ಬಿದಿರಿನಲ್ಲಿ ಸುಂದರ ಮನೆ ಕಟ್ಟಿದ ವೈದ್ಯೆ (ETV Bharat) ಮಂಗಳೂರು:ಸೆಪ್ಟೆಂಬರ್ 18 ವಿಶ್ವ ಬಿದಿರು ದಿನ. ಬಿದಿರಿನ ಮಹತ್ವವನ್ನು ಜನರಿಗೆ ತಿಳಿಸುವುದು, ಬಿದಿರು ಕಾಡುಗಳ ಸಂರಕ್ಷಣೆ ಮತ್ತು ಬಿದಿರು ಉದ್ಯಮಕ್ಕೆ ಉತ್ತೇಜನ ನೀಡುವುದು ಈ ದಿನದ ಉದ್ದೇಶ. ಈ ವಿಶೇಷ ದಿನದ ಅಂಗವಾಗಿ ಪರಿಸರ ಸ್ನೇಹಿ ಬಿದಿರಿನಲ್ಲಿ ಚೆಂದದ ಮನೆ ಕಟ್ಟಿಸಿರುವ ಮಂಗಳೂರಿನ ವೈದ್ಯರೊಬ್ಬರ ಕುರಿತ ಸ್ಟೋರಿ ಇಲ್ಲಿದೆ.
ಬಿದಿರಿನಲ್ಲಿ ಮನೆ ಕಟ್ಟಿದ ವೈದ್ಯೆ:ಪರಿಸರ ಸಂರಕ್ಷಣೆಯ ಉದ್ದೇಶದಿಮದ ಮಂಗಳೂರಿನ ವೈದ್ಯೆ, ಸಂಜೀವಿನಿ ಗಾರ್ಡನ್ ಪ್ರೊಡಕ್ಟ್ನ ಮಾಲೀಕರಾದ ಡಾ.ಮೀರಾ ಅವರು ಮಂಗಳೂರಿನ ಕಣ್ಣೂರು ಬಳಿ ಬಿದಿರಿನಲ್ಲಿ ಮನೆಯನ್ನು ನಿರ್ಮಿಸಿದ್ದಾರೆ. ಕಣ್ಣೂರಿನ ನದಿ ತೀರದಲ್ಲಿರುವ ಈ ಬಿದಿರು ಮನೆ ವಿಶೇಷವಾಗಿ ಗಮನ ಸೆಳೆಯುತ್ತದೆ. ಈ ಮನೆ ನಿರ್ಮಾಣ ಮಾಡಿ ಎಂಟು ವರ್ಷ ಕಳೆದರೂ ಇಂದಿಗೂ ಯಾವುದೇ ಸಮಸ್ಯೆಯಿಲ್ಲದೆ ತನ್ನ ಆಕರ್ಷಣೆಯನ್ನು ಉಳಿಸಿಕೊಂಡು ಬಂದಿರುವುದು ಗಮನಾರ್ಹ.
ಮನೆ ನೋಡಲು ಬರುವ ಜನ: ಈ ಬಿದಿರು ಮನೆ ನೋಡಲು ತುಂಬಾ ಸುಂದರ. ಹೊರಗಿನಿಂದಲೇ ಆಕರ್ಷಕವಾಗಿರುವ ಈ ಮನೆಯ ಒಳಗೆ ಹೋಗುತ್ತಿದ್ದಂತೆ ಕಣ್ಮನ ಸೆಳೆಯುತ್ತದೆ. ಮನೆ ನೋಡಲು ಬರುವವರು ಈ ಮನೆಯ ಅಂದ ಚೆಂದವನ್ನು ಅಚ್ಚರಿಯಿಂದಲೇ ವೀಕ್ಷಿಸುತ್ತಾರೆ. ಈ ಮನೆಯ ತಳಪಾಯವನ್ನು ಕಾಂಕ್ರೀಟ್ ಪಿಲ್ಲರ್ನಿಂದ ರಚಿಸಲಾಗಿದೆ. ನೆಲಕ್ಕೆ ಮರವನ್ನು ಉಪಯೋಗಿಸಲಾಗಿದೆ. ಶೀಟ್ ಹಾಕಿ ಮುಚ್ಚಲಾಗಿದೆ. ಉಳಿದಂತೆ ಮೆಟ್ಟಿಲು, ಗೋಡೆ, ಬಾಗಿಲು ಮೊದಲಾದವುಗಳನ್ನು ಬಿದಿರಿನಿಂದಲೇ ಮಾಡಲಾಗಿದೆ. ಗೋಡೆಗೆ ಬಿದಿರಿನ ಫ್ಲೈವುಡ್ ಶೀಟ್ ಬಳಸಲಾಗಿದೆ.
