ಮಂಗಳೂರು (ದಕ್ಷಿಣ ಕನ್ನಡ) : ಕರಾವಳಿಯ ಕಲಾ ಸೊಬಗು ಯಕ್ಷಗಾನಕ್ಕೆ ವಿಶ್ವವ್ಯಾಪಿ ಪ್ರೇಕ್ಷಕರಿದ್ದಾರೆ. ಶಿವರಾಮ ಕಾರಂತರು ವಿದೇಶಗಳಿಗೆ ಯಕ್ಷಗಾನವನ್ನು ತಲುಪಿಸಿ ಅದರ ಗೌರವ ಹೆಚ್ಚಿಸಿದ್ದರು. ಇದೀಗ ಮಂಗಳೂರಿನ ಯಕ್ಷಧ್ರುವ ಪಟ್ಲ ಫೌಂಡೇಶನ್ನಿಂದ 75 ದಿನಗಳ ಕಲಾ ಪ್ರವಾಸ ನಡೆಯಲಿದೆ.
ಯಕ್ಷಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ ಪ್ರದರ್ಶನ ನಡೆಸಲು ಮತ್ತೆ ಅಮೆರಿಕಕ್ಕೆ ಹಾರಲಿದೆ. ಈ ಮೂಲಕ ಪ್ರಪಂಚದ ದೈತ್ಯ ರಾಷ್ಟ್ರ ಅಮೆರಿಕದಲ್ಲಿ ಯಕ್ಷಗಾನದ ಚಂಡೆ - ಮದ್ದಳೆಗಳ ನಿನಾದ ಮೊಳಗಲಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ನೇತೃತ್ವದ ತಂಡ ಅಮೆರಿಕದಲ್ಲಿ 75 ದಿನಗಳ ಕಲಾ ಪ್ರವಾಸ ಕೈಗೊಳ್ಳಲಿದೆ. ಜುಲೈ 9ರಂದು ಕಲಾವಿದರು ಅಮೆರಿಕಕ್ಕೆ ಹಾರಲಿದ್ದಾರೆ.
ಹಿಮ್ಮೇಳದಲ್ಲಿ ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ, ಚಂಡೆ - ಮದ್ದಳೆಯಲ್ಲಿ ಪದ್ಮನಾಭ ಉಪಾಧ್ಯ, ಚೈತನ್ಯಕೃಷ್ಣ ಪದ್ಯಾಣ, ಮುಮ್ಮೇಳದಲ್ಲಿ ಎಂ. ಎಲ್ ಸಾಮಗ, ಹರಿನಾರಾಯಣ ಭಟ್ ಎಡನೀರು, ಚಂದ್ರಶೇಖರ ಧರ್ಮಸ್ಥಳ, ಮಹೇಶ್ ಮಣಿಯಾಣಿ, ಪ್ರಶಾಂತ್ ಶೆಟ್ಟಿ ನೆಲ್ಯಾಡಿ, ಮೋಹನ ಬೆಳ್ಳಿಪಾಡಿ ಸೇರಿದಂತೆ ತೆಂಕುತಿಟ್ಟು ಯಕ್ಷಗಾನದ 9 ಮೇರು ಕಲಾವಿದರ ತಂಡ ಅಮೆರಿಕದಲ್ಲಿ ಯಕ್ಷಗಾನ ಪ್ರದರ್ಶಿಸಲಿದ್ದಾರೆ. ಅಮೆರಿಕದಲ್ಲಿ ಶ್ರೀದೇವಿ ಮಹಾತ್ಮೆ, ಶಾಂಭವಿ ವಿಜಯ, ವೀರಾಂಜನೇಯ, ಸುದರ್ಶನ ವಿಜಯ, ನರಕಾಸುರ ಮೋಕ್ಷ ಪೌರಾಣಿಕ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳಲಿದೆ.
ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಸ್ಎ ಘಟಕ ಅಮೆರಿಕದ ಸುಮಾರು 20 ರಾಜ್ಯಗಳ ಪ್ರಮುಖ ನಗರಗಳಲ್ಲಿ ಯಕ್ಷಗಾನವನ್ನು ಈಗಾಗಲೇ ಬುಕ್ಕಿಂಗ್ ಮಾಡಿದೆ. ನ್ಯಾನೋಸೆ, ಸಿಯಾಟಲ್, ಫೀನಿಕ್ಸ್, ಲಾಸ್ ಏಂಜಲೀಸ್, ಆ್ಯಸ್ಟಿನ್, ಹ್ಯೂಸ್ಟನ್, ಡೆಟ್ರೈನ್, ಇಜಾಮ್ಸ್ ವಿಲ್ಲೆ, ಮೇರಿಲ್ಯಾಂಡ್, ಟಂಪಾ, ಮಿಲ್ವಾಕಿ, ಶಾರ್ಲೋಟ್, ರಾಲೆ, ಎಡಿಸನ್, ಕೊಲಂಬಸ್, ಬಾಸ್ಟನ್, ಒರ್ಲಾಂಡೊ, ಅಟ್ಲಾಂಟಾ, ಚಿಕಾಗೋ, ಡೆಲ್ಲಾಸ್, ನ್ಯೂಜೆರ್ಸಿ, ರಿಚ್ಮಂಡ್, ಎಡಿಸನ್ ಸೇರಿದಂತೆ 2ವರ್ಷಗಳಿಗೊಮ್ಮೆ ಅಮೆರಿಕದಲ್ಲಿ ನಡೆಯುವ ಪ್ರತಿಷ್ಠಿತ ಅಕ್ಕ ಸಮ್ಮೇಳನದಲ್ಲೂ ಯಕ್ಷಗಾನ ಪ್ರದರ್ಶನ ಆಯೋಜನೆಗೊಂಡಿದೆ. ಅಲ್ಲದೆ ಕೆಲವೊಂದು ಕಡೆಗಳಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ನಡೆಸಲಾಗುತ್ತದೆ.