ಮೈಸೂರು: ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲಾ 'ಪ್ರಾಣ ಪ್ರತಿಷ್ಠೆ'ಗೆ ಒಂದು ವರ್ಷ ಸಂದಿದೆ. ಈ ಸುಸಂದರ್ಭದಲ್ಲಿ ಅಯೋಧ್ಯೆ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾದ ಬಾಲರಾಮನ ಮೂರ್ತಿಗೆ ಶಿಲೆಯನ್ನು ನೀಡಿದ ಮೈಸೂರಿನ ಜಯಪುರ ಹೋಬಳಿಯ ಹಾರೋಹಳ್ಳಿ ಜಮೀನಿನಲ್ಲಿ ಶ್ರೀರಾಮನ ಫೋಟೋ ಇಟ್ಟು, ಪೂಜೆ ನೆರವೇರಿಸಲಾಯಿತು.
ಶಿಲೆ ಸಿಕ್ಕ ಜಮೀನಿನಲ್ಲಿ ದೇವಾಲಯ ನಿರ್ಮಾಣ ಮಾಡುವ ಬಗ್ಗೆ ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ ಹಾಗೂ ಜಮೀನು ಮಾಲೀಕರು ಮಾತುಕತೆ ನಡೆಸಿದರು.
ಜಮೀನಿನ ಮಾಲೀಕ ರಾಮದಾಸ್ 'ಈಟಿವಿ ಭಾರತ' ಜೊತೆ ಮಾತನಾಡಿ, "ಕಳೆದ ವರ್ಷದ ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ಬಾಲರಾಮನ ಮೂರ್ತಿ ಕೆತ್ತನೆಗೆ ಶಿಲೆ ಸಿಕ್ಕ ಸ್ಥಳದಲ್ಲಿ ದೇವಾಲಯ ನಿರ್ಮಿಸಲು ತೀರ್ಮಾನಿಸಿ ಸ್ಥಳದಲ್ಲಿ ಪೂಜೆ ನೆರವೇರಿಸಲಾಗಿತ್ತು. ಆದರೆ, ಒಂದು ವರ್ಷ ಕಳೆದರೂ ದೇವಾಲಯ ನಿರ್ಮಾಣ ಸಂಬಂಧ ಯಾವುದೇ ಕೆಲಸಗಳು ನಡೆದಿಲ್ಲ. ಹೀಗಾಗಿ ನಾನೇ ಚಿಕ್ಕ ಗುಡಿ ಕಟ್ಟಿ ಪೂಜೆ ಸಲ್ಲಿಸಲು ತೀರ್ಮಾನಿಸಿ, ಈ ಬಗ್ಗೆ ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡರಿಗೆ ತಿಳಿಸಿದಾಗ ಅವರು ಇಂದು ಹಾರೋಹಳ್ಳಿಗೆ ಬಂದು ಶಿಲೆ ಸಿಕ್ಕ ಸ್ಥಳದಲ್ಲಿ ಶ್ರೀರಾಮನ ಫೋಟೋಗೆ ಪೂಜೆ ಸಲ್ಲಿಸಿದ್ದಾರೆ" ಎಂದರು.