ಬೆಣ್ಣೆ ದೋಸೆ ಸವಿದು ಭರ್ಜರಿ ರೋಡ್ ಶೋ ನಡೆಸಿದ ಮೈಸೂರು ಮಹಾರಾಜ ಯದುವೀರ್ (Etv Bharat) ದಾವಣಗೆರೆ: ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದ ಬಿಜೆಪಿ ಹುರಿಯಾಳು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ನಗರದಲ್ಲಿ ರೋಡ್ ಶೋ ನಡೆಸಿ ಮತಬೇಟಿ ನಡೆಸಿದರು.
ಇದಕ್ಕೂ ಮುನ್ನ ದಾವಣಗೆರೆಯ ಶಿವಾಜಿ ಸರ್ಕಲ್ ಸಮೀಪ ಇರುವ ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಭಗತ್ ಸಿಂಗ್ ನಗರ, ಕೆಟಿಜೆ ನಗರ, ಕೆಬಿ ಬಡಾವಣೆ, ಶಿವಪ್ಪಯ್ಯ ಸರ್ಕಲ್ನಲ್ಲಿ ರೋಡ್‌ನಲ್ಲಿ ಯದುವೀರ್ ಶೋ ನಡೆಸಿದರು. ಈ ಸಂದರ್ಭದಲ್ಲಿ ಗಾಯತ್ರಿ ಸಿದ್ದೇಶ್ವರ ಸೇರಿದಂತೆ ಪ್ರಮುಖ ಬಿಜಿಪಿ ನಾಯಕರು ಇದ್ದರು.
ಬೆಣ್ಣೆದೋಸೆ ಸವಿದ ಯದುವೀರ್: ಶ್ರೀ ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ ಹೋಟೆಲ್‌ನಲ್ಲಿ ಯದುವೀರ್ ಬೆಣ್ಣೆ ದೋಸೆ ಸವಿದರು. ಬಳಿಕ ಮಾತನಾಡಿದ ಅವರು, "ದಾವಣಗೆರೆಗೆ ಬಂದ್ರೆ ಬೆಣ್ಣೆ ದೋಸೆ ತಿನ್ನುವುದು ಸಂಪ್ರದಾಯ. ಅದರಂತೆ ಇಂದು ಬೆಣ್ಣೆ ದೋಸೆ ಸವಿದು ಪ್ರಚಾರ ಆರಂಭಿಸಿದ್ದೇವೆ. ಮೈಸೂರು ಬಿಟ್ಟರೆ ದಾವಣಗೆರೆಯ ಊಟವೇ ನನಗೆ ಇಷ್ಟ. ದಾವಣಗೆರೆ ಜೊತೆ ನಮಗೆ ಬಹಳ ಬಾಂಧವ್ಯ ಇದೆ. ಸದ್ಯ ನಾನು ಇಲ್ಲಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಪ್ರಚಾರಕ್ಕೆ ಬಂದಿದ್ದೇನೆ" ಎಂದರು.
ಬಿಜೆಪಿ 28 ಸ್ಥಾನಗಳನ್ನೂ ಗೆಲ್ಲಲಿದೆ:"ರಾಜ್ಯದಲ್ಲಿ 28 ಸ್ಥಾನಗಳನ್ನೂ ಬಿಜೆಪಿ ಗೆಲ್ಲಲಿದೆ. ಮೋದಿ ಅವರ ಆಡಳಿತವನ್ನು ದೇಶದ ಜನತೆ ಒಪ್ಪಿಕೊಂಡಿದ್ದಾರೆ. 10 ವರ್ಷಗಳ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಮೊದಲ ಹಂತದ 14 ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ" ಎಂದು ಹೇಳಿದರು.
ಇದನ್ನೂ ಓದಿ:ಕುತೂಹಲಕ್ಕೆ ಬಿತ್ತು ತೆರೆ: ರಾಯಬರೇಲಿ ಕ್ಷೇತ್ರದಿಂದ ಲೋಕಸಭಾ ಕಣಕ್ಕಿಳಿದ ರಾಹುಲ್ ಗಾಂಧಿ - Rahul Gandhi from Raebareli