ಬೆಂಗಳೂರು: ಗಣಿ ಬಾಧಿತ ಪ್ರದೇಶಗಳ ಅಭಿವೃದ್ದಿಗೆ ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಮೂಲಕ ಸಂಗ್ರಹಿಸಲಾದ ನಿಧಿಯ ಮೊತ್ತದಲ್ಲಿ ಶೇ.28ರಷ್ಟನ್ನು ನೂತನ ವಿಜಯನಗರ ಜಿಲ್ಲೆಗೆ ವರ್ಗಾಯಿಸುವಂತೆ ಹೊರಡಿಸಲಾದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್) ಹೈಕೋರ್ಟ್ ಮಂಗಳವಾರ ವಜಾಗೊಳಿಸಿ ಆದೇಶಿಸಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್‌ನ ಧರಣಿ ಮಹಿಳಾ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವೈ.ಜಿ.ದಿಲೀಪ್ ಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ಎಂ.ಐ.ಅರುಣ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ವಿಚಾರಣೆಯಲ್ಲಿ ಅರ್ಜಿದಾರರ ಪರ ವಕೀಲರು, ಬಳ್ಳಾರಿ ಜಿಲ್ಲೆಯಲ್ಲಿ ಸಂಗ್ರಹವಾಗುವ ನಿಧಿಯಲ್ಲಿ ಶೇ.28ರಷ್ಟನ್ನು ವಿಜಯನಗರ ಜಿಲ್ಲೆಗೆ ಕೊಟ್ಟರೆ, ಬಳ್ಳಾರಿ ಜಿಲ್ಲೆಯ ಜನರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಆದೇಶ ರದ್ದುಪಡಿಸಬೇಕು. ನಿಧಿ ವರ್ಗಾವಣೆ ಮಾಡುವುದಕ್ಕೆ ನಿರ್ಬಂಧ ಹೇರಬೇಕು ಎಂದು ಮನವಿ ಮಾಡಿದರು.
ಸರ್ಕಾರಿ ವಕೀಲರು ವಾದಿಸಿ, ಬಳ್ಳಾರಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ನಿಧಿಯಿಂದ ವಿಜಯನಗರ ಜಿಲ್ಲೆಗೆ ಹೋಗುವ ಹಣ ಆ ಜಿಲ್ಲೆಯ ಬಡಜನರು ವಿಶೇಷವಾಗಿ ಮಹಿಳೆಯರ ಅಭಿವೃದ್ಧಿಗೆ ಬಳಕೆಯಾಗುತ್ತದೆ ಎಂದು ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ಪೀಠ, ಹಣ ವರ್ಗಾವಣೆ ವಿಚಾರ ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಕ್ಕೆ ಸಂಬಂಧಿಸಿದ್ದಾಗಿದೆ. ಸಾರ್ವಜನಿಕ ಹಿತಾಸಕ್ತಿ ವ್ಯಾಪ್ತಿಗೆ ಇದು ಬರುವುದಿಲ್ಲ ಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿತು.
ಇದನ್ನೂ ಓದಿ: ಭೂ ಸ್ವಾಧೀನ ಅಧಿಸೂಚನೆಯಲ್ಲಿ ಮಾಲೀಕರ ಹೆಸರಿಲ್ಲದಿದ್ದಲ್ಲಿ ಹಿಂದಿರುಗಿಸಬೇಕು: ಹೈಕೋರ್ಟ್
ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧ ಸಂಜ್ಞೆ ಪರಿಗಣಿಸುವಲ್ಲಿ ವಿಚಾರಣಾ ನ್ಯಾಯಾಲಯ ವಿವೇಚನೆ ಬಳಸಿಲ್ಲ : ಹೈಕೋರ್ಟ್