ಶಿವಮೊಗ್ಗ : ನಮ್ಮ ನಿಮ್ಮ ಮನೆಯಲ್ಲಿ ಉಪಯೋಗಕ್ಕೆ ಬಾರದೇ ಇರುವ ವಸ್ತುಗಳನ್ನು ಗುಜರಿಗೆ ಹಾಕುತ್ತೇವೆ. ಆದರೆ, ಇಂತಹ ಗುಜರಿ ವಸ್ತುಗಳನ್ನು ಪಡೆದ ಶಿವಮೊಗ್ಗದ ಸಂಸ್ಥೆಯೊಂದು ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಅಡಿಪಾಯ ಹಾಕುವ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿದೆ.
ಶಿವಮೊಗ್ಗದ ಇಲಿಯಾಜ್ ನಗರದಲ್ಲಿನ ಸಫಾ ಬೈತುಲ್ ಮಾಲ್ ಸಂಸ್ಥೆಯು ಗುಜರಿ ವ್ಯಾಪಾರ ನಡೆಸಿ, ಇದರಲ್ಲಿ ಬಂದ ಹಣದಲ್ಲಿ ಮಹಿಳೆಯರಿಗೆ ಉಚಿತವಾಗಿ ಟೈಲರಿಂಗ್ ಹೇಳಿ ಕೊಡುವ ಜೊತೆಗೆ ಕಂಪ್ಯೂಟರ್ ಶಿಕ್ಷಣವನ್ನೂ ನೀಡುತ್ತಿದೆ. ಈ ಸಂಸ್ಥೆಯು ಶಿವಮೊಗ್ಗದಲ್ಲಿ 2012ರಲ್ಲಿ ಪ್ರಾರಂಭವಾಯಿತು. ಅಲ್ಲಿಂದ ಮೊದಲು ಕೆ. ಆರ್ ಪುರಂನಲ್ಲಿ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿ ನೀಡಲು ಪ್ರಾರಂಭಿಸಿತು. ಈಗ ಶಿವಮೊಗ್ಗ ನಗರದಲ್ಲಿಯೇ ಮೂರು ಕಡೆ ತರಬೇತಿ ಕೇಂದ್ರ ನಡೆಸಿಕೊಂಡು ಬರುತ್ತಿದೆ. ಕಳೆದ ಒಂದು ವರ್ಷದಿಂದ ಈ ಸಂಸ್ಥೆಯು ಬೇಸಿಕ್ ಕಂಪ್ಯೂಟರ್ ತರಬೇತಿಯನ್ನೂ ಕೂಡಾ ನೀಡುತ್ತಿದೆ.
ಪ್ರತಿ ಸೆಂಟರ್ನಲ್ಲಿ 20 ಜನ ಮಹಿಳೆಯರಿಗೆ ತರಬೇತಿ : ಶಿವಮೊಗ್ಗದಲ್ಲಿ ಇರುವ ಮೂರು ತರಬೇತಿ ಕೇಂದ್ರಗಳಲ್ಲಿ ತಲಾ 20 ಜನ ಮಹಿಳೆಯರಿಗೆ ಮೂರು ತಿಂಗಳ ಕಾಲ ಹೊಲಿಗೆ ತರಬೇತಿಯನ್ನ ನಡೆಸಿಕೊಂಡು ಬರುತ್ತಿದೆ. ಇಲ್ಲಿ ಮಹಿಳೆಯರಿಗೆ ಕಟಿಂಗ್ ಮಾಡುವುದು, ಹೊಲಿಗೆ ಹಾಕುವುದು, ಬ್ಲೌಸ್, ಚೂಡಿದಾರ್, ಲೆಹಂಗಾ ಸೇರಿದಂತೆ ಮಹಿಳೆಯರ ಉಡುಪುಗಳ ರಚನೆಯನ್ನ ಹೇಳಿ ಕೊಡಲಾಗುತ್ತದೆ.
![Women pursuing computer education](https://etvbharatimages.akamaized.net/etvbharat/prod-images/11-01-2025/kn-smg-02-free-tailoringclass-premium-7204213updeate_11012025005409_1101f_1736537049_504.jpg)
ಉತ್ತಮ ತರಬೇತಿ : ತರಬೇತಿಗೆ ಬರುವ ಮಹಿಳೆಯರಿಗೆ ಉತ್ತಮವಾದ ರೀತಿಯಲ್ಲಿ ಟ್ರೈನಿಂಗ್ ಕೊಡಲಾಗುತ್ತಿದೆ. ಇಲ್ಲಿ ಹೊಲಿಗೆ ಹಾಕುವುದು ಅರ್ಥವಾಗದೇ ಹೋದಲ್ಲಿ ಅವರಿಗೆ ಪ್ರತ್ಯೇಕವಾಗಿ ಹೇಳಿ ಕೊಡಲಾಗುತ್ತದೆ. ಇಲ್ಲಿಗೆ ಹೆಚ್ಚಾಗಿ ಗೃಹಿಣಿಯರೇ ಬರುವುದರಿಂದ ಅವರಿಗೆ ಸರಿಯಾಗಿ ಅರ್ಥವಾಗುವಂತೆ ತರಬೇತಿ ಕೇಂದ್ರದ ಟೀಚರ್ಗಳು ಹೇಳಿ ಕೊಡುತ್ತಾರೆ. ಇಲ್ಲಿಗೆ ಬಂದ ಗೃಹಿಣಿಯರು ಹೊಲಿಗೆಯಲ್ಲಿ ಪರಿಣಿತರಾಗುವಂತೆ ಹೇಳಿಕೊಡಲಾಗುತ್ತದೆ. ಇದರಿಂದ ನುರಿತ ಶಿಕ್ಷಕಿಯರನ್ನೇ ನೇಮಕ ಮಾಡಲಾಗಿದೆ. ಇವರಿಗೆಲ್ಲಾ ಉತ್ತಮವಾದ ಸಂಬಳವನ್ನೇ ನೀಡಲಾಗುತ್ತಿದೆ. ಅಲ್ಲದೆ ತರಬೇತಿ ಮುಗಿದ ಮೇಲೆ ಅವರಿಗೆ ಸರ್ಟಿಫಿಕೇಟ್ ಸಹ ನೀಡಲಾಗುತ್ತದೆ.
![free tailoring training](https://etvbharatimages.akamaized.net/etvbharat/prod-images/11-01-2025/kn-smg-02-free-tailoringclass-premium-7204213updeate_11012025005409_1101f_1736537049_581.jpg)
ತರಬೇತಿ ಅಲ್ಲದೇ ಟೈಲರಿಂಗ್ ಶಾಪ್ ತೆರೆಯಲು ಸಹಾಯ : ಸಫಾ ಬೈತುಲ್ ಮಾಲ್ರವರ ಬಳಿ ಟೈಲರಿಂಗ್ ಕಲಿತು ಹೊರ ಹೋಗುವವರಿಗೆ ಅವರು ಮುಂದೆ ಚೆನ್ನಾಗಿ ಜೀವನ ನಡೆಸಲು ಬೇರೆಯವರ ಬಳಿ ಕೆಲಸಕ್ಕೆ ಹೋಗಲು ಇಷ್ಟಪಡದೆ, ತಾವೇ ಸ್ವತಃ ಶಾಪ್ ತೆರೆಯಲು ಬಯಸಿದರೆ ಅವರಿಗೆ ಹಣದ ಸಹಾಯವನ್ನು ಮಾಡುತ್ತಾರೆ. ಬ್ಯಾಂಕ್ ಮೂಲಕ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡಿಸುತ್ತಾರೆ. ಎಲ್ಲಾ ಧರ್ಮದವರಿಗೂ ಇಲ್ಲಿ ತರಬೇತಿ ನೀಡಲಾಗುತ್ತಿದೆ.
![Safa Baitul Maal Institute](https://etvbharatimages.akamaized.net/etvbharat/prod-images/11-01-2025/kn-smg-02-free-tailoringclass-premium-7204213updeate_11012025005409_1101f_1736537049_497.jpg)
ಗುಜರಿ ವ್ಯಾಪಾರ ಹೇಗೆ ನಡೆಯುತ್ತದೆ ? : ಸಫಾ ಬೈತುಲ್ ಮಾಲ್ರವರು ಶಿವಮೊಗ್ಗ ನಗರದಲ್ಲಿನ ಪ್ರತಿ ಗಲ್ಲಿ ಗಲ್ಲಿ, ಬಡಾವಣೆಗೆ ತಮ್ಮ ಗಾಡಿಯನ್ನು ತೆಗೆದುಕೊಂಡು ಹೋಗುತ್ತಾರೆ. ಈ ವೇಳೆ ತಮ್ಮ ವಾಹನದ ಮೈಕ್ನಲ್ಲಿ ತಾವು ಮಾಡುತ್ತಿರುವ ಕಾರ್ಯಕ್ಕೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾರೆ. ಇದನ್ನು ಕೇಳಿದವರು ತಮ್ಮ ಮನೆಯಲ್ಲಿ ಇರುವ ಹಳೆಯ ವಸ್ತುಗಳನ್ನು ತಂದು ಕೊಡುತ್ತಾರೆ. ಇದನ್ನೆಲ್ಲ ಉಚಿತವಾಗಿ ಜನರಿಂದ ಪಡೆಯುವ ಸಂಸ್ಥೆಯು ಅದನ್ನು ಮಾರಾಟ ಮಾಡಿ, ಬಂದ ಹಣದಲ್ಲಿ ಉಚಿತ ಹೊಲಿಗೆ ತರಬೇತಿ, ಗಣಕಯಂತ್ರದ ತರಬೇತಿ ನೀಡುತ್ತದೆ. ಇದರ ಜೊತೆಗೆ ಪ್ರತಿ ತಿಂಗಳ ಔಷಧ ಖರೀದಿಸಲು ಸುಮಾರು 10 ಜನ ಬಡವರಿಗೆ ಧನ ಸಹಾಯ ಮಾಡುತ್ತಿದೆ. ರಂಜಾನ್ನಲ್ಲಿ ಕಡುಬಡವರಿಗೆ ದಿನಸಿ ಕಿಟ್ ಒದಗಿಸುವ ಮೂಲಕ ಸಮಾಜ ಸೇವೆ ಮಾಡಿಕೊಂಡು ಬಂದಿದೆ.
ಈ ಬಗ್ಗೆ ಸಫಾ ಬೈತುಲ್ ಮಾಲ್ ಕಾರ್ಯದರ್ಶಿ ಫಾರೂಕ್ ಅಹಮದ್ ಅವರು ಮಾತನಾಡಿ, ''ಈ ಸಂಸ್ಥೆಯು 2012ರಲ್ಲಿ ಪ್ರಾರಂಭಿಸಲಾಯಿತು. ಶಿವಮೊಗ್ಗ ನಗರದಲ್ಲಿ ಮೂರು ಕಡೆ ಹೊಲಿಗೆ ತರಬೇತಿ ಕೇಂದ್ರ ಹಾಗೂ ಇಲಿಯಾಸ್ ನಗರದಲ್ಲಿ ಕಂಪ್ಯೂಟರ್ ತರಬೇತಿ ಕೇಂದ್ರ ತೆರೆಯಲಾಗಿದೆ. ಇದಲ್ಲದೇ ಬೇಸಿಗೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಚಳಿಗಾಲದಲ್ಲಿ ನಿರ್ಗತಿಕರಿಗೆ ಬೆಡ್ ಶೀಟ್ ನೀಡುತ್ತೇವೆ. ರಂಜಾನ್ ಉಪವಾಸ ಆಚರಣೆಯ ವೇಳೆ ಸುಮಾರು 300 ಜನರಿಗೆ ಸುಮಾರು 2.500 ರೂ ದಿನಸಿ ಕಿಟ್ ನೀಡಲಾಗುತ್ತದೆ. ಸಫಾ ಟೈಲರಿಂಗ್ ಕೇಂದ್ರದಲ್ಲಿ ಮುಸ್ಲಿಂರಷ್ಟೇ ಅಲ್ಲದೆ ಹಿಂದೂಗಳು ಸಹ ಬಂದು ಕಲಿಯುತ್ತಿದ್ದಾರೆ. ಒಂದು ತರಬೇತಿ ಕೇಂದ್ರದಲ್ಲಿ 20 ಜನರಂತೆ ಒಂದು ಬಾರಿ 60 ಜನ ಟೈಲರಿಂಗ್ ಕಲಿತು ಹೋಗುತ್ತಿದ್ದಾರೆ. ಇಲ್ಲಿ ಟೈಲರಿಂಗ್ ಕಲಿತು ಅವರ ಜೀವನ ನಡೆಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಹಕಾರಿ ಆಗಿದೆ'' ಎಂದಿದ್ದಾರೆ.
![Safa Baitul Maal Institute](https://etvbharatimages.akamaized.net/etvbharat/prod-images/11-01-2025/kn-smg-02-free-tailoringclass-premium-7204213_11012025004155_1101f_1736536315_457.jpg)
ಮನೆಯಲ್ಲಿಯೇ ಈಗ ಟೈಲರಿಂಗ್ ಮಾಡುತ್ತಿದ್ದೇವೆ : ತರಬೇತಿ ಪಡೆದ ತಬ್ಸಮ್ ಮಾತನಾಡಿ, ''ನಾಜೀಮಾ ಎಂಬ ಟೀಚರ್ ನಮಗೆ ತುಂಬ ಚೆನ್ನಾಗಿ ಟೈಲರಿಂಗ್ ಹೇಳಿಕೊಟ್ರು. ನಾವು ಸಹ ಚೆನ್ನಾಗಿಯೇ ಕಲಿತಿದ್ದೇವೆ. ಸಫಾ ಬೈತುಲ್ ಮಾಲ್ನವರು ಸಹ ನಮಗೆ ಕಲಿಯಲು ಅವಕಾಶ ಮಾಡಿ ಕೊಟ್ಟಿದ್ದಾರೆ. ಇಲ್ಲಿ ಟೈಲರಿಂಗ್ ಜೊತೆಗೆ ಕಂಪ್ಯೂಟರ್ ತರಬೇತಿಯನ್ನೂ ನೀಡುತ್ತಿದ್ದಾರೆ. ನಮ್ಮಂತಹ ಗೃಹಿಣಿಯವರಿಗೆ ಇದರಿಂದ ತುಂಬಾ ಅನುಕೂಲಕರವಾಗುತ್ತಿದೆ. ನಾವು ಸಹ ಇಲ್ಲಿ ತುಂಬಾ ಪ್ರಯತ್ನ ಪಟ್ಟು ಟೈಲರಿಂಗ್ ಕಲಿತಿದ್ದೇವೆ. ಮನೆಯಲ್ಲಿಯೇ ಕುಳಿತು ಚೆನ್ನಾಗಿ ಕಲಿತಿದ್ದೇವೆ. ಇಲ್ಲಿ ಕಲಿತಿದ್ದು ಖುಷಿಯಾಗಿದೆ. ಮನೆಯಲ್ಲಿಯೇ ಈಗ ಟೈಲರಿಂಗ್ ಮಾಡುತ್ತಿದ್ದೇವೆ. ಮುಂದೆ ನಾನು ಟೈಲರಿಂಗ್ ಶಾಪ್ ತೆರೆಯಬೇಕೆಂದಿದ್ದೇನೆ. ಇದಕ್ಕೆ ಸಫಾ ಮಾಲ್ನವರು ಸಹಾಯ ಮಾಡಿದರೆ ಅನುಕೂಲವಾಗುತ್ತದೆ'' ಎಂದಿದ್ದಾರೆ.
![Safa Baitul Maal Institute](https://etvbharatimages.akamaized.net/etvbharat/prod-images/11-01-2025/kn-smg-02-free-tailoringclass-premium-7204213_11012025004155_1101f_1736536315_478.jpg)
''ನಾಜೀಮಾ ಅವರು ನಮಗೆ ತುಂಬಾ ಚೆನ್ನಾಗಿ ಟೈಲರಿಂಗ್ ಕಲಿಸಿದ್ದರು. ಕಳೆದ ಮೂರು ತಿಂಗಳಿನಿಂದ ನಾವು ಸಹ ಚೆನ್ನಾಗಿಯೇ ಕಲಿತಿದ್ದೇವೆ. ಕೆಲ ವೈದ್ಯರ ಕೈ ಗುಣ ಚೆನ್ನಾಗಿ ಇರುತ್ತದೆ ಎಂದು ಎಲ್ಲರೂ ಅವರ ಬಳಿಯೇ ಹೋಗುತ್ತಾರೆ. ಅದೇ ರೀತಿ ನಾಜೀಮಾ ಮೇಡಂರವರು ಸಹ ನಮಗೆ ಚೆನ್ನಾಗಿಯೇ ಹೇಳಿಕೊಟ್ಟಿದ್ದಾರೆ. ಇವರ ಬಳಿ ಕಟಿಂಗ್, ಚೂಡಿದಾರ್, ಬ್ಲೌಸ್ ಹೊಲಿಯುವುದನ್ನು ಕಲಿತಿದ್ದೇನೆ. ನಾನು ಮೊದಲು ಬೇರೆ ಕಡೆ ಹೋದಾಗ ಅವರು ಹೇಳಿಕೊಟ್ಟಿದ್ದು ನನ್ನ ತಲೆಗೆ ಹೋಗುತ್ತಿರಲಿಲ್ಲ. ನಾಜೀಮಾ ಮೇಡಂರವರು ಹೇಳಿ ಕೊಟ್ಟಿದ್ದು ಚೆನ್ನಾಗಿ ತಲೆಗೆ ಹೋಗಿದೆ. ಇದರಿಂದ ನಾನು ಚೆನ್ನಾಗಿ ಹೊಲಿಗೆ ಕಲಿತಿದ್ದೇನೆ'' ಎಂದು ತರಬೇತಿ ಪಡೆದ ಮಹಿಳೆ ಲೋಲಾಕ್ಷಿ ಹೇಳಿದರು.
ಯಾರ ಹಂಗಿಲ್ಲದೇ ಬದುಕಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ : ಈ ಬಗ್ಗೆ ಸುಜಾತ ಎಂಬುವವರು ಮಾತನಾಡಿ, ''ಕಳೆದ ಮೂರು ತಿಂಗಳಿನಿಂದ ನಾವು ಟೈಲರಿಂಗ್ ಕಲಿತಿದ್ದೇವೆ. ಇಲ್ಲಿ ಚೂಡಿದಾರ್, ಬ್ಲೌಸ್, ಲೆಹಂಗಾ, ಧೂತಿ ಹೊಲಿಯುವುದನ್ನು ಕಲಿಸಿದ್ದಾರೆ. ನಾವು ಸಹ ಮನೆಯಲ್ಲಿ ಪ್ರಾಕ್ಟಿಸ್ ಮಾಡುತ್ತಿದ್ದೇವೆ. ಮುಂದೆ ನಾವು ಸಹ ಟೈಲರಿಂಗ್ ಅಂಗಡಿ ತೆರೆದು ನಡೆಸಿಕೊಂಡು ಹೋಗುವ ಅವಕಾಶ ಕಲ್ಪಿಸಿದ್ದಾರೆ. ಮಹಿಳೆಯರಿಗೆ ಒಂದು ಒಳ್ಳೆಯ ವೇದಿಕೆ ಸಿಕ್ಕಿದೆ. ಈ ರೀತಿ ಕಲಿಯುವುದರಿಂದ ಯಾರ ಹಂಗಿಲ್ಲದೆ ಬದುಕಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ'' ಎಂದಿದ್ದಾರೆ.
ಬಡ್ಡಿ ಇಲ್ಲದೆ ಧನ ಸಹಾಯವನ್ನು ಮಾಡಿಕೊಡುತ್ತಾರೆ : ''ಇಲ್ಲಿ ಉತ್ತಮ ತರಬೇತಿ ಹೊಂದಿದ ಟೈಲರಿಂಗ್ ಟೀಚರ್ಸ್ ಇದ್ದಾರೆ. ಯಾರೇ ಯಾವುದೇ ಸಮಯದಲ್ಲಿ ಬಂದು ಕೇಳಿದ್ರು ಸಹ ಅವರಿಗೆ ಹೇಳಿ ಕೊಡುತ್ತೇವೆ. ಈಗ ಉಚಿತವಾಗಿ ಯಾರೂ ಏನೂ ಕೊಡಲ್ಲ. ಆದ್ರೆ ಸಫಾ ಬೈತುಲ್ ಮಾಲ್ರವರು ಉಚಿತವಾಗಿ ಟೈಲರಿಂಗ್ ಹೇಳಿ ಕೊಡುತ್ತಿದ್ದಾರೆ. ಇಲ್ಲಿ ಕೇವಲ ಮುಸ್ಮಿಮರಿಗಷ್ಟೇ ಅಲ್ಲದೆ, ಯಾವುದೇ ಜಾತಿ- ಭೇದವಿಲ್ಲದೆ ಎಲ್ಲರಿಗೂ ಸಹ ಹೇಳಿಕೊಡುತ್ತಾರೆ. ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿ ಎಂದು ತರಬೇತಿ ನೀಡಲಾಗುತ್ತಿದೆ. ಕನ್ನಡ ಬಾರದೆ ಇದ್ರೂ ಸಹ ಕನ್ನಡ ಕಲಿತು ಹೇಳಿ ಕೊಡುತ್ತಿದ್ದಾರೆ. ಮುಂದೆ ಅಂಗಡಿ ತೆರೆಯುವುದಾರೆ ಅವರಿಗೆ ಬಡ್ಡಿ ಇಲ್ಲದೆ ಧನ ಸಹಾಯವನ್ನು ಮಾಡಿಕೊಡುತ್ತಾರೆ'' ಎನ್ನುತ್ತಾರೆ ಶಿಕ್ಷಕಿ ಸೀಮಾ.
''ನಾವು ಇಲ್ಲಿ ಕೇವಲ ಹಳೆಯ ಬಟ್ಟೆಯನ್ನೇ ನೀಡುತ್ತಿದ್ದೇವೆ ಅಷ್ಟೆ. ದೇವರು ನಮಗೆ ಕೊಟ್ಟಿದ್ದನ್ನು ನಾವು ಬಡವರ ಅನುಕೂಲಕ್ಕೆ ನೀಡುತ್ತಿದ್ದೇವೆ. ನಮಗೆ ಹೊಸದನ್ನೆ ಕೊಡಬೇಕು ಅಂತ ಇದೆ. ಆದರೆ ದೇವರು ನಮಗೆ ಏನ್ ನೀಡಿದ್ದಾರೋ ಅದನ್ನು ನಾವು ನೀಡುತ್ತಿದ್ದೇವೆ'' ಎನ್ನುತ್ತಾರೆ ಸ್ಕ್ರಾಪ್ ವಸ್ತು ನೀಡಿದ ಬೀಬಿ ಕುಬ್ರಾ.
ಇದನ್ನೂ ಓದಿ : ರೈತ ಉತ್ಪಾದಕ ಸಂಸ್ಥೆಯಿಂದ ಅನ್ನದಾತರಿಗೆ ಮಿಶ್ರ ಬೇಸಾಯದ ತರಬೇತಿ ; ನಿತ್ಯ ಆದಾಯಕ್ಕೆ ಆಸರೆ - MIXED FARMING