ಬೆಂಗಳೂರು:ಇಂದು ಎತ್ತಿನಹೊಳೆ ಯೋಜನೆಯ ಮೊದಲ ಹಂತ ಲೋಕಾರ್ಪಣೆಗೊಳ್ಳುತ್ತಿದೆ. ಸಾಕಷ್ಟು ವಿಳಂಬ, ವೆಚ್ಚ ಹೆಚ್ಚಳದ ಮಧ್ಯೆ ಯೋಜನೆ ಉದ್ಘಾಟನೆಯಾಗುತ್ತಿದೆ. ಆದರೆ, ಈ ಯೋಜನೆಯ ನೀರಿನ ಲಭ್ಯತೆ ಬಗ್ಗೆ ಪರಿಸರವಾದಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. 2018ರ ಮುಂಗಾರು ಅವಧಿಯಿಂದ 2023ರ ಮುಂಗಾರು ಅವಧಿಯವರೆಗೆ ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿನ ನೀರಿನ ಲಭ್ಯತೆಯ ಅಂಕಿಅಂಶ ಈ ಅನುಮಾನ ಕಾರಣ.
ಈ ಯೋಜನೆಯ ಪರಿಷ್ಕೃತ ವೆಚ್ಚ ಸುಮಾರು 23,251 ಕೋಟಿ ರೂಪಾಯಿ. ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನಹೊಳೆ, ಕೇರಿಹೊಳೆ ಮತ್ತು ಹೊಂಗದಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ಪ್ರಮಾಣದ ನೀರನ್ನು ಏತ ನೀರಾವರಿ ಮೂಲಕ ತರುವ ಯೋಜನೆ ಇದಾಗಿದೆ.
ಇದರಿಂದ 7 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಸೇರಿ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶ ಹಾಗೂ 6,657 ಗ್ರಾಮಗಳ ಸುಮಾರು 75.59 ಲಕ್ಷ ಜನ ಮತ್ತು ಜಾನುವಾರುಗಳಿಗೆ 14.056 ಟಿಎಂಸಿ ಕುಡಿಯುವ ನೀರು ದೊರೆಯಲಿದೆ. ಜೊತೆಗೆ 5 ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ, ತುಮಕೂರು ವ್ಯಾಪ್ತಿಯ 527 ಕೆರೆಗಳಿಗೆ ಸುಮಾರು 9.953 ಟಿಎಂಸಿ ನೀರು ತುಂಬಲಿದೆ.
ಎತ್ತಿನಹೊಳೆ ಯೋಜನೆಯಿಂದ ಇಷ್ಟು ನೀರು ಸಿಗುವುದೇ?:ಎತ್ತಿನಹೊಳೆ ಜಲಾನಯನ ಪ್ರದೇಶದಲ್ಲಿ ನೀರಿನ ಲಭ್ಯತೆಯ ಕೊರತೆ, ಯೋಜನೆಯ ದೀರ್ಘಕಾಲಿಕ ಕಾರ್ಯಸಾಧು ಬಗ್ಗೆ ಅನುಮಾನ ಮೂಡಿಸಿದೆ. ಈ ಕುರಿತು ಪರಿಸರವಾದಿಗಳು ಹಾಗೂ ಎಂಎಲ್ಸಿ ಸಿ.ಟಿ.ರವಿ ಸಿಎಂಗೆ ಬಹಿರಂಗ ಪತ್ರ ಬರೆದಿದ್ದಾರೆ. ಅವೈಜ್ಞಾನಿಕ ಹಾಗೂ ಕಾಲ್ಪನಿಕ ನೀರಿನ ಲಭ್ಯತೆಯ ಅಂಕಿಅಂಶದ ಆಧಾರದಲ್ಲಿ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ.
ಎತ್ತಿನಹೊಳೆ ಯೋಜನೆಯಡಿ 172 ಚ.ಕಿ.ಮೀ ವ್ಯಾಪ್ತಿಯ ಪಶ್ಚಿಮ ಘಟ್ಟದ ಜಲಾನಯನ ಪ್ರದೇಶದಲ್ಲಿ ಅಂದಾಜಿಸಿರುವ ಒಟ್ಟು 34.26 ಟಿಎಂಸಿ ನೀರಿನ ಲಭ್ಯತೆಯ ಪೈಕಿ 24.01 ಟಿಎಂಸಿ ಮಾತ್ರ ಯೋಜನೆಗೆ ತಿರುಗಿಸಬಹುದಾದ ನೀರು ಎಂದು ಪರಿಗಣಿಸಲಾಗಿದೆ. ಯೋಜನಾ ವರದಿ ತಯಾರಿಸುವ ಸಂದರ್ಭದಲ್ಲಿ ಯೋಜನೆಯಲ್ಲಿ ಪರಿಗಣಿಸಿರುವ ನೀರಿನ ಲಭ್ಯತೆಗೆ ಸಂಬಂಧಿಸಿದಂತೆ ಐಐಎಸ್ಸಿ ಪ್ರೊ.ರಾಮಪ್ರಸಾದ್ ಅವರಿಂದ ಪರಿಶೀಲಿಸಿಕೊಳ್ಳಲಾಗಿದೆ. ಬಳಿಕ CWC, National Institute of Hydrology & Karnataka State Natural Disaster Monitoring Centre ಸಂಸ್ಥೆಗಳಿಂದ ಅಭಿಪ್ರಾಯ ಪಡೆಯಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.