ರಾಯಚೂರು:ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಹೆಸರಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಸಂದೇಶ ಕಳುಹಿಸಿ 5 ಕೋಟಿ ರೂ.ಗೆ ಬೇಡಿಕೆಯಿಟ್ಟ ಆರೋಪದ ಮೇಲೆ ಯುವಕನೋರ್ವನನ್ನು ಮುಂಬೈ ಪೊಲೀಸರು ಮಂಗಳವಾರ ರಾಯಚೂರಿನ ಮಾನ್ವಿಯಲ್ಲಿ ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಸೊಹೈಲ್ ಪಾಷಾ ಎಂಬಾತ ತಾನು ಬರೆದ ಹಾಡು ಪ್ರಸಿದ್ಧಿಯಾಗಬೇಕೆಂದು ಬಯಸಿ ಈ ತಂತ್ರ ರೂಪಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಮಾನವಿ ಪಟ್ಟಣದ ಶಾದಿ ಮಹಲ್ ಬಳಿ ಇರುವ ನಿವಾಸಿ ಸೋಹಲ್ ಪಾಷಾನನ್ನು ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ. ನವೆಂಬರ್ 7ರಂದು ಮುಂಬೈ ಟ್ರಾಫಿಕ್ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಬೆದರಿಕೆ ಸಂದೇಶಗಳು ಬಂದಿದ್ದವು. ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿರುವ ಗ್ಯಾಂಗ್ಸ್ಟರ್ ಗುಂಪಿನ ಸದಸ್ಯ ಎಂದು ಹೇಳಿ ಸಂದೇಶಗಳನ್ನು ಕಳಿಸಲಾಗಿತ್ತು. ಸಲ್ಮಾನ್ ಖಾನ್ 5 ಕೋಟಿ ರೂ. ಪಾವತಿಸದಿದ್ದರೆ ಅವರನ್ನು ಕೊಲ್ಲಲಾಗುವುದು ಎಂದು ಬೆದರಿಸಲಾಗಿತ್ತು. "ಮೇನ್ ಸಿಕಂದರ್ ಹು" ಹಾಡನ್ನು ರಚಿಸಿದವರನ್ನೂ ಸಹ ಕೊಲ್ಲುವುದಾಗಿ ಸಂದೇಶದಲ್ಲಿ ಎಚ್ಚರಿಕೆ ನೀಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ತನಿಖೆ ಕೈಗೊಂಡ ಮುಂಬೈ ಪೊಲೀಸರ ಅಪರಾಧ ವಿಭಾಗವು ಸಂದೇಶಗಳು ಬಂದ ಮೊಬೈಲ್ ಸಂಖ್ಯೆಯು ರಾಯಚೂರಿನದು ಎಂಬುದನ್ನು ಪತ್ತೆಹಚ್ಚಿದ್ದರು. ಅದರಂತೆ ಕರ್ನಾಟಕಕ್ಕೆ ಬಂದ ಪೊಲೀಸ್ ತಂಡ, ನಂಬರ್ ಹೊಂದಿರುವ ರಾಯಚೂರಿನ ವೆಂಕಟೇಶ್ ನಾರಾಯಣ್ ಎಂಬವರನ್ನು ವಿಚಾರಣೆಗೆ ಒಳಪಡಿಸಿದೆ. ಆದರೆ ನಾರಾಯಣ್ ಮೊಬೈಲ್ ಫೋನ್‌ನಲ್ಲಿ ಇಂಟರ್ನೆಟ್ ಸೌಲಭ್ಯವೂ ಇಲ್ಲ ಎಂಬುದು ತನಿಖೆಯಲ್ಲಿ ಗೊತ್ತಾಯಿತು. ಬಳಿಕ ಆತನ ಫೋನ್‌ಗೆ ವಾಟ್ಸಾಪ್ ಇನ್‌ಸ್ಟಾಲೇಶನ್ ಒಟಿಪಿ ಬಂದಿರುವುದನ್ನು ಪೊಲೀಸರು ಕಂಡುಕೊಂಡಿದ್ದಾರೆ.
ಆಗ, ನವೆಂಬರ್ 3ರಂದು ಮಾರುಕಟ್ಟೆಯೊಂದರಲ್ಲಿ ಅಪರಿಚಿತನೋರ್ವ ತಮ್ಮ ಬಳಿಗೆ ಬಂದು ಕರೆ ಮಾಡಲು ಫೋನ್ ತೆಗೆದುಕೊಂಡಿದ್ದ ಎಂದು ನಾರಾಯಣ್ ಪೊಲೀಸರಿಗೆ ತಿಳಿಸಿದ್ದಾರೆ. ಒಟಿಪಿ ಪಡೆಯಲು ನಾರಾಯಣ್ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡ ವ್ಯಕ್ತಿ, ತನ್ನ ಸ್ವಂತ ಮೊಬೈಲ್‌ಗೆ ವಾಟ್ಸಾಪ್ ಅನ್ನು ಇನ್ಸ್ಟಾಲ್ ಮಾಡಿಕೊಂಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.