ಪರಿಸರ ಸ್ನೇಹಿ ಮನೆ ನಿರ್ಮಾಣ ಮಾಡುವ ಉದ್ದೇಶದಿಂದಲೇ ಡಾ.ಮೀರಾ ಅವರು ಬಿದಿರಿನಿಂದ ಮನೆ ಕಟ್ಟಿದ್ದಾರೆ. ಇದಕ್ಕಾಗಿ ಕೇರಳದ ನಿರ್ಮಾಣ ಸಂಸ್ಥೆಯೊಂದನ್ನು ಸಂಪರ್ಕಿಸಿ ಈ ಮನೆ ನಿರ್ಮಿಸಿದ್ದಾರೆ. ನಿರ್ಮಾಣದ ಬಳಿಕ ಈ ಮನೆ ನಿರ್ವಹಣೆ ಮಾಡುವುದು ಅತ್ಯಗತ್ಯ. ಇದಕ್ಕಾಗಿ ಪ್ರತಿ ವರ್ಷ ಗೇರಿನ ಎಣ್ಣೆಯಿಂದ ಪಾಲಿಸ್ ಮಾಡಲಾಗುತ್ತದೆ. ಈ ಮನೆ 800 ಚದರಡಿಯಲ್ಲಿದ್ದು, ಇದರಲ್ಲಿ ವರಾಂಡ, ಹಾಲ್, ಅಡುಗೆ ಕೋಣೆ, ಒಂದು ಬೆಡ್ ರೂಂ ಮತ್ತು ವಾಷ್ ರೂಂ ವ್ಯವಸ್ಥೆ ಇದೆ. ಈ ಮನೆಯಲ್ಲಿ ಡಾ.ಮೀರಾ ಅವರು ವಾರಕ್ಕೆ ಎರಡು ದಿನ ಬಿಡುವು ಮಾಡಿಕೊಂಡು ಬಂದು ಕಾಲ ಕಳೆಯುತ್ತಾರೆ.
ಇದನ್ನೂ ಓದಿ: ಹಿಂದೂ ಮಹಾಸಭಾ ಗಣೇಶ ಮೆರವಣಿಗೆ: ವಿನಾಯಕನಿಗೆ ಸಿದ್ಧವಾದ 80 ಸಾವಿರ ರೂಪಾಯಿ ನೋಟಿನ ಹಾರ - Hindu Mahasabha Ganesh
ಈ ಬಗ್ಗೆ ಮಾತನಾಡಿದ ಡಾ.ಮೀರಾ ಅವರು 2016 ರಲ್ಲಿ ಈ ಮನೆ ನಿರ್ಮಾಣ ಮಾಡಲಾಗಿದೆ. ಮರಳು ಮತ್ತು ಸಿಮೆಂಟ್ ಇಲ್ಲದೆ ಪರಿಸರ ಸ್ನೇಹಿ ಮನೆ ಕಟ್ಟುವ ಚಿಂತನೆ ಮಾಡಿದ್ದೆ. ನೆಲದಿಂದ ಬಿದಿರು ಹಾಕಿದರೆ, ಅದರಲ್ಲಿ ಗೆದ್ದಲು ಬರುವ ಸಮಸ್ಯೆಯಾಗುವುದರಿಂದ ಕಾಂಕ್ರೀಟ್ ಪಿಲ್ಲರ್ ಮಾಡಿ ಅದರ ಮೇಲೆ ಬಿದಿರು ಮನೆ ನಿರ್ಮಾಣ ಮಾಡಲಾಗಿದೆ. ಇದನ್ನು ಇಬ್ಬರು ಕಾರ್ಮಿಕರು ಮಾತ್ರ ಕಟ್ಟಿದ್ದಾರೆ. ಮೇಲ್ಭಾಗಕ್ಕೆ ತೆಂಗಿನ ಗರಿಯನ್ನು ಉಪ್ಪು ನೀರಿನಲ್ಲಿ ಅದ್ದಿ ಅದನ್ನು ಇಟ್ಟು ಅದರ ಮೇಲೆ ಆಂಡಲೀನ್ ಶೀಟ್ ಹಾಕಲಾಗಿದೆ ಎಂದರು.
ಥೈಲ್ಯಾಂಡ್‌ನಲ್ಲಿ ಮೊದಲ ಆಚರಣೆ:ವಿಶ್ವ ಬಿದಿರು ದಿನವನ್ನು ಪ್ರಥಮವಾಗಿ 2009ರಲ್ಲಿ ಥೈಲ್ಯಾಂಡ್‌ನಲ್ಲಿ ಆಚರಿಸಲಾಯಿತು. ಪರಿಸರ ಸಂರಕ್ಷಣೆಗೆ, ಆರ್ಥಿಕವಾಗಿ ಪ್ರಬಲಗೊಳ್ಳಲು, ಆರೋಗ್ಯ, ನಿರ್ಮಾಣ ಕಾರ್ಯಕ್ಕೆ ಬಿದಿರು ಬಳಕೆಯಾಗುತ್ತದೆ. ಅಂತೆಯೇ ಪರಿಸರ ಸ್ನೇಹಿ ಬಿದಿರಿನ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ವಿಶ್ವ ಬಿದಿರು ದಿನ ಆಚರಿಸಲಾಗುತ್ತಿದೆ.
ಬಿದಿರಿನಲ್ಲಿ ಸುಂದರ ಮನೆ ಕಟ್ಟಿದ ವೈದ್ಯೆ (ETV Bharat) ಬಿದಿರು ಅತ್ಯಂತ ವೇಗವಾಗಿ ಬೆಳೆಯುವ ಸಸ್ಯಗಳಲ್ಲಿ ಒಂದಾಗಿದೆ. ಇದು ಮಣ್ಣಿನ ಇರೋಶನ್ ಅನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಕಾರ್ಬನ್ ಡೈಆಕ್ಸೈಡ್ ಅನ್ನು ಶೋಷಿಸಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಬಿದಿರು ಉತ್ಪನ್ನಗಳು ವಿವಿಧ ರೀತಿಯ ವಸ್ತುಗಳನ್ನು ತಯಾರಿಸಲು ಬಳಸಲಾಗುತ್ತವೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಕಟ್ಟಡ ನಿರ್ಮಾಣ, ಪೀಠೋಪಕರಣ ಮತ್ತು ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಇದು ಬಲವಾದ ಮತ್ತು ದೀರ್ಘಕಾಲಿಕ ವಸ್ತುಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ಬಿದಿರು ಮರುಬಳಕೆ ಮಾಡಬಹುದಾದ ಮತ್ತು ನವೀಕರಿಸಬಹುದಾದ ಸಂಪತ್ತಾಗಿದೆ. ಇದು ಪರಿಸರಕ್ಕೆ ಹಾನಿ ಮಾಡದಂತೆ ಬೆಳೆಯುತ್ತದೆ ಮತ್ತು ಬಳಸಲಾಗುತ್ತದೆ. ಈ ಕಾರಣದಿಂದ ಬಿದಿರುವಿನ ಮಹತ್ವ ಜನರಿಗೆ ತಿಳಿಯಬೇಕೆಂಬ ನೆಲೆಯಲ್ಲಿ ಸೆಪ್ಟೆಂಬರ್ 18 ನ್ನು ವಿಶ್ವ ಬಿದಿರು ದಿನ ಆಚರಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಡಾ.ಮೀರಾ ಅವರ ಈ ಪ್ರಯತ್ನ ಶ್ಲಾಘನೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಬಿದಿರಿನ ರಥದಲ್ಲಿ ಏಕದಂತ; ರಾಣೆಬೆನ್ನೂರಲ್ಲಿ ಭಕ್ತರ ಕಣ್ಮನ ಸೆಳೆಯುತ್ತಿರುವ ಗಣೇಶ - Bamboo chariot