ಕಾರವಾರ: ನಗರದ ಆಶ್ರಮ ರಸ್ತೆ ಬಳಿಯ ಅಭಿಮಾನಶ್ರೀ ಅಪಾರ್ಟ್ಮೆಂಟ್ನ ಪ್ಲಾಟ್ನಲ್ಲಿ ನಡೆದಿದ್ದ ಕಳ್ಳತನದ ಜಾಡು ಹಿಡಿದ ಕಾರವಾರದ ಪೊಲೀಸರು ಅಂತಾರಾಜ್ಯ ಕುಖ್ಯಾತ ಕಳ್ಳನನ್ನು ಕೊನೆಗೂ ಬಂಧಿಸಿದ್ದಾರೆ. ಈತ ದೇಶದ ವಿವಿಧೆಡೆ 148ಕ್ಕೂ ಹೆಚ್ಚು ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದಾನೆ.
ಪಂಜಾಬ್‌ನ ರಾಮಮಂಡಿ ಗ್ರಾಮದ ಸಮೀರ ಶರ್ಮಾ ಬಂಧಿತ ಆರೋಪಿ. ಈತನನ್ನು ಕಾರವಾರ ಪೊಲೀಸರು ಸಿನಿಮೀಯ ರೀತಿಯಲ್ಲಿ ಅಮೃತಸರ ಗೋಲ್ಡನ್ ಟೆಂಪಲ್ ಸಮೀಪ ಬಂಧಿಸಿದ್ದಾರೆ. ಕಳವು ಮಾಡಿದ್ದ 34.026 ಗ್ರಾಂ ಬಂಗಾರದ ಒಡವೆಗಳು ಹಾಗೂ 3 ಲಕ್ಷ ರೂ. ನಗದು ಸೇರಿ ಒಟ್ಟು 5 ಲಕ್ಷ ರೂ. ಮೌಲ್ಯದ ಸ್ವತ್ತನ್ನು ವಶಕ್ಕೆ ಪಡೆದಿದ್ದಾರೆ. ನ.11ರಂದು ನಡೆದ ಕಳ್ಳತನದ ಬಗ್ಗೆ ಪ್ಲಾಟ್ನ ಮಾಲಕಿ ಪ್ರಿಯಾ ಅಂತೋನಿ ಫರ್ನಾಂಡಿಸ್ ದೂರು ನೀಡಿದ್ದರು.
ಆರೋಪಿಯ ವಿರುದ್ಧ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ 106 ಮನೆ ಕಳ್ಳತನ ಪ್ರಕರಣ, ಗೋವಾದ 3 ಪೊಲೀಸ್ ಠಾಣೆಗಳಲ್ಲಿ 7 ಪ್ರಕರಣ, ಉತ್ತರ ಪ್ರದೇಶದ ನೋಯ್ಡಾ ನಗರದ 4 ಪೊಲೀಸ್ ಠಾಣೆಗಳಲ್ಲಿ 11 ಪ್ರಕರಣ ಮತ್ತು ಪಂಜಾಬ್‌ನ 2 ಪೊಲೀಸ್ ಠಾಣೆಗಳಲ್ಲಿ 4 ಪ್ರಕರಣ ಸೇರಿ ಒಟ್ಟು 148 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಲ್ಲಿ ತಲೆಮರೆಸಿಕೊಂಡು ನ್ಯಾಯಾಲಯಗಳಿಗೆ ಹಾಜರಾಗದೇ ತಿರುಗಾಡುತ್ತಿದ್ದರಿಂದ ಈತನ ಮೇಲೆ ಹಲವು ನ್ಯಾಯಾಲಯಗಳಲ್ಲಿ ಒಟ್ಟು 34 ಪ್ರಕರಣಗಳಲ್ಲಿ ಪ್ರೊಕ್ಲೇಮೇಶನ್ ವಾರಂಟ್ ಮತ್ತು 37 ಪ್ರಕರಣಗಳಲ್ಲಿ ಜಾಮೀನುರಹಿತ ವಾರಂಟ್ ಹೊರಡಿಸಲಾಗಿತ್ತು.
ಇದನ್ನೂ ಓದಿ: ಸ್ನೇಹಿತನ ಅಪಹರಿಸಿ ಸುಲಿಗೆ: ಬೆಂಗೂರಲ್ಲಿ ಹಣ ಹಂಚಿಕೊಳ್ಳುವಾಗ ಸಿಕ್ಕಿಬಿದ್ರು, ಯುವತಿ ಸೇರಿ 7 ಆರೋಪಿಗಳ ಬಂಧನ