ಬಳ್ಳಾರಿ: ರಾಜ್ಯದಲ್ಲಿ ಬಾಣಂತಿಯರ ಸಾವು ಪ್ರಕರಣಗಳು ಮುಂದುವರೆದಿವೆ. ಬಳ್ಳಾರಿ ನಗರದ ವೈದ್ಯಕೀಯ ಕಾಲೇಜು ಮತ್ತು ವಿಜ್ಞಾನ ಕೇಂದ್ರ (ಬಿಮ್ಸ್) ದಲ್ಲಿ ಮಂಗಳವಾರ ಸಂಜೆ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಬಾಣಂತಿಯೊಬ್ಬರು ಮೃತಪಟ್ಟಿದ್ದಾರೆ.
ರೇಷ್ಮಾ ಗೌಸ್‌ಫೀರ್ (20) ಎಂಬುವರಿಗೆ ಜನವರಿ 4ರಂದು ಸಿಜೇರಿಯನ್ ಹೆರಿಗೆ ಮಾಡಲಾಗಿತ್ತು. ನಾಲ್ಕು ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿದ್ದರು. ಬಳಿಕ ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಜ.14ರಂದು ಮತ್ತೆ ವಿಮ್ಸ್‌ಗೆ ದಾಖಲಿಸಿ ಕೃತಕ ಉಸಿರಾಟದಲ್ಲಿಟ್ಟು ಚಿಕಿತ್ಸೆ ಕೊಡಲಾಗಿತ್ತಾದರೂ, ಮಂಗಳವಾರ ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಮ್ಸ್ ನಿರ್ದೇಶಕ ಡಾ. ಗಂಗಾಧರ ಗೌಡ, ''ರೇಷ್ಮಾ ಅವರಿಗೆ ಶ್ವಾಸಕೋಶದಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಸಿಸೇರಿಯನ್‌ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ನಾವೂ ಎಲ್ಲ ರೀತಿಯ ಚಿಕಿತ್ಸೆಗಳನ್ನು ನೀಡಿದ್ದೆವು'' ಎಂದು ಹೇಳಿದ್ದಾರೆ.
ಇನ್ನೊಂದೆಡೆ, ''ಇದೆಲ್ಲ ಸುಳ್ಳು, ವೈದ್ಯರು ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲ. ವೈದ್ಯರ ನಿರ್ಲಕ್ಷ್ಯದಿಂದಲೇ ರೇಷ್ಮಾ ಸಾವಾಗಿದೆ' ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೊನ್ನೆ ಭಾನುವಾರವಷ್ಟೇ ಬಾಣಂತಿ ಮಹಾದೇವಿ ಎಂಬವರು ಬಿಮ್ಸ್ನಲ್ಲಿ ಮೃತಪಟ್ಟಿದ್ದರು. ಮಹಾದೇವಿ ಕುಟುಂಬಸ್ಥರೂ ಸಹ ವೈದ್ಯರ ನಿರ್ಲಕ್ಷ್ಯದ ಆರೋಪ ಮಾಡಿದ್ದರು.
ಇದನ್ನೂ ಓದಿ: ಬಿಮ್ಸ್ ಆಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಿಸಿಕೊಂಡಿದ್ದ ಬಾಣಂತಿ ಸಾವು: ಬಿಮ್ಸ್ ನಿರ್ದೇಶಕರಿಂದ ಸ್ಪಷ್ಟನೆ