ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಒಕ್ಕೂಟ ಅಧಿಕಾರಕ್ಕೆ ಬಂದರೆ ದೇಶದ ಪ್ರತೀ ಬಡ ಕುಟುಂಬಗಳ ಹಿರಿಯ ಮಹಿಳೆಯ ಖಾತೆಗೆ ತಲಾ 1 ಲಕ್ಷ ರೂ ಜಮೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಎಬ್ಬಿರುವ ವದಂತಿಗಳನ್ನು ನಂಬಿ ಖಾತೆ ತೆರೆಯಲು ಬೆಂಗಳೂರಿನ ಪ್ರಧಾನ ಅಂಚೆ ಕಚೇರಿಯ(ಜಿಪಿಒ) ಮುಂದೆ ಮಹಿಳೆಯರು ಸಾಲುಗಟ್ಟಿ ನಿಂತ ದೃಶ್ಯ ಬುಧವಾರ ಕಂಡುಬಂತು.
ಇಂಡಿಯನ್ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಖಾತೆ ತೆರೆಯಲು ಸಾವಿರಾರು ಮಹಿಳೆಯರು ಅಂಚೆ ಕಚೇರಿಯೆದುರು ಜಮಾಯಿಸುತ್ತಿದ್ದಾರೆ. ಐಪಿಪಿಬಿ ಅಕೌಂಟ್ ತೆರೆದರೆ ಮಾತ್ರ ಖಾತೆಗೆ ಹಣ ಹಾಕಲಾಗುತ್ತದೆ ಎಂಬ ವದಂತಿ ಹಬ್ಬಿದ್ದು, ಈ ಕಾರಣಕ್ಕೆ ಗುಂಪು ಗುಂಪಾಗಿ ಬರುತ್ತಿದ್ದಾರೆ. ಸಾವಿರಾರು ಮಹಿಳೆಯರು ಬರುತ್ತಿರುವ ಕಾರಣ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ತಪ್ಪು ಮಾಹಿತಿ- ಅಧಿಕಾರಿಗಳ ಸ್ಪಷ್ಟನೆ: "ಮೇ 31ರವರೆಗೆ ಮಾತ್ರ ಐಪಿಪಿಬಿ ಖಾತೆ ತೆರೆಯಲು ಅವಕಾಶವಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಖಾತೆಗೆ ಮಾತ್ರ 8,500 ರೂಪಾಯಿ ಜಮೆ ಆಗಲಿದೆ ಎಂದು ಮಹಿಳೆಯರು ತಪ್ಪು ಮಾಹಿತಿ ಪಡೆದುಕೊಂಡು ಬರುತ್ತಿದ್ದಾರೆ" ಎಂದು ಅಂಚೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಂಚೆ ಕಚೇರಿಯಲ್ಲಿ ಮಹಿಳೆಯರು (ETV Bharat) "ಪ್ರತೀ ದಿನ ಮುಂಜಾನೆ 4 ಗಂಟೆಗೆ ಕಚೇರಿ ಮುಂಭಾಗದಲ್ಲಿ ಬಂದು ಸರತಿಯಲ್ಲಿ ನಿಂತು, ಟೋಕನ್‌ಗಳನ್ನು ಪಡೆದು ಐಪಿಪಿಬಿ ಖಾತೆಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ ಇದು ಸುಳ್ಳು ಸುದ್ದಿ, ನಂಬಬೇಡಿ ಎಂದು ತಿಳಿಸಿ, ಕಚೇರಿಯ ಆವರಣದಲ್ಲಿ ಫಲಕವನ್ನೂ ಹಾಕಿದ್ದೇವೆ. ಮೈಕ್ ಮೂಲಕವೂ ತಿಳಿಸಲಾಗುತ್ತಿದೆ. ಹೀಗಿದ್ದರೂ ಮಹಿಳೆಯರು ನಮ್ಮ ಮಾತು ಕೇಳುತ್ತಿಲ್ಲ" ಎಂದು ಅವರು ತಿಳಿಸಿದರು.
"ಮೇ 6ರಿಂದ ಮೇ 29ರವರೆಗೆ ಬೆಂಗಳೂರಿನ ಜನರಲ್ ಪೋಸ್ಟ್ ಆಫಿಸನಲ್ಲೇ 8,604 ಖಾತೆಗಳನ್ನು ತೆರೆಯಲಾಗಿದೆ. ಇಂದು ಒಂದೇ ದಿನ 1282 ಖಾತೆಗಳು ಓಪನ್ ಆಗಿವೆ. ಇದಕ್ಕಾಗಿ ವಿಶೇಷವಾಗಿ 15 ಕೌಂಟರ್‌ಗಳನ್ನು ತೆರೆಯಲಾಗಿದೆ. ನಗರದ ಯಾವುದೇ ಅಂಚೆ ಕಚೇರಿಗೆ ಹೋದರೂ ಐಪಿಪಿಬಿ ಖಾತೆಯನ್ನು ತೆರೆಯುವ ಅವಕಾಶವಿದೆ. ಆದ್ದರಿಂದ ತಮ್ಮ ಅಕ್ಕಪಕ್ಕದ ಅಂಚೆ ಕಚೇರಿಗಳಲ್ಲೇ ಖಾತೆಗಳನ್ನು ಮಾಡಿಸಿಕೊಳ್ಳಬೇಕು. ಎಲ್ಲರೂ ಪ್ರಧಾನ ಅಂಚೆ ಕಚೇರಿಗೆ ಬಂದೇ ಖಾತೆ ತೆರೆಯುವ ಅಗತ್ಯವಿಲ್ಲ" ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲೇನಿದೆ?: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 'ಮಹಾಲಕ್ಷ್ಮಿ ಯೋಜನೆ' ಜಾರಿಗೆ ತಂದು, ದೇಶದ ಪ್ರತೀ ಬಡ ಕುಟುಂಬಕ್ಕೆ ಯಾವುದೇ ಷರತ್ತಿಲ್ಲದೇ 1 ಲಕ್ಷ ರೂಪಾಯಿ ಹಣಕಾಸು ನೆರವು ನೀಡಲಾಗುವುದು. ಈ ಹಣವನ್ನು ನೇರವಾಗಿ ಕುಟುಂಬದ ಹಿರಿಯ ಮಹಿಳೆಯ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು ಎಂದು ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಗೆ ಮುನ್ನ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ತಿಳಿಸಿದೆ.