ಎಸ್ಪಿ ಡಾ.ಭೀಮಾಶಂಕರ ಗುಳೇದ ಮಾತನಾಡಿದರು. (ETV Bharat) ಬೆಳಗಾವಿ:ಗೋವಾದಿಂದ ಕರ್ನಾಟಕದ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಸಾಗಿಸುತ್ತಿದ್ದ ಸಾರಾಯಿ ತುಂಬಿದ ಲಾರಿಯನ್ನು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸುವಲ್ಲಿ ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಖದೀಮರು ಹಾರ್ಡ್ ವೇರ್ ಮೆಟಿರಿಯಲ್ ಇರುವ ಲಾರಿಯಲ್ಲಿ ಮದ್ಯ ಸಾಗಿಸುತ್ತಿರೋದು ಪೊಲೀಸರ ಸಮಯ ಪ್ರಜ್ಞೆಯಿಂದ ಬೆಳಕಿಗೆ ಬಂದಿದೆ.
ಹೌದು, ಆಂಧ್ರಪ್ರದೇಶಕ್ಕೆ ಸಾಗಿಸುತ್ತಿದ್ದ ಲಕ್ಷಾಂತರ ರೂ ಮೌಲ್ಯದ ಗೋವಾ ಮದ್ಯವನ್ನು ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. MH 46EF4138 ಲಾರಿಯಲ್ಲಿ ಬರೊಬ್ಬರಿ 28 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಲಾರಿಯೊಂದಿಗೆ ಮಹಾರಾಷ್ಟ್ರ ಮೂಲದ ಸಂತೋಷ್ ಹಲಸೆ ಮತ್ತು ಸದಾಶಿವ ಘೇರಡೆ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಲಾರಿಯಲ್ಲಿ ಹಾರ್ಡ್ ವೇರ್ ಮೆಟಿರಿಯಲ್ ಸಾಗಣೆ ಮಾಡೋಕೆ ಲೈಸನ್ಸ್ ಪಡೆದಿದ್ದ ಖದೀಮರು, ಅದರೊಳಗೆ ಅಕ್ರಮ ಗೋವಾ ಮದ್ಯ ಸಾಗಣೆ ಮಾಡ್ತಿದ್ದ ಬಗ್ಗೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. 28 ಲಕ್ಷ ಮೌಲ್ಯದ 16 ಸಾವಿರ ಲೀಟರ್ ವಿವಿಧ ಮದ್ಯದ ಬಾಟಲ್, ಲಾರಿ ಸೇರಿ ಒಟ್ಟು 38 ಲಕ್ಷ ಮೌಲ್ಯದ ಬಾಬತ್ತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಡಾ. ಭೀಮಾಶಂಕರ ಗುಳೇದ ಮಾಧ್ಯಮದವರೊಂದಿಗೆ ಮಾತನಾಡಿ, ಹತ್ತರಗಿ ಟೋಲ್ ನಾಕಾ ಬಳಿ ಯಮಕನಮರಡಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಪೊಲೀಸರು ಲಾರಿ ತಪಾಸಣೆ ಮಾಡಿದ ವೇಳೆ, ಆರೋಪಿಗಳು 21 ಲಕ್ಷ ರೂ. ಮೌಲ್ಯದ ಹಾರ್ಡ್ ವೇರ್ ಸಾಮಗ್ರಿ ಹುಬ್ಬಳ್ಳಿಗೆ ಸಾಗಿಸುತ್ತಿದ್ದೇವೆ ಎಂದಿದ್ದರು. ಪೊಲೀಸರು ಅನುಮಾನಗೊಂಡು ಪರಿಶೀಲಿಸಿದಾಗ ಮದ್ಯದ ಬಾಕ್ಸ್ಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಗೋವಾದಲ್ಲಿ ತಯಾರಾದ 1950 ಬಾಕ್ಸ್ ಗಳಲ್ಲಿ 16,848 ಲೀಟರ್ ಮೂರು ಬ್ರ್ಯಾಂಡ್ ವಿಸ್ಕಿ ಮದ್ಯವನ್ನು ಆಂಧ್ರಪ್ರದೇಶಕ್ಕೆ ಸಾಗಿಸುತ್ತಿರುವುದು ಪೊಲೀಸ್ ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾಗಿದೆ. ತನಿಖೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಇದನ್ನೂಓದಿ:ಯಾದಗಿರಿ: ಸಿಡಿಲು ಬಡಿದು ಕುರಿಗಾಹಿ, 17 ಕುರಿಗಳು ಸಾವು - shepherd Death