ಬೆಂಗಳೂರು: ''ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನ ಅಭಾದಿತ'' ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ''ಜನತಾ ನ್ಯಾಯಾಲಯದ ತೀರ್ಪಿಗೆ ಸ್ವಾಗತ. ಮುಡಾ ಸಂಬಂಧ ಕ್ಲೀನ್ ಚಿಟ್ ಕೊಡಬೇಕಿರುವುದು ಕೋರ್ಟ್ ಹಾಗಾಗಿ ಅದು ನ್ಯಾಯದ ಪರ ಇರುತ್ತದೆ. ಮೂರು ಕ್ಷೇತ್ರಗಳ ಗೆಲ್ಲುವ ಮೂಲಕ ಈಗ ಜನತಾ ನ್ಯಾಯಾಲಯದ ತೀರ್ಪು ಬಂದಿದೆ'' ಎಂದರು.
''ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಆರೋಪ ಮಾಡಿದ್ರು. ಅದಕ್ಕೆ ಜನ ತೀರ್ಪು ಕೊಟ್ಟಿದ್ದಾರೆ. 136 ಶಾಸಕರು ಇದ್ದೇವೆ. ಅದನ್ನು ಕಿತ್ತಾಕೋಕೆ ಆಗುತ್ತಾ?. ಹೀಗೆ ಹೇಳ್ಕೊಂಡೆ ಸೋತಿದ್ದಾರೆ. ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ನವರು ತಮ್ಮ ಬಾಯಿಗೆ ಬೀಗ ಹಾಕಿಕೊಳ್ಳಬೇಕು. ಜನರು ಬುದ್ಧಿವಂತರಿದ್ದಾರೆ ಅಂತಾ ತಿಳಿದುಕೊಳ್ಳಬೇಕು. ಕೊನೆ ಕ್ಷಣದಲ್ಲಿ ಕುಮಾರಸ್ವಾಮಿ ಅವರ ಮಗನಿಗೆ ಟಿಕೆಟ್ ಕೊಟ್ಟರು. ಅದು ಅವರಿಗೆ ಮುಳುವಾಯ್ತು. ಬೊಮ್ಮಾಯಿ ಹೇಳಿದಂತೆ ಬೇರೆ ರಾಜ್ಯದಲ್ಲಿ ದುಡ್ಡು ಕೊಟ್ಡು ಗೆದ್ದಿದ್ದೇವೆ ಅಂತಾ ನಾವು ಹೇಳೋಕೆ ಆಗುತ್ತಾ?'' ಎಂದು ತಿರುಗೇಟು ನೀಡಿದರು.
ನಿಖಿಲ್ ಬಲಿಪಶು ಆಗಿದ್ದಾರೆ: ಇದೇ ವೇಳೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ''ಸಿಎಂ ಆಗಿ ಕುಮಾರಸ್ವಾಮಿ ಚನ್ನಪಟ್ಟಣ ಮರೆತರೆ ಹೇಗೆ?. ಶಾಸಕರಾಗಿದ್ದರಿಂದಲೇ ಅವರು ಸಿಎಂ ಆಗೋದು. ಆದರೆ, ಜನರನ್ನ ಕುಮಾರಸ್ವಾಮಿ ಮರೆತರು. ನಿಖಿಲ್ ಬಲಿಪಶು ಆಗಿದ್ದಾರೆ'' ಎಂದರು.
''ಕುಮಾರಸ್ವಾಮಿ ನಮ್ನನ್ನೆಲ್ಲ ಗಲೀಜು ಅಂದರು. ನಮ್ಮನ್ನು ಕಳೆದುಕೊಂಡು ಮಗನನ್ನು ಮೂರು ಬಾರಿ ಸೋಲಿಸಿದರು. ಕುಮಾರಸ್ವಾಮಿಗೆ ನಾವು ಸಾಫ್ಟ್ ಆಗೋಕೆ ಆಗುವುದಿಲ್ಲ. ಕುಮಾರಸ್ವಾಮಿ ಆಡುವ ಮಾತು, ನಡವಳಿಕೆಗೆ ಸೋಲಾಗಿದೆ. ನಿಖಿಲ್ ಸೋತಿದ್ದರೆ ಅದು ಕುಮಾರಸ್ವಾಮಿಯಿಂದಲೇ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ತೆಗೆಯುತ್ತೇವೆ ಎಂದು ದೇವೇಗೌಡರು ಹೇಳಿದರು. ಇನ್ನಾದರೂ ಬೇರೆಯವರ ಬಗ್ಗೆ ಲಘುವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಇನ್ನು ಮುಂದಾದರೂ ಸೌಜನ್ಯದಿಂದ ಕುಮಾರಸ್ವಾಮಿ ನಡೆದುಕೊಳ್ಳಬೇಕು'' ಎಂದು ತಿಳಿಸಿದರು.
''ಉಪ ಚುನಾವಣೆಯಲ್ಲಿ ಸಹಜವಾಗಿ ಅವರ ಸೀಟ್ ಅವರಿಗೆ ಬರುತ್ತೆ. ಆಡಳಿತ ಪಕ್ಷಕ್ಕೆ ಹೆಚ್ಚು ಅನುಕೂಲವಾಗುತ್ತೆ ಎಂಬುದಿದೆ. ಆದರೆ ಈ ಚುನಾವಣೆಯಲ್ಲಿ ಮೂರು ಪಕ್ಷ ಒಂದೊಂದು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಇಬ್ಬರು ಮಾಜಿ ಸಿಎಂಗಳ ಕ್ಷೇತ್ರದಲ್ಲಿ ಅವರ ಮಕ್ಕಳೇ ಅಭ್ಯರ್ಥಿಗಳು. ಮಕ್ಕಳು ಎಂದರೆ ಅವರೇ ಅಭ್ಯರ್ಥಿಗಳಾದಂತೆ. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ 18 ದಿನಕ್ಕೂ ಹೆಚ್ಚು ಕಾಲ ಪ್ರಚಾರ ಮಾಡಿದರು. ಬಹುಶಃ ಚನ್ನಪಟ್ಟಣ ಜನ ಕುಮಾರಸ್ವಾಮಿ ಅವರನ್ನು ಸಿಎಂ ಆಗಿದ್ದಾಗಲೂ ನೋಡಿರಲಿಲ್ಲ. ಶಾಸಕರಾಗಿದ್ದಾಗಲೂ ಅವರನ್ನು ಜನ ನೋಡಿರಲಿಲ್ಲ'' ಎಂದರು.
ಒಕ್ಕಲಿಗರು ಡಿ.ಕೆ.ಶಿವಕುಮಾರ್ ಜೊತೆ ಮಾತ್ರ ಇದ್ದಾರೆ ಅನ್ನೋದು ತಪ್ಪು: ''ದೇವೇಗೌಡರು ನಮ್ಮನ್ನು ವೈರಿ ರೀತಿ ನೋಡಿದರು. ನಮ್ಮನ್ನು ಯಾಕೆ ಹಾಗೆ ನೋಡಬೇಕಿತ್ತು?. ದೇವೇಗೌಡರ ಬಾಯಲ್ಲಿ ಅಂತಹ ಮಾತು ಬರಬಾರದಿತ್ತು. ಮೊಮ್ಮಗನಿಗಾಗಿ ಚುನಾವಣೆಯಲ್ಲಿ ವೋಟ್ ಕೇಳಲಿ. ಆದರೆ ಹಾಗೆ ಮಾತನಾಡಬಾರದಿತ್ತು. ಅವರ ಮಗ ಕುಮಾರಸ್ವಾಮಿಗೂ ನಮಗೂ ರಾಜಕೀಯ ವೈರುಧ್ಯವಿದೆ. ಆದರೆ ನಾವು ದೇವೇಗೌಡರನ್ನು ಗೌರವಿಸುತ್ತೇವೆ. ಒಕ್ಕಲಿಗರ ನಾಯಕತ್ವ ಯಾರೊಬ್ಬರ ಜೊತೆ ಇಲ್ಲ. ಈ ಹಿಂದೆ ಎಸ್.ಎಂ.ಕೃಷ್ಣರನ್ನು ಸೋಲಿಸಿದ್ದರು. ದೇವೇಗೌಡರನ್ನು ಸೋಲಿಸಿದ್ದರು. ಯಾರೊಬ್ಬರೊಂದಿಗೂ ಒಕ್ಕಲಿಗರು ಇಲ್ಲ. ಡಿ.ಕೆ.ಶಿವಕುಮಾರ್ ಕೂಡ ಒಕ್ಕಲಿಗರ ನಾಯಕ. ಹಾಗಂತ ಒಕ್ಕಲಿಗರು ಡಿ.ಕೆ.ಶಿವಕುಮಾರ್ ಜೊತೆ ಮಾತ್ರ ಇದ್ದಾರೆ ಅನ್ನೋದು ತಪ್ಪಾಗುತ್ತೆ. ಎಲ್ಲರೂ ತಗ್ಗಿಬಗ್ಗಿ ನಡೆದುಕೊಳ್ಳಬೇಕು ಎಂದರು.
''ಜೆಡಿಎಸ್ನವರು ನಮಗಿಂತ ಹೆಚ್ಚು ಎಫೆಕ್ಟಿವ್ ಆಗಿ ಚುನಾವಣೆ ಮಾಡಿದ್ದರು. ಅವರು ನಮಗಿಂತ ಹೆಚ್ಚು ಹಣ ಕರ್ಚು ಮಾಡಿದ್ದರು. ಅವರಿಗೆ ರಾಷ್ಟ್ರದ ದುಡ್ಡು, ನಮಗೆ ರೈತರ ದುಡ್ಡು'' ಎಂದು ಟೀಕಿಸಿದರು.
ಇದನ್ನೂ ಓದಿ: ನಾನು ಪಬ್ಲಿಕ್ ಪ್ಲೇಸ್ನಲ್ಲಿ ಆ ಹೇಳಿಕೆ ಕೊಡಬಾರದು ಅಂತ ನನಗೂ ಅನ್ನಿಸಿತ್ತು: ಸಚಿವ ಜಮೀರ್