ಬೆಂಗಳೂರು:ತಾಯಿಯಿಂದಲೇ ಇಬ್ಬರು ಮಕ್ಕಳು ಹತ್ಯೆಗೀಡಾದ ದಾರುಣ ಘಟನೆ ಮಂಗಳವಾರ ತಡರಾತ್ರಿ ಜಾಲಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಲಕ್ಷ್ಮೀ (9) ಹಾಗೂ ಗೌತಮ್ (7) ಕೊಲೆಯಾದ ಮಕ್ಕಳು ಎಂದು ತಿಳಿದು ಬಂದಿದೆ. ಕೊಲೆ ಬಳಿಕ ಮಹಿಳೆಯೇ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದಾಳೆ.
ಗಂಗಾದೇವಿ ಕೊಲೆ ಮಾಡಿರುವ ಆರೋಪಿ ತಾಯಿಯಾಗಿದ್ದು, ದಿಂಬಿನಿಂದ ಉಸಿರುಗಟ್ಟಿಸಿ ಕೊಂದಿದ್ದಾಳೆ ಎನ್ನಲಾಗಿದೆ. ದಿಂಬಿನಿಂದ ಉಸಿರುಗಟ್ಟಿಸಿ ಮಕ್ಕಳನ್ನು ಕೊಂದಿರುವ ಆರೋಪದ ಮೇಲೆ ತಾಯಿ ಗಂಗಾದೇವಿಯನ್ನು ಜಾಲಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂಲತಃ ಆಂಧ್ರಪ್ರದೇಶದವರಾದ ಗಂಗಾದೇವಿ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು. ಆರೋಪಿ ಗಂಗಾದೇವಿ ಖಾಸಗಿ ಕಂಪನಿಯೊಂದರ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರೆ, ಆಕೆಯ ಪತಿ ಬಿಬಿಎಂಪಿಯ ಗುತ್ತಿಗೆ ಆಧಾರದ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಮಾರ್ಚ್ ತಿಂಗಳಿನಲ್ಲಿ ಗಂಡನ ವಿರುದ್ಧ ಗಂಗಾದೇವಿಯೇ ನೀಡಿದ್ದ ದೂರಿನ ಅನ್ವಯ ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆತನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.