ಚಿಕ್ಕೋಡಿ: ರಾಜ್ಯೋತ್ಸವವನ್ನು ಕರ್ನಾಟಕ ರಾಜ್ಯಾದ್ಯಂತ ಹಬ್ಬದಂತೆ ಆಚರಣೆ ಮಾಡುತ್ತಾರೆ. ಎಲ್ಲಾದರೂ ಕನ್ನಡದ ಅಸ್ಮಿತೆಗೆ ಧಕ್ಕೆ ಬಂದರೆ ಕನ್ನಡ ಪರ ಹೋರಾಟಗಾರರು ಹೋರಾಟ ಮಾಡಿ ಕನ್ನಡ ಉಳಿವಿಗಾಗಿ ನಿರಂತರವಾಗಿ ಶ್ರಮ ವಹಿಸಿದ್ದನ್ನು ನಾವು ನೀವು ನೋಡಿದ್ದೇವೆ. ಆದರೆ, ಎಲೆಮರೆಯ ಕಾಯಿಯಂತೆ ಕಳೆದ 24 ವರ್ಷಗಳಿಂದ ಕನ್ನಡ ಪ್ರೇಮ ಮೆರೆಯುತ್ತಾ, ಬೆಳೆಸುತ್ತಾ, ಕನ್ನಡವನ್ನು ಕಲಿಸುತ್ತಾ ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಯುವಕನ ಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಬಸವರಾಜ ನಿಂಗಪ್ಪ ಮಾಳಿ ಎಂಬ ಯುವಕ ಕಳೆದ 24 ವರ್ಷಗಳಿಂದಲೂ ಕನ್ನಡದ ಬಗ್ಗೆ ಒಬ್ಬಂಟಿಯಾಗಿ ಜಾಗೃತಿ ಮೂಡಿಸುತ್ತಿದ್ದಾರೆ. ಕನ್ನಡ ನೆಲದ ಬಗ್ಗೆ ಹೋರಾಡಿದ ಇಮ್ಮಡಿ ಪುಲಕೇಶಿಯ ಭಾವಚಿತ್ರವನ್ನು ಎದೆಯ ಮೇಲೆ ಹಾಕಿ, ಹಣೆಗೆ ಕನ್ನಡ ಧ್ವಜವನ್ನು ಹೋಲುವ ಕುಂಕುಮ ಅರಿಶಿಣ ಹಚ್ಚಿ, ಕೈ ಮೇಲೆ ಕನ್ನಡ ಎಂದು ಹಚ್ಚೆ ಹಾಕಿಸಿಕೊಂಡಿರುವ ಇವರು ವರ್ಷವಿಡೀ ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಬಸವರಾಜ್ ಪ್ರತಿ ಉಸಿರಿನಲ್ಲೂ ಕನ್ನಡ ಪ್ರೇಮ:ತನ್ನ ಖಾನಾವಳಿಯಲ್ಲಿ ನಿತ್ಯ ಬರುವ ಸಾವಿರಾರು ಗ್ರಾಹಕರ ಗಮನ ಸೆಳೆದು, ಅನ್ಯ ಭಾಷಿಕರಿಗೆ ಕನ್ನಡ ಮಾತನಾಡಿ ಎನ್ನುತ್ತಾ, ಕನ್ನಡ ಕಲಿಸುತ್ತಾ ತಾವು ಮಾಡುವ ಕೆಲಸದಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಇದುವರೆಗೆ ಯಾವುದೇ ಪ್ರಚಾರ ಬಯಸದೇ ತಾನಾಯ್ತು ತನ್ನ ಕೆಲಸವಾಯಿತು, ತನ್ನ ಕನ್ನಡ ಪ್ರೇಮವಾಯಿತು ಎಂಬ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಬಸವರಾಜ್ ಪ್ರತಿ ಉಸಿರಿನಲ್ಲೂ ಕನ್ನಡ ಪ್ರೇಮವಿದೆ. ಕನ್ನಡ ನೆಲದ ಬಗ್ಗೆ ಅತಿಯಾದ ಗೌರವ ಹೊಂದಿದ್ದಾರೆ. ತಾವು ಮಲಗುವ ಕೋಣೆಗಳಿಗೆ ಕನ್ನಡ ಧ್ವಜ ಹೋಲುವ ಬಣ್ಣಗಳನ್ನು ಬಳಸಿದ್ದಾರೆ. ಜೊತೆಗೆ ವರ್ಷವೂ ಅವರ ಮನೆಯ ಮೇಲೆ ಕನ್ನಡ ಧ್ವಜ ರಾರಾಜಿಸುತ್ತಿರುತ್ತದೆ. ಇವರ ಕನ್ನಡ ಪ್ರೇಮವನ್ನು ನೋಡಿ ಅಕ್ಕ ಪಕ್ಕದ ಊರಿನವರು ಹಾಗೂ ಅಥಣಿ ಪಟ್ಟಣದ ನಿವಾಸಿಗಳು ಭೇಷ್ ಅನ್ನುತ್ತಿದ್ದಾರೆ.
ಬಸವರಾಜ್ ಮಾಳಿ ಮಾತನಾಡಿ, "7ನೇ ತರಗತಿಯಿಂದ ಕನ್ನಡದ ಬಗ್ಗೆ ನನ್ನಲ್ಲಿ ಪ್ರೇಮ ಮೂಡಿತು. ಮಹಾರಾಷ್ಟ್ರದ ಗಡಿ ಹೊಂದಿರುವ ಸಂಕೇಶ್ವರ ಪಟ್ಟಣದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗ ಅಲ್ಲಿ ಮರಾಠಿಮಯ ವಾತಾವರಣ ಹಾಗೂ ಗಡಿಯಲ್ಲಿ ಆಗಾಗ ವಿವಾದಗಳನ್ನು ನೋಡಿ ನನಗೆ ಬೇಸರವಾಯಿತು. ಕನ್ನಡದ ನೆಲದಲ್ಲಿ ಇದ್ದುಕೊಂಡು ಕರಾಳ ದಿನ ಆಚರಿಸುವುದು ಬೇಸರವೆಣಿಸಿ ಅವತ್ತಿನಿಂದ ಇವತ್ತಿನವರೆಗೆ, ನನ್ನಿಂದ ಸಾಧ್ಯವಾದಷ್ಟು ಕನ್ನಡ ಉಳಿಸುವ, ಬೆಳೆಸುವ ಪ್ರಯತ್ನ ಮಾಡುತ್ತಿದ್ದೇನೆ" ಎಂದರು.