ಚಂಡೀಗಢ (ಹರಿಯಾಣ):ಕುಸ್ತಿಪಟು ವಿನೇಶ್ ಪೋಗಟ್ ಅವರು ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಕುಸ್ತಿ ಅಖಾಡದಿಂದ ರಾಜಕೀಯ ರಂಗಕ್ಕೆ ಧುಮುಕಿರುವ ಅವರು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಜುಲಾನಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಅಫಿಡವಿಟ್‌ನಲ್ಲಿ ಅವರು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ವಿನೇಶ್ ಪೋಗಟ್ ಅವರ ಆಸ್ತಿ ಎಷ್ಟು?:ಕುಸ್ತಿಯಲ್ಲಿ ಹಲವು ಪದಕಗಳನ್ನು ಗೆದ್ದುಕೊಂಡಿರುವ ಹರಿಯಾಣದ ಮಹಿಳಾ ಪೈಲ್ವಾನ್ ವಿನೇಶ್ ಪೋಗಟ್ ಅವರು 4 ಕೋಟಿ ರೂಪಾಯಿಗೂ ಅಧಿಕ ಸ್ಥಿರ, ಚರಾಸ್ತಿ ಹೊಂದಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ. ಸೋನಿಪತ್ನಲ್ಲಿ 2 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಆಕೆಯ ಬಳಿ ಮೂರು ಕಾರುಗಳಿವೆ. ಅದರಲ್ಲಿ 35 ಲಕ್ಷ ಮೌಲ್ಯದ ವೋಲ್ವೋ ಎಕ್ಸ್ ಸಿ 60, 12 ಲಕ್ಷ ರೂ. ಮೌಲ್ಯದ ಹ್ಯುಂಡೈ ಕ್ರೆಟಾ ಹಾಗೂ 17 ಲಕ್ಷ ರೂ. ಮೌಲ್ಯದ ಟೊಯೊಟಾ ಇನ್ನೋವಾ ಕಾರುಗಳಿವೆ ಎಂದು ತಿಳಿಸಿದ್ದಾರೆ. ಇನ್ನೋವಾಗೆ 13 ಲಕ್ಷ ರೂಪಾಯಿ ಸಾಲ ಮಾಡಿದ್ದು, ಸದ್ಯ ಮರು ಪಾವತಿ ಮಾಡುತ್ತಿದ್ದೇನೆ. ಆಕೆಯ ಪತಿ ಸೋಮವೀರ್ ರಾಠಿ ಹೆಸರಿನಲ್ಲಿ 19 ಲಕ್ಷ ರೂ. ಮೌಲ್ಯದ ಮಹೀಂದ್ರಾ ಸ್ಕಾರ್ಪಿಯೋ ಕಾರು ಇದೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.