ಮೈಸೂರು:''ಯೋಗವನ್ನು ಪ್ರಾಚೀನ ಕಾಲದಿಂದಲೂ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಸೇರಿಸಲಾಗಿದೆ. ಇಂದು ಇಡೀ ಪ್ರಪಂಚದ ಭಾಗವಾಗಿರುವ ನಮ್ಮ ಗ್ರಂಥಗಳಲ್ಲಿ ಯೋಗದ ಮಹತ್ವವನ್ನು ಉಲ್ಲೇಖಿಸಲಾಗಿದೆ. ಅದಕ್ಕಾಗಿಯೇ ಭಾರತವನ್ನು ಯೋಗ ಗುರು ಎಂದು ಪರಿಗಣಿಸಲಾಗಿದೆ'' ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಪ್ರಾದೇಶಿಕ ಶಿಕ್ಷಣ ಸಂಸ್ಥೆ, ಎನ್ಸಿಇಆರ್ಟಿ, ಮೈಸೂರು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಯೋಗ ಒಲಿಂಪಿಯಾಡ್ 2024 ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ''ಯೋಗ ಮಾಡುವಾಗ, ನಾವು ದೈಹಿಕವಾಗಿ ಆರೋಗ್ಯಕರ, ಮಾನಸಿಕವಾಗಿ ಶಾಂತ ಮತ್ತು ಭಾವನಾತ್ಮಕವಾಗಿ ತೃಪ್ತಿ ಹೊಂದುತ್ತೇವೆ. ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸಲು ಯೋಗವು ಉತ್ತಮ ಮಾರ್ಗವಾಗಿದೆ. ಯೋಗ ಭಾರತೀಯ ಸಂಪ್ರದಾಯ ಮತ್ತು ಸಂಸ್ಕೃತಿಯ ಅಮೂಲ್ಯ ಕೊಡುಗೆಯಾಗಿದೆ. ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿನ ಧರ್ಮಗಳ ಸಂಸತ್ತಿನಲ್ಲಿ ಯೋಗದ ವೈಶಿಷ್ಟ್ಯಗಳನ್ನು ಪ್ರಸ್ತಾಪಿಸಿದರು. ಇಡೀ ಜಗತ್ತಿಗೆ ಯೋಗವನ್ನು ಪರಿಚಯಿಸಿದರು'' ಎಂದು ತಿಳಿಸಿದರು.
''27 ಸೆಪ್ಟೆಂಬರ್ 2014 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯೋಗವನ್ನು ಅಳವಡಿಸಿಕೊಳ್ಳುವಂತೆ ವಿಶ್ವದ ಎಲ್ಲಾ ದೇಶಗಳಿಗೆ ಕರೆ ನೀಡಿದರು. ಯೋಗ ದಿನವನ್ನು ಪ್ರತಿವರ್ಷ ಆಚರಿಸಬೇಕು'' ಎಂದು ಪ್ರಸ್ತಾಪಿಸಿದರು.
''ಪ್ರಸ್ತಾವನೆಯನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಕೇವಲ 90 ದಿನಗಳಲ್ಲಿ ಅಂಗೀಕರಿಸಿತು ಮತ್ತು ಜಾರಿಗೊಳಿಸಿತು. ಅಂದಿನಿಂದ ದೇಶ ಮತ್ತು ಪ್ರಪಂಚದಲ್ಲಿ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ'' ಎಂದರು.
''ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್ 'ಮಹಿಳಾ ಸಬಲೀಕರಣಕ್ಕಾಗಿ ಯೋಗ'. ಯೋಗವು ಅವರ ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮವನ್ನು ಒಳಗೊಂಡ ಮಹಿಳೆಯರನ್ನು ಸಬಲೀಕರಣಗೊಳಿಸುವ ಸಮಗ್ರ ಸಾಧನವಾಗಿದೆ. ಯೋಗವು ನಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಆರೋಗ್ಯವಾಗಿಡುವ ಶಕ್ತಿಯನ್ನು ಹೊಂದಿದೆ'' ಎಂದು ಹೇಳಿದರು.