಡೆಯ ವಕೀಲರು ತಿಳಿಸಿದ್ದರು. ನನ್ನ ತಮ್ಮ ಮನೆಯಿಂದ ಜಮೀನಿಗೆ ಬರುವಾಗ ಅವರ ಕುಟುಂಬದವರೆಲ್ಲರೂ ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ದೂರಿದರು.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದುಮ್ಮಳ್ಳಿ ಎಂಬ ಗ್ರಾಮದಲ್ಲಿ ಇಂದು ಬೆಳಗ್ಗೆ ಸತೀಶ್ ನಾಯ್ಕ ಎಂಬುವನ ಕೊಲೆ ನಡೆದಿದೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ. ಸತೀಶ್ ನಾಯ್ಕನನ್ನು ಕುಡಗೋಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ಅಖಿಲೇಶ್ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನೂ ಸಹ ವಶಕ್ಕೆ ಪಡೆಯಲಾಗುವುದು. ಆರೋಪಿ ಮನೆ ಮೇಲೆ ಕಲ್ಲು ತೂರಾಟ ನಡೆಸಿರುವ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ದಾವಣಗೆರೆ: ತಂದೆಯ ಸಾವಿನಿಂದ ಮನನೊಂದು ಮಗ ಆತ್ಮಹತ್ಯೆ - Son Commits Suicide