ಕರ್ನಾಟಕ

karnataka

ETV Bharat / state

ಬಿಜೆಪಿ ಸೇರುತ್ತೇನೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲ್ಲ: ಸಂಸದೆ ಸುಮಲತಾ ಘೋಷಣೆ - MP Sumalatha

ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್​ ಅವರು 3 ತಿಂಗಳ ಬಳಿಕ ಮಹತ್ವದ ರಾಜಕೀಯ ನಿರ್ಧಾರವನ್ನು ಪ್ರಕಟಿಸಿದರು.

Etv BharatWill join BJP, not contest Lok Sabha elections: MP Sumalatha announce
Etv BharatWill join BJP, not contest Lok Sabha elections: MP Sumalatha announce

By ETV Bharat Karnataka Team

Published : Apr 3, 2024, 1:03 PM IST

Updated : Apr 3, 2024, 3:45 PM IST

ಮಂಡ್ಯ:ರಾಜ್ಯದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಪಕ್ಷೇತರ ಸಂಸದೆ ಸುಮಲತಾ ಅವರ ನಿರ್ಣಯವು ಇಂದು (ಬುಧವಾರ) ಹೊರಬಿದ್ದಿದೆ. ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ. ಬಿಜೆಪಿ - ಜೆಡಿಎಸ್​ ಮೈತ್ರಿ ಅಭ್ಯರ್ಥಿ ಹೆಚ್​ಡಿ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುವುದಾಗಿ ಅವರು ಘೋಷಿಸಿದರು.

ಮಂಡ್ಯದ ಕಾಳಿಕಾಂಬ ದೇವಸ್ಥಾನದಲ್ಲಿ ಇಂದು ನಡೆದ ಬೆಂಬಲಿಗರ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡ ಸುಮಲತಾ ಅವರು, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಾತ್ರ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ನಾನು ಕಣಕ್ಕಿಳಿಯುವುದಿಲ್ಲ. ಆದರೆ, ಮಂಡ್ಯದ ನಂಟನ್ನು ನಾನು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಶೀಘ್ರವೇ ಬಿಜೆಪಿ ಸೇರ್ಪಡೆ:ಇದೇ ವೇಳೆ, ತಾವು ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ಸೇರುವೆ ಎಂದು ಘೋಷಿಸಿದರು. ಪಕ್ಷೇತರ ಅಭ್ಯರ್ಥಿಯಾಗಿ ನಾನು ಕೈಲಾದ ಮಟ್ಟಿಗೆ ಕೆಲಸ ಮಾಡಿದ್ದೇನೆ. ರಾಜಕೀಯ ಧ್ರುವೀಕರಣದಲ್ಲಿ ಕೆಲ ನಿರ್ಧಾರಗಳನ್ನು ಕೈಗೊಳ್ಳಬೇಕಾಗಿದ್ದು, ಬಿಜೆಪಿ ಸೇರುವುದಾಗಿ ತಿಳಿಸಿದರು.

ಚಿಕ್ಕಬಳ್ಳಾಪುರ, ಬೆಂಗಳೂರು ಉತ್ತರ, ಮೈಸೂರು ಕ್ಷೇತ್ರದಲ್ಲಿ ಚುನಾವಣೆ ಸ್ಪರ್ಧೆ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಮಂಡ್ಯದಿಂದ ನಾನು ದೂರ ಉಳಿಯಲು ಇಷ್ಟವಿಲ್ಲದ ಕಾರಣ ಆಫರ್​ ನಿರಾಕರಿಸಿದೆ. ಮಂಡ್ಯ ಕ್ಷೇತ್ರ ನನ್ನ ತವರು. ಹೀಗಾಗಿ ಇಲ್ಲಿನ ಜನರ ಪ್ರೀತಿಯನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ಮುಂದಿನ ದಿನಗಳಲ್ಲಿಯೂ ನಾನು ಕ್ಷೇತ್ರದ ಜನರ ಸೇವೆ ಮಾಡುವೆ ಎಂದರು.

ಮಂಡ್ಯವನ್ನು ಬಿಡುವ ಪ್ರಶ್ನೆಯೇ ಇಲ್ಲ: ಪಕ್ಷೇತರ ಸಂಸದೆಯಾದರೂ 4 ಸಾವಿರ ಕೋಟಿ ರೂ. ಅನುದಾನ ಕೊಟ್ಟಿದ್ದು ಬಿಜೆಪಿ. ಪ್ರತಿ ವಿಷಯದಲ್ಲೂ ನನ್ನನ್ನು ವಿಶ್ವಾಸಕ್ಕೆ ಪಡೆದರು. ನಿಮ್ಮ ನಾಯಕತ್ವ ಬೇಕು ಎಂದು ಸ್ವತಃ ಪ್ರಧಾನಿ ನರೇಂದ್ರ ಮೋದಿ ನನಗೆ ಹೇಳಿದರು. ನಾಯಕತ್ವ ಬೆಳೆಸುವ ಗುಣ ಬಿಜೆಪಿಯಲ್ಲಿದೆ. ಭಾರತವನ್ನು ಇಡೀ ಪ್ರಪಂಚ ತಿರುಗಿ ನೋಡುವಂತೆ ಮೋದಿ ಮಾಡಿದ್ದಾರೆ. ಮೋದಿ ಅವರದ್ದು ಅಭಿವೃದ್ಧಿ ಮಂತ್ರ. ಒಂದೇ ಒಂದು ಕಳಂಕ ಅವರ ಮೇಲಿಲ್ಲ. ಅವರ ನಾಯಕತ್ವದಲ್ಲಿ ಮುನ್ನಡೆಯುತ್ತೇನೆ ಎಂದು ಸುಮಲತಾ ಅವರು ಹೇಳಿದರು.

ನಮ್ಮ ಜಿಲ್ಲೆಯ ಅಭಿವೃದ್ಧಿಯೇ ನನ್ನ ಸ್ವಾರ್ಥ:ಎಂಪಿ, ಎಂಎಲ್‌ಎ ಸ್ಥಾನ ಸಿಗದಿದ್ರೆ ಬಿಜೆಪಿ ಸೇರಲ್ಲ ಎಂದು ಕೆಲವರು ಹೇಳುತ್ತಿದ್ದರು. ಆದರೆ, ಮಂಡ್ಯ ಕ್ಷೇತ್ರವನ್ನು 'ಮೈತ್ರಿಗೆ' ಬಿಟ್ಟುಕೊಟ್ಟು ಬಿಜೆಪಿ ಸೇರುವ ನಿರ್ಧಾರ ಮಾಡಿದ್ದೇನೆ. ನನ್ನ ಕಾರ್ಯಕರ್ತರು, ಅಭಿಮಾನಿಗಳಿಗೆ ಶಕ್ತಿ ತುಂಬಲು ಈ ನಿರ್ಧಾರ ಮಾಡಿದ್ದೇನೆ. ಪಕ್ಷೇತರ ಸ್ಪರ್ಧೆ ಬೇಡ, ಕಾಂಗ್ರೆಸ್‌ಗೆ ನನ್ನ ಅವಶ್ಯಕತೆ ಇಲ್ಲ. ಬದಲಾದ ಪರಿಸ್ಥಿತಿ, ಸನ್ನಿವೇಶವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಹಠ ಸಾಧನೆ ಮಾಡುವ ಉದ್ದೇಶ ಇದ್ದಿದ್ದರೆ ಪಕ್ಷೇತರವಾಗಿ ಸ್ಪರ್ಧೆ ಮಾಡಬಹುದು. ಅದರಿಂದ ಯಾರಿಗೆ ಲಾಭ ಇದೆ? ಇಲ್ಲಿ ನನ್ನ ಸ್ವಾರ್ಥ ಏನೂ ಇಲ್ಲ. ಲಾಭಕ್ಕಾಗಿ ಯೋಚಿಸಿದ್ದರೆ ಬೇರೆ ಕ್ಷೇತ್ರ ಆಯ್ಕೆ ಮಾಡಬಹುದಿತ್ತು. ಬಂದ ಅವಕಾಶಗಳನ್ನು ಮಂಡ್ಯಕ್ಕಾಗಿ ಬಿಟ್ಟಿದ್ದೇನೆ. ರಾಜಕೀಯ ಮಾಡಿದ್ರೆ ಮಂಡ್ಯದಲ್ಲಿ ಮಾತ್ರ ಎಂದು ನಿರ್ಧಾರ ಮಾಡಿದ್ದೇನೆ. ಅಸಂಖ್ಯಾತ ಅಂಬರೀಶ್​ ಅಭಿಮಾನಿಗಳನ್ನ ಬಿಟ್ಟು ಹೋದರೆ ಮಂಡ್ಯ ಸೊಸೆ ಅನಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ಮಂಡ್ಯ ಸೊಸೆ ಸ್ಥಾನ ಶಾಶ್ವತ:ಕಾಂಗ್ರೆಸ್‌ ಸೇರಿ ಎಂದು ಕೆಲವರು ಹೇಳಿದ್ದೀರಿ. ರಾಜಕೀಯ ಒಳ ಸುಳಿಗಳು ನಿಮಗೆ ಅರ್ಥವಾಗಲ್ಲ. ಸುಮಲತಾ ಅವಶ್ಯಕತೆ ಕಾಂಗ್ರೆಸ್‌ಗೆ ಇಲ್ಲ ಎಂದು ಕೆಲ ನಾಯಕರು ಹೇಳಿದ್ದಾರೆ. ಅಂಬರೀಶ್ ಇದ್ದಾಗಲೂ ಇದೇ ರೀತಿ ತೊಂದರೆ ಕೊಟ್ಟರು ಎಂದಾಗ, ಬೆಂಬಲಿಗರು ಡಿಸಿಎಂ ಡಿಕೆಶಿಯೇ ಎಂದು ಕೂಗಿದರು. ನನಗೆ ಗೌರವ ಇಲ್ಲದ ಕಾಂಗ್ರೆಸ್‌ಗೆ ಹೋಗಲು ಹೇಳಬೇಡಿ. ನನ್ನ ಸ್ಥಾನಕ್ಕೆ ಬೇರೆಯವರು ಬರಬಹುದು, ಮಂಡ್ಯ ಸೊಸೆ ಎನ್ನುವ ಸ್ಥಾನ ಶಾಶ್ವತ ಎಂದು ಸುಮಲತಾ ಅವರು ಭಾವುಕರಾಗಿ ಮಾತನಾಡಿದರು.

ಕೊನೆ ಉಸಿರವರೆಗೂ ನಿಮ್ಮ ಆಶೀರ್ವಾದ ಮರೆಯಲ್ಲ:ಕಳೆದ ಚುನಾವಣೆಯಲ್ಲಿ ಬಿಜೆಪಿ ನನಗೆ ಬೆಂಬಲ ನೀಡಿತ್ತು. 2023ರಲ್ಲಿ ನಾನು ಬಿಜೆಪಿಗೆ ಬೆಂಬಲ ನೀಡಿದ್ದೆ. ಇವತ್ತು ಜೆಡಿಎಸ್ ಜೊತೆ ಮೈತ್ರಿಯಾಗಿದೆ. ಪರಿಸ್ಥಿತಿ ಬದಲಾಗಿದೆ. ಕೊನೆಯ ಗಳಿಗೆವರೆಗೂ ಮಂಡ್ಯ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನಿಸಿತು. ಬೇರೆ ಬೇರೆ ಸಲಹೆ, ಅವಕಾಶಗಳು ಬಂದರೂ ತಿರಸ್ಕರಿಸಿದೆ. ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ಮೈಸೂರಿನಲ್ಲಿ ಸ್ಪರ್ಧೆಗೆ ಸೂಚಿಸಿದ್ದರು. ಆದರೆ, ಮಂಡ್ಯ ಬಿಟ್ಟು ನಾನು ಎಲ್ಲೂ ಹೋಗಲ್ಲ. ಇದ್ರೂ, ಸತ್ರೂ, ಗೆದ್ದರು, ಸೋತ್ರೂ ಮಂಡ್ಯಾನೆ ಎಂದು ಸುಮಲತಾ ಖಡಕ್ಕಾಗಿ ಹೇಳಿದರು.

ಇದನ್ನೂ ಓದಿ:ಸಹಕಾರ ಕೋರಿ ಸುಮಲತಾ ಅಂಬರೀಶ್​ ಭೇಟಿಯಾದ ಕುಮಾರಸ್ವಾಮಿ - HDK MEETS SUMALATHA

Last Updated : Apr 3, 2024, 3:45 PM IST

ABOUT THE AUTHOR

...view details