ಮಂಗಳೂರು: ನಗರದ ಕುಖ್ಯಾತ ರೌಡಿಶೀಟರ್ ದಾವೂದ್ (43) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹಲವು ಗಂಭೀರ ಅಪರಾಧಗಳಲ್ಲಿ ತೊಡಗಿದ್ದ ಈತ, ಉಳ್ಳಾಲದ ಧರ್ಮನಗರ ನಿವಾಸಿ. ಮಂಗಳೂರಿನ ತಲಪಾಡಿ-ದೇವಿಪುರ ರಸ್ತೆ ಬಳಿ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರ ವಿರುದ್ಧ ಅಪರಾಧ ಎಸಗಲು ಸಂಚು ರೂಪಿಸುತ್ತಿದ್ದ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಪಿಎಸ್ಐ ನರೇಂದ್ರ ನೇತೃತ್ವದ ತಂಡ ಬಂಧಿಸಲು ಮುಂದಾಗಿತ್ತು. ಈ ವೇಳೆ ಬಂಧನದಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಅಧಿಕಾರಿಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಪಿಎಸ್‌ಐ ನರೇಂದ್ರ ಮತ್ತು ಇತರ ಸಿಬ್ಬಂದಿಗೆ ಗಾಯಗಳಾಗಿವೆ.
ಆರೋಪಿ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸಿಆರ್ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ದಾವೂದ್ ಅಪರಾಧ ಇತಿಹಾಸ: ದಾವೂದ್ ಕೊಲೆ ಸೇರಿದಂತೆ ಹಲವು ಘೋರ ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ. ಉಳ್ಳಾಲ, ಮಂಗಳೂರು ದಕ್ಷಿಣ ಮತ್ತು ಬಜ್ಪೆ ಸೇರಿದಂತೆ ಇತರೆಡೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕುರಿತು ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: ಭೋವಿ ಅಭಿವೃದ್ಧಿ ನಿಗಮದ ಅಕ್ರಮದ ತನಿಖೆ ಎದುರಿಸಿದ್ದ ಯುವತಿ ಆತ್ಮಹತ್ಯೆ: ತನಿಖಾಧಿಕಾರಿಗಳಿಂದ ಕಿರುಕುಳದ ಆರೋಪ