ದಾವಣಗೆರೆ: 2024ರ ಏಪ್ರಿಲ್-ನವೆಂಬರ್‌ವರೆಗಿನ ಏಳು ತಿಂಗಳ ಅವಧಿಯಲ್ಲಿ ದಾವಣಗೆರೆಯಲ್ಲಿ 135 ನವಜಾತ ಶಿಶುಗಳು ಮತ್ತು 28 ತಾಯಂದಿರು ಸಾವನ್ನಪ್ಪಿದ್ದಾರೆ.
"ಕಳೆದ ಏಳು ತಿಂಗಳಲ್ಲಿ ಚಿಗಟೇರಿ ಸರ್ಕಾರಿ ಆಸ್ಪತ್ರೆಯಲ್ಲಿ 111, ದಾವಣಗೆರೆ ನಗರದ ಚಾಮರಾಜಪೇಟೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ 24 ಒಟ್ಟು 135 ನವಜಾತ ಶಿಶುಗಳು ಕೊನೆಯುಸಿರೆಳೆದಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ 23 ಹಾಗು ಖಾಸಗಿ ಹೆರಿಗೆ ಆಸ್ಪತ್ರೆಗಳಲ್ಲಿ 5 ಒಟ್ಟು 28 ತಾಯಂದಿರು ಸಾವನ್ನಪ್ಪಿದ್ದಾರೆ" ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ ಹೆಚ್. ಮಾಹಿತಿ ನೀಡಿದ್ದಾರೆ.
"ಈ ಏಳು ತಿಂಗಳಲ್ಲಿ ಚಿಗಟೇರಿ ಆಸ್ಪತ್ರೆಗೆ 1,103 ಶಿಶುಗಳ ದಾಖಲಾಗಿದ್ದು, 882 ಶಿಶುಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. 44 ಶಿಶುಗಳನ್ನು ಬೇರೆ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗಿದೆ. ಮಕ್ಕಳ ಮತ್ತು ಮಹಿಳಾ ಆಸ್ಪತ್ರೆಯಲ್ಲಿ 732 ಮಕ್ಕಳು ದಾಖಲಾಗಿದ್ದು, 657 ಶಿಶುಗಳು ಡಿಸ್ಚಾರ್ಜ್ ಆಗಿದ್ದು, 34 ಶಿಶುಗಳನ್ನು ಬೇರೆ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗಿದೆ. ದಾವಣಗೆರೆ ನಗರದ ಚಿಗಟೇರಿ ಆಸ್ಪತ್ರೆಯಲ್ಲಿ ಒಂದು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಂದು ನ್ಯೂ ಬಾರ್ನ್ ಕೇರ್ ಯೂನಿಟ್ ಇದೆ" ಎಂದು ಅವರು ತಿಳಿಸಿದರು.
ನವಜಾತ ಶಿಶುಗಳು, ತಾಯಂದಿರ ಸಾವಿಗೆ ಕಾರಣವೇನು?: "ದಾವಣಗೆರೆ ಅಕ್ಕಪಕ್ಕದ ಜಿಲ್ಲೆ, ತಾಲೂಕು ಆಸ್ಪತ್ರೆಗಳಲ್ಲಿ ನ್ಯೂ ಬಾರ್ನ್ ಕೇರ್ ಯೂನಿಟ್, ಒಳ್ಳೆಯ ಆಸ್ಪತ್ರೆಗಳಿಲ್ಲದ ಕಾರಣ ದಾವಣಗೆರೆಯ ಆಸ್ಪತ್ರೆಗಳಿಗೆ ಕೊನೆ ಹಂತದಲ್ಲಿ ರೆಫರ್ ಮಾಡಲಾಗುತ್ತದೆ. ಆದ್ದರಿಂದ ಈ ಮರಣ ಪ್ರಮಾಣ ಹೆಚ್ಚಿದೆ. ಇದು ಸರ್ಕಾರಿ ಆಸ್ಪತ್ರೆಗಳ ಅಂಕಿಅಂಶಗಳಾಗಿದ್ದು, ಖಾಸಗಿ ಆಸ್ಪತ್ರೆಯ ಅಂಕಿಅಂಶಗಳನ್ನು ತೆಗೆದುಕೊಂಡರೆ ಈ ಪ್ರಮಾಣ ಹೆಚ್ಚಿರಬಹುದು. ಹೊರ ಜಿಲ್ಲೆಯಿಂದ ಬರುವ ಪ್ರಕರಣಗಳೇ ಹೆಚ್ಚು" ಎಂದರು.
ದಾವಣಗೆರೆಯಲ್ಲಿ ಸಾವಿನ ಪ್ರಮಾಣ ಕಡಿಮೆ, ಆದರೆ..: "ದಾವಣಗೆರೆ ಜಿಲ್ಲೆಯಲ್ಲಿ ಸಾವಿನ ಪ್ರಮಾಣ ಹೆಚ್ಚಿರಲು ಕಾರಣ, ಸ್ಥಳೀಯ ತಾಯಂದಿರ ಸಾವಲ್ಲ. ಚಿತ್ರದುರ್ಗ, ಹರಪನಹಳ್ಳಿ, ರಾಣೇಬೆನ್ನೂರು, ಹಾವೇರಿ ಜಿಲ್ಲೆಯ ಶಿವಮೊಗ್ಗ ಗಡಿ ಭಾಗದಿಂದ ರೆಫರ್ ಆಗಿ ಬಂದು ಸಾವನ್ನಪ್ಪಿರುವ ಪ್ರಕರಣಗಳೇ ಹೆಚ್ಚಿವೆ. ನಮ್ಮ ಜಿಲ್ಲೆಯ ಸ್ವತಃ ಅಂಕಿಅಂಶಗಳನ್ನು ನೋಡಿದರೆ ಸಾವಿನ ಪ್ರಮಾಣ ಶೇ.69ರಷ್ಟು ಕಡಿಮೆ ಇದೆ. ಬೇರೆ ಜಿಲ್ಲೆಯದ್ದು ಸೇರಿಸಿ, ತೆಗೆದುಕೊಂಡಾಗ ಸಾವಿನ ಪ್ರಮಾಣ ಶೇಕಡಾ ಹೆಚ್ಚು ಬರುತ್ತದೆ. ಹುಟ್ಟಿದ ಮಕ್ಕಳು ಮೆಕನೆಮ್ ಸ್ಡೈಲ್, ಅಕಾಲಿಕ ಜನನ, 500-600 ಗ್ರಾಂ ತೂಕದ ಮಕ್ಕಳು ಹುಟ್ಟಿರುವುದು, ಜನ್ಮ ವೈಪರೀತ್ಯಗಳಂತಹ ಪ್ರಕರಣಗಳು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿವೆ" ಎಂದು ತಿಳಿಸಿದರು